ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವರದಿ ಆಧಾರದಲ್ಲಿ ಬಿಪಿಎಲ್ ಚೀಟಿಗಳ ರದ್ದತಿ ಪ್ರಕ್ರಿಯೆ ಶುರುವಾಗಿದೆ. ಇದರಿಂದಾಗಿ ಇನ್ನಷ್ಟು ಕಾರ್ಡ್ ರದ್ದು ಅಥವಾ ಎಪಿಎಲ್‌ಗೆ ಪರಿವರ್ತನೆಗೊಳ್ಳುವ ಸಾಧ್ಯತೆ ಇದೆ.
ಸಮೀಕ್ಷೆ ಸಂದರ್ಭದಲ್ಲಿ ಕೆಲವರು, ಧರ್ಮ, ಜಾತಿ, ಉಪಜಾತಿ, ಶೈಕ್ಷಣಿಕ, ಔದ್ಯೋಗಿಕ, ಆದಾಯ, ಚರಾಸ್ತಿ, ಸ್ಥಿರಾಸ್ತಿ, ಆಧಾರ್ ಮತ್ತು ಪಡಿತರ ಚೀಟಿ ಸಂಖ್ಯೆ ಸೇರಿ ಇತ್ಯಾದಿ ಮಾಹಿತಿ ಕೊಟ್ಟಿದ್ದಾರೆ. ಇನ್ನೂ ಕೆಲವರು ಬಿಪಿಎಲ್ ಮಾಹಿತಿ ನೀಡಲು ಹಿಂದೇಟು ಹಾಕಿದ್ದಾರೆ. ಆದರೆ, ಆಧಾರ್ ಸಂಖ್ಯೆ ನಮೂದಿಸಿದರೆ ಕುಟುಂಬದವರು ಪಡೆಯುತ್ತಿರುವ ಸರ್ಕಾರಿ ಸೌಲಭ್ಯದ ವಿವರ ಲಭ್ಯವಾಗುತ್ತದೆ. ಅಲ್ಲದೆ, ಈ ವರದಿಯಲ್ಲಿ ಆದಾಯ ಜಾಸ್ತಿ ಇರುವವರು, ಕಾರು ಹೊಂದಿರುವವರು, ಜಿಎಸ್‌ಟಿ ಅಥವಾ ಆದಾಯ ತೆರಿಗೆ ಪಾವತಿಸುತ್ತಿರುವವರು ಪಡೆದಿರುವ ಬಿಪಿಎಲ್ ಚೀಟಿ ಮಾಹಿತಿ ಆಹಾರ ಇಲಾಖೆಗೆ ರವಾನೆಯಾಗಲಿದೆ. ಇವುಗಳನ್ನು ಪರಿಶೀಲಿಸುವ ಅಧಿಕಾರಿಗಳು, ಕಾರ್ಡ್ ರದ್ದುಪಡಿಸಲಿದ್ದಾರೆ.
ವಾರ್ಷಿಕ 1.20 ಲಕ್ಷ ರೂ.ಗಿಂತ ಹೆಚ್ಚು ವರಮಾನ, ಮನೆಯಲ್ಲಿ ಕಾರು ಹೊಂದಿರುವವರು, ಆದಾಯ ತೆರಿಗೆ, ಜಿಎಸ್‌ಟಿ ಪಾವತಿಸುವವರು, ಏಳೂವರೆ ಎಕರೆ ಒಣ ಅಥವಾ ನೀರಾವರಿ ಭೂಮಿ ಹೊಂದಿರುವವರು ಬಿಪಿಎಲ್ ಕಾರ್ಡ್ ಪಡೆಯಲು ಅರ್ಹತೆ ಇಲ್ಲ. ಅನುದಾನಿತ, ಅನುದಾನರಹಿತ ಶಾಲಾ-ಕಾಲೇಜು ನೌಕರರು, ನೊಂದಾಯಿತ ಗುತ್ತಿಗೆದಾರರು, ಬಹು ರಾಷ್ಟ್ರೀಯ ಕಂಪನಿ, ಕೈಗಾರಿಕೆಗಳಲ್ಲಿ ಉದ್ಯೋಗದಲ್ಲಿರುವವರು, ಸ್ವಂತಕ್ಕಾಗಿ ಆಟೋ ರಿಕ್ಷಾ ಹೊರತುಪಡಿಸಿ 100 ಸಿಸಿ ಮೇಲ್ಪಟ್ಟ ಇಂಧನ ಚಾಲಿತ ದ್ವಿಚಕ್ರ, ತ್ರಿಚಕ್ರ, ಕಾರು ಹೊಂದಿರುವವರೂ ಕಾರ್ಡ್ ಪಡೆಯುವಂತಿಲ್ಲ ಎಂದು ಸರ್ಕಾರ ಮಾನದಂಡ ನಿಗದಿಪಡಿಸಿದೆ. ಈ ಮಾನದಂಡ ಉಲ್ಲಂಸಿ ಪಡೆದಿರುವ ಬಿಪಿಎಲ್ ಚೀಟಿಗಳ ಪತ್ತೆ ಕಾರ್ಯದಲ್ಲಿ ತೊಡಗಿರುವ ಇಲಾಖೆ, ಈಗಾಗಲೇ ರಾಜ್ಯಾದ್ಯಂತ 12,68,097 ಶಂಕಾಸ್ಪದ ಕಾರ್ಡ್ ಗುರುತಿಸಿದೆ. ಈ ಪೈಕಿ ಶೇ.50 ಕಾರ್ಡ್‌ಗಳು ಎಪಿಎಲ್‌ಗೆ ಪರಿವರ್ತಿಸಲಾಗಿದೆ.
ಏಕಾಏಕಿ ಕಾರ್ಡ್ ರದ್ದತಿಗೆ ಆಕ್ರೋಶ:
ಬಿಪಿಎಲ್ ಚೀಟಿ ರದ್ದುಗೊಳಿಸುತ್ತಿರುವುದು ಅಥವಾ ಎಪಿಎಲ್‌ಗೆ ಪರಿವರ್ತನೆ ಮಾಡುತ್ತಿರುವ ಇಲಾಖೆಯ ವಿರುದ್ಧ ಜನಾಕ್ರೋಶ ವ್ಯಕ್ತವಾಗುತ್ತಿದೆ. ಇದಕ್ಕೆ ಆಕ್ಷೇಪಿಸಿರುವ ಕಾರ್ಡ್‌ದಾರರು, ನೋಟಿಸ್ ನೀಡಿದ ಬಳಿಕವಷ್ಟೇ ಸಮಜಾಯಿಷಿ ಪಡೆದು ಹೆಸರು ಡಿಲೀಟ್ ಮಾಡಬೇಕು. ಇದನ್ನೇ ನೆಪವಾಗಿಸಿ ಕಾರ್ಡ್ ರದ್ದುಪಡಿಸುವುದು ಸರಿಯಲ್ಲ ಎಂದು ಹೇಳುತ್ತಿದ್ದಾರೆ. ಈಗಾಗಲೇ ಬಿಪಿಎಲ್ ರದ್ದಾಗಿರುವ ಲಾನುಭವಿಗಳು, ಪಿಂಚಣಿ, ಗೃಹಲಕ್ಷ್ಮಿ ಮತ್ತು ಚಿಕಿತ್ಸೆ ಸೇರಿ ಸರ್ಕಾರದ ಇತರ ಸೌಲಭ್ಯಗಳನ್ನು ಕಳೆದುಕೊಂಡಿದ್ದಾರೆ.
2025ರ ಜು.29 ಅಂತ್ಯಕ್ಕೆ ರಾಜ್ಯಾದ್ಯಂತ ಹೊಸ ಬಿಪಿಎಲ್ ಕೋರಿ ಸಲ್ಲಿಸಿದ್ದ ಒಟ್ಟು 3,27,309 ಅರ್ಜಿ ಬಾಕಿ ಉಳಿದಿವೆ. ಬೆಂಗಳೂರು ಒನ್, ಕರ್ನಾಟಕ ಒನ್ ಮತ್ತು ಗ್ರಾಮ ಒನ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಿ ನಾಲ್ಕೈದು ವರ್ಷ ಕಳೆದರೂ ವಿಲೇವಾರಿಯಾಗಿಲ್ಲ. ಶಾಸಕರು, ಸಂಸದರಿಗೆ ಹೊಸ ಪಡಿತರ ಕಾರ್ಡ್‌ಗಳ ಬೇಡಿಕೆಗೆ ಮನವಿ ಸಲ್ಲಿಕೆಯಾಗುತ್ತಿವೆ.
2023-24ರಲ್ಲಿ 74,342 ಮತ್ತು 2024-25ರಲ್ಲಿ 16,719 ಸೇರಿ ಒಟ್ಟು 91,061 ಬಿಪಿಎಲ್ ರದ್ದಾಗಿವೆ. 2024-25ರಿಂದ ಈವರೆಗೆ 8,00,793 ಅನರ್ಹ ಲಾನುಭವಿಗಳು, 7,71,911 ಅನರ್ಹ ಚೀಟಿಗಳನ್ನು ಪತ್ತೆ ಹೆಚ್ಚಲಾಗಿದೆ.