ಬೆಂಗಳೂರು: ನನಗೆ ಬಿ.ಪಿ, ಶುಗರ್ ಇದೆ. ಅನಾರೋಗ್ಯದಿಂದ ಬಳಲುತ್ತಿದ್ದು, ವಿಶ್ರಾಂತಿಯ ಅವಶ್ಯಕತೆ ಇದೆ ಎಂದು ಕೆಪಿಎಸ್ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಎಸ್.ಸಾಹುಕಾರ್ ಗೋಗರೆದರೆ, ನಾನು ನವರಾತ್ರಿ ಪೂಜೆ ಸಲ್ಲಿಸಲು ಉಪವಾಸ ಇರಬೇಕು. ಆದ್ದರಿಂದ ಜಾಮೀನು ಕೊಡಿ ಎಂದು ಸದಸ್ಯೆ ಬಿ.ವಿ.ಗೀತಾ ಮನವಿ ಮಾಡಿದ್ದಾರೆ. ಆದರೆ, ಇಬ್ಬರ ಮಧ್ಯಂತರ ಜಾಮೀನು ಅರ್ಜಿಗಳನ್ನು ತಿರಸ್ಕರಿಸಿರುವ ನ್ಯಾಯಾಲಯ, 12 ದಿನ ಜಾರಿ ನಿರ್ದೇಶನಾಲಯ (ಇಡಿ)ದ ವಶಕ್ಕೆ ಒಪ್ಪಿಸಿದೆ. ಇದರ ಬೆನ್ನಲ್ಲೇ ಇಡಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದು, ಇಬ್ಬರನ್ನೂ ಪ್ರತ್ಯೇಕವಾಗಿ ವಿಚಾರಣೆ ನಡೆಸಲು ತೀರ್ಮಾನಿಸಿದ್ದಾರೆ.
ಮಂಗಳವಾರ ರಾತ್ರಿ ಈ ಇಬ್ಬರನ್ನು ಬಂಧಿಸಿದ್ದ ಇಡಿ ಅಧಿಕಾರಿಗಳು, ಬುಧವಾರ ಮಧ್ಯಾಹ್ನ ನಗರದ 4ನೇ ಸಿಸಿಎಚ್ ಕೋರ್ಟ್ ಎದುರು ಹಾಜರುಪಡಿಸಿದರು. ಇ.ಡಿ ಪರವಾಗಿ ಹಾಜರಾದ ವಿಶೇಷ ಸಾರ್ವಜನಿಕ ಅಭಿಯೋಜಕ ಮಧು ಎನ್.ರಾವ್, ಆರೋಪಿಗಳನ್ನು ಹೆಚ್ಚಿನ ವಿಚಾರಣೆಗಾಗಿ 14 ದಿನ ಕಸ್ಟಡಿಗೆ ನೀಡಬೇಕೆಂದು ಮನವಿ ಮಾಡಿದರು. ಹಲವು ಅಭ್ಯರ್ಥಿಗಳಿಗೆ 40 ಲಕ್ಷ, 60 ಲಕ್ಷ ಹಾಗೂ 80 ಲಕ್ಷ ರೂಪಾಯಿಗಳಿಗೆ ಪ್ರಶ್ನೆ ಪತ್ರಿಕೆ ಮಾರಾಟ ಮಾಡಲಾಗಿದೆ. ಕೊನೆಯ ಕ್ಷಣದಲ್ಲಿ 5 ಲಕ್ಷ ರೂಪಾಯಿಗೂ ಪ್ರಶ್ನೆಪತ್ರಿಕೆ ಹಂಚಿಕೆ ವ್ಯವಹಾರ ನಡೆದಿದೆ. ಈ ಅಕ್ರಮಕ್ಕೆ ಸಂಬಂಧಿಸಿದಂತೆ ಅಭ್ಯರ್ಥಿಗಳಿಂದ ಪಡೆದಿದ್ದ ಬ್ಯಾಂಕ್ ಚೆಕ್ಗಳು, ಪ್ರಾಮಿಸರಿ ನೋಟ್ಗಳು ಹಾಗೂ ಸಹಿ ಮಾಡಲಾದ ದಾಖಲೆಗಳನ್ನು ಇ.ಡಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು.
ಆದರೆ ಶಿವಶಂಕರಪ್ಪ ಪರ ವಕೀಲರು ಸಾಹುಕಾರ್ ನಿವಾಸದ ಮೇಲೆ ಇಡಿ ಅಧಿಕಾರಿಗಳು ಎರಡು ದಿನ ದಾಳಿ ನಡೆಸಿ ಪರಿಶೀಲಿಸಿದ್ದಾರೆ. ಆ ವೇಳೆ ಪರೀಕ್ಷಾ ಅಕ್ರಮದ ಯಾವುದೇ ದಾಖಲೆಗಳು ದೊರೆತಿಲ್ಲ. ಈಗ ಉದ್ದೇಶಪೂರ್ವಕವಾಗಿ ಬಂಧಿಸಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಎರಡು ತಂಡಗಳಿಂದ ಅಕ್ರಮ!: ಕೆಪಿಎಸ್ಸಿಯಲ್ಲಿ ಎರಡು ಗುಂಪುಗಳಾಗಿ ಅಕ್ರಮ ಎಸಗಿರುವ ಮಾಹಿತಿ ಇ.ಡಿಗೆ ಲಭ್ಯವಾಗಿದೆ. ಶಿವಶಂಕರಪ್ಪ ಸಾಹುಕಾರ್, ಕೆಲ ಸದಸ್ಯರು ಒಂದು ಗುಂಪಾಗಿದ್ದರೆ, ಜ್ಞಾನೇಂದ್ರ, ಬಸವರಾಜ್ ಕನ್ನಾಳೆ ಮತ್ತೊಂದು ಗುಂಪಾಗಿದ್ದರು.
ಸಾಹುಕಾರ್ ಶಿಫಾರಸು ಮಾಡಿದವರು: 1) ಡಾ. ಬಿ.ನಂದೀಶ್, ದಾವಣಗೆರೆಯ ಭದ್ದೂರುಘಟ್ಟ (ರಿ.ಸಂ. 241419036), 2) ಡಾ. ಸೂಗುರೇಶ್ ಜಾಕ್, ರಾಯಚೂರು (ರಿ. ನಂ.24 1418468), 3) ಡಾ. ಕಿರಣ್ ಕುಮಾರ್, ಚಿತ್ರದುರ್ಗ (ರಿ.ನಂ.241419376), 4) ಡಾ. ಎಸ್.ಎಸ್.ತೇಜಸ್ ದಾವಣಗೆರೆ (ರಿ. ನಂ.241418899), 5) ಡಾ. ವಿನುತಾ ಮಲ್ಲಪ್ಪ ಹಿತ್ತಲಮನಿ, ರಾಯಚೂರು (ರಿ.ನಂ.241418058) , 6) ಡಾ. ಎನ್.ನವೀನ್ ಕುಮಾರ್, ಚಿತ್ರದುರ್ಗ (ರಿ.ಸಂ.2414892414)
ಬಿ.ವಿ.ಗೀತಾಳ ಪುತ್ರಿ ಹೆಸರಿನಲ್ಲಿ ಸಂಜಯ ನಗರದ ಡಾಲರ್ಸ್ ಕಾಲನಿಯಲ್ಲಿರುವ ಅಪಾರ್ಟ್ಮೆಂಟ್ವೊಂದರ ಫ್ಲಾಟ್ ನೋಂದಣಿಯಾಗಿದೆ. ಆದರೆ, ಶಿವಶಂಕರಪ್ಪ ಸಾಹುಕಾರ್ 2023ರಿಂದ ಆ ಫ್ಲಾಟ್ ಬಾಡಿಗೆ ನೀಡುತ್ತ್ತ ಬಂದಿದ್ದಾರೆ. ಅಲ್ಲದೆ, ಗೀತಾಳ ಪುತ್ರಿ ಖಾತೆಗೆ ಮಾಸಿಕ 75 ಸಾವಿರ ರೂ. ಜಮೆ ಮಾಡುತ್ತಿರುವುದು ಇಡಿ ಅಧಿಕಾರಿಗಳು ಕೆಪಿಎಸ್ಸಿ ಕಚೇರಿ ಮೇಲೆ ನಡೆಸಿದ ದಾಳಿ ವೇಳೆ ಡೆಪಾಸಿಟ್ ರಸೀದಿ ದಾಖಲೆಗಳು ಪತ್ತೆಯಾಗಿವೆ.
ಕೆಪಿಎಸ್ಸಿ ಕಚೇರಿ ಪರಿಶೀಲನೆ ವೇಳೆ ಹಾಗೂ ಶಿವಶಂಕರಪ್ಪ ಅವರ ಪಿಎ ಬಳಿ ಬ್ಯಾಂಕ್ ಡೆಪಾಸಿಟ್ ರಶೀದಿಗಳು ಪತ್ತೆಯಾಗಿವೆ. ಗೀತಾ ಅವರು ಸಂಬಂಧಿಕರ ಖಾತೆಗಳ ಮೂಲಕ ನಗದು ಡೆಪಾಸಿಟ್ ಮಾಡಿಸಿಕೊಂಡಿರುವುದು ತನಿಖೆಯಿಂದ ತಿಳಿದುಬಂದಿದೆ ಎಂದು ವಕೀಲರು ತಿಳಿಸಿದ್ದಾರೆ.
ಐಎಎಸ್ ಅಧಿಕಾರಿ, ಕೆಪಿಎಸ್ಸಿ ಪರೀಕ್ಷಾ ನಿಯಂತ್ರಕನಾಗಿದ್ದ ಜ್ಞಾನೇಂದ್ರ ಕುಮಾರ್ ಗಂಗ್ವಾರ್, ಪಶುವೈದ್ಯಾಧಿಕಾರಿ, ವಿಸ್ತರಣಾಧಿಕಾರಿಗಳ ನೇಮಕಾತಿ ವೇಳೆ ಸಾಹುಕಾರ್ ತಮ್ಮನ್ನು ಸಂಪರ್ಕಿಸಿ ಅಕ್ರಮದ ಕುರಿತು ರ್ಚಚಿಸಿರುವುದು ಹಾಗೂ ಬಿ.ವಿ.ಗೀತಾ 5-6 ಅಭ್ಯರ್ಥಿಗಳನ್ನು ಪಶು ವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ಆಯ್ಕೆ ಮಾಡಬೇಕೆಂದು ಹೆಸರು ಸಮೇತ ನೀಡಿದ್ದರೆಂಬ ಸ್ಪೋಟಕ ಮಾಹಿತಿಯನ್ನು ಜ್ಞಾನೇಂದ್ರ ಇಡಿ ಮುಂದೆ ಬಾಯಿಬಿಟ್ಟಿದ್ದಾನೆ ಎನ್ನಲಾಗಿದೆ.