ಚಿಂಚೋಳಿ ತಾಲೂಕಿನ ಶಾದಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಂದುನಾಯಕ ತಾಂಡಾದಲ್ಲಿ ರೈತರು ತಮ್ಮ ಭೂಮಿಗಾಗಿ 300ಕ್ಕೂ ಅಧಿಕ ದಿನಗಳಿಂದ ಹೋರಾಟ ನಡೆಸುತ್ತಿರುವುದು.
- ಕುಂಚಾವರಂ ಗಡಿಯಲ್ಲಿ ಹೆಚ್ಚಿದ ಉದ್ವಿಗ್ನತೆ
- ಸರಹದ್ದು ಗೊಂದಲದ ಮಧ್ಯೆ ತೆಲಂಗಾಣದವರಿಂದ ಒತ್ತುವರಿ ಕಿರಿಕಿರಿ
- ಕಲ್ಯಾಣ ಕರ್ನಾಟಕದ ಅತಿ ದೊಡ್ಡ ಕಾಯ್ದಿಟ್ಟ ಅರಣ್ಯ ಪ್ರದೇಶ.
ಚಿಂಚೋಳಿ: ಕುಂಚಾವರಂ ಅರಣ್ಯ ವಲಯ ಹಾಗೂ ಗಡಿ ಗ್ರಾಮಗಳಲ್ಲಿ ಕರ್ನಾಟಕ ಮತ್ತು ತೆಲಂಗಾಣ ನಡುವಿನ ಗಡಿ ವಿವಾದ ಮತ್ತು ಭೂ ಒತ್ತುವರಿ ಸಮಸ್ಯೆ ತೀವ್ರ ಸ್ವರೂಪ ಪಡೆದುಕೊಂಡಿದೆ.
ಸ್ಪಷ್ಟ ಸರಹದ್ದು (ಗಡಿ ರೇಖೆ) ಇಲ್ಲದಿರುವುದನ್ನೇ ಬಂಡವಾಳ ಮಾಡಿಕೊಂಡಿರುವ ತೆಲಂಗಾಣದ ಕೆಲ ಗ್ರಾಮಸ್ಥರು, ಕರ್ನಾಟಕದ ಭೂಮಿಯನ್ನು ಒತ್ತುವರಿ ಮಾಡಿದ್ದಲ್ಲದೆ ಕರ್ತವ್ಯನಿರತ ರಾಜ್ಯದ ಅಧಿಕಾರಿಗಳು ಮತ್ತು ಸ್ಥಳಿಯ ರೈತರಿಗೆ ನಿರಂತರ ಕಿರಿಕಿರಿ ನೀಡುತ್ತಿದ್ದಾರೆ. ಇತ್ತೀಚೆಗೆ ಸರ್ವೇ ಕಾರ್ಯಕ್ಕೆ ತೆಲಂಗಾಣ ಜನ ಅಡ್ಡಿಪಡಿಸಿರುವುದು ಪರಿಸ್ಥಿತಿ ಎಷ್ಟು ಸೂಕ್ಷ್ಮವಾಗಿದೆ ಎಂಬುದನ್ನು ತೋರಿಸಿಕೊಡುತ್ತದೆ.
ಕುಂಚಾವರಂ ಪೊಲೀಸ್ ಠಾಣೆ ವ್ಯಾಪ್ತಿಯ ಶಾದಿಪುರ ಗ್ರಾಮದ ಸರ್ವೇ ನಂ.126 ಮತ್ತು 127ರ ವಿವಾದಿತ ಭೂಮಿಯ ಜಂಟಿ ಸಮೀಕ್ಷೆ ನಡೆಸಲು ಸಹಾಯಕ ಆಯುಕ್ತ ಪ್ರಭು ರೆಡ್ಡಿ, ಭೂ ದಾಖಲೆಗಳ ಉಪ ನಿರ್ದೇಶಕ ಮಹೇಶ್ ಸನ್ನತ್ತಿ ಮತ್ತು ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ನೇತೃತ್ವದ ತಂಡ ತೆರಳಿತ್ತು.
ಈ ವೇಳೆ ತೆಲಂಗಾಣದ ತಾಂಡೂರು ತಾಲೂಕಿನ ಉಮ್ಲಾ ನಾಯಕ್, ರಾಮಸಿಂಗನಾಯಕ ತಾಂಡಾದ ನೂರಾರು ಜನ (ಪುರುಷರು ಮತ್ತು ಮಹಿಳೆಯರು) ಏಕಾಏಕಿ ನುಗ್ಗಿ ಸರ್ವೇ ಕಾರ್ಯಕ್ಕೆ ಅಡ್ಡಿಪಡಿಸಿ ಆಕ್ರೋಶ ವ್ಯಕ್ತಪಡಿಸಿದರು. ಪರಿಸ್ಥಿತಿ ಕೈಮೀರಿದ ಕಾರಣ ಅಧಿಕಾರಿಗಳು ಸರ್ವೇಯನ್ನು ಅರ್ಧಕ್ಕೆ ನಿಲ್ಲಿಸಿ ವಾಪಸ್ ಬರಬೇಕಾಯಿತು. ಕುಂಚಾವರಂ ಪಿಎಸ್ಐ ವೆಂಕಟೇಶ ನಾಯಕ ಮತ್ತು ಸಿಬ್ಬಂದಿ ಸ್ಥಳದಲ್ಲಿದ್ದರೂ ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಹರಸಾಹಸ ಪಡಬೇಕಾಯಿತು.ಸ್ಪಷ್ಟ ಗಡಿ ಗುರುತಿನ ಕೊರತೆ: ಹೈದರಾಬಾದ್ ನಿಜಾಮರ ಕಾಲದ ಹಳೆಯ ನೆಕ್ಷೆ ಗಳನ್ನೇ ಇಟ್ಟುಕೊಂಡು ಎರಡೂ ರಾಜ್ಯಗಳು ವಾದಿಸುತ್ತಿವೆ. ಆದರೆ ಪ್ರಾಯೋಗಿಕವಾಗಿ ಗಡಿಯಲ್ಲಿ ಯಾವುದೇ ಭೌತಿಕ ತಡೆಗೋಡೆ ಅಥವಾ ಕಂಬಗಳಿಲ್ಲದ ಕಾರಣ ತೆಲಂಗಾಣದವರು ಇದು ನಮ್ಮ ಭೂಮಿ ಎಂದು ಹಕ್ಕು ಸಾಧಿಸುತ್ತಿದ್ದಾರೆ.
ಇನ್ನು ತೆಲಂಗಾಣದ ಗಡಿ ಗ್ರಾಮಸ್ಥರು ನಿರಂತರ ಕರ್ನಾಟಕ ರೈತರ ಜಮೀನುಗಳಿಗೆ ನುಗ್ಗಿ ಬೆಳೆ ನಾಶಪಡಿಸುವುದು, ಕೃಷಿ ಚಟುವಟಿಕೆಗೆ ಅಡ್ಡಿಪಡಿಸುವುದು ಹಾಗೂ ಜಮೀನು ಒತ್ತುವರಿ ಮಾಡಿಕೊಳ್ಳುವ ಮೂಲಕ ಕಿರಿಕಿರಿ
ಉಂಟುಮಾಡುತ್ತಿದ್ದಾರೆ.ಈ ಗಡಿ ಕ್ಯಾತೆಗೆ ಶಾಶ್ವತ ಮುಕ್ತಿ ಸಿಗಬೇಕಾದರೆ ಕರ್ನಾಟಕ ಮತ್ತು ತೆಲಂಗಾಣ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳು ತಣವೇ ಮಧ್ಯಪ್ರವೇಶಿಸಬೇಕು. ಕೇಂದ್ರ ಸರ್ಕಾರದ ಕಂದಾಯ ಹಾಗೂ ಸರ್ವೇ ಇಲಾಖೆ ನೆರವಿನೊಂದಿಗೆ ಆಧುನಿಕ ಜಿಪಿಎಸ್ ತಂತ್ರಾನ ಬಳಸಿ ಗಡಿ ರೇಖೆಯನ್ನು ಸ್ಪಷ್ಟವಾಗಿ ಗುರುತಿಸಿ ಕಂಬಗಳನ್ನು ನೆಡಬೇಕು.ಇಲ್ಲದಿದ್ದರೆ ಈ ಸಣ್ಣ ಕಿರಿಕಿರಿ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಕಾನೂನು ಸುವ್ಯವಸ್ಥೆ ಸಮಸ್ಯೆಯಾಗಿ ರೂಪಾಂತರಗೊಳ್ಳುವುದರಲ್ಲಿ ಸಂಶಯವಿಲ್ಲ.
26 ವರ್ಷ ಹಳೆಯ ಹಕ್ಕುಸ್ವಾಮ್ಯವೇ ಸಮಸ್ಯೆಗೆ ಮೂಲ ಕಾರಣ. ಕರ್ನಾಟಕ ಸರ್ಕಾರ ಗಡಿ ಭಾಗದ ಭೂಹೀನ ದಲಿತ ಮತ್ತು ಹಿಂದುಳಿದ ವರ್ಗಗಳ ರೈತರಿಗೆ ಈ ಜಮೀನನ್ನು ಮಂಜೂರು ಮಾಡಿತ್ತು. ಅಂದಿನಿಂದಲೂ ಸ್ಥಳಿಯರು ಕೃಷಿ ಮಾಡಲು ಹರಸಾಹಸ ಪಡುತ್ತಿದ್ದಾರೆ. ಇದೀಗ 300 ದಿನಗಳಿಂದ ಅರ್ನಿದಿಷ್ಟ ಧರಣಿ ಮುಂದುವರಿಸಿದ್ದು, ನಮ್ಮ ಭೂಮಿ ಕಳ್ಳತನವಾಗಿದೆ ಹುಡುಕಿಕೊಡಿ, ಉಳುಮೆ ಮಾಡಿ ಬದುಕು ಕಟ್ಟಿಕೊಳ್ಳಲು ಅವಕಾಶ ನೀಡಬೇಕೆಂಬ ಬೇಡಿಕೆ ಮಂಡಿಸುತ್ತಿದ್ದಾರೆ.
ಕುಂಚಾವರಂ ವನ್ಯಜಿವಿ ಧಾಮದ ಆತಂಕ
ಕುಂಚಾವರಂ ಪ್ರದೇಶ ದಟ್ಟವಾದ ಅರಣ್ಯ ಮತ್ತು ವನ್ಯಜಿವಿ ಧಾಮವನ್ನು ಒಳಗೊಂಡಿದೆ. ಅಭಿವೃದ್ಧಿ ಕೊರತೆ ಹಾಗೂ ಅತ್ಯಂತ ದುರ್ಗಮ ಪ್ರದೇಶವಾಗಿದ್ದರಿಂದ ಅರಣ್ಯ ಭೂಮಿ ಒತ್ತುವರಿ ಅವಿಶ್ರಾಂತವಾಗಿ ನಡೆಯುತ್ತಿದೆ. ಹಿಂದೆ ಈ ಭಾಗದಲ್ಲಿ ನಕ್ಸಲೈಟ್ ಚಟುವಟಿಕೆಗಳಿಗೂ ಗಡಿ ಗೊಂದಲಗಳೇ ಆಸರೆಯಾಗಿದ್ದವು ಎಂಬುದನ್ನು ಸ್ಮರಿಸಬಹುದು.
ತೆಲಂಗಾಣದವರ ಬೇಡಿಕೆಗೆ ಸ್ಥಳಿಯರ ಆಕ್ರೋಶ
ತೆಲಂಗಾಣದವರ ವಾದದ ಪ್ರಕಾರ ಈ ಭೂಮಿ ತಮಗೆ ಸೇರಿದ್ದು. ಕರ್ನಾಟಕದ ಅಧಿಕಾರಿಗಳು ಮಾತ್ರ ಸರ್ವೇ ನಡೆಸಬಾರದು. ಬದಲಿಗೆ ಎರಡೂ ರಾಜ್ಯದ ಕಂದಾಯ ಅಧಿಕಾರಿಗಳು ಸೇರಿ ಜಂಟಿ ಸರ್ವೇ ನಡೆಸಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಆದರೆ ಕರ್ನಾಟಕ ರೈತರು ನಮ್ಮದೇ ಜಮೀನಿನಲ್ಲಿ ಕೃಷಿ ಮಾಡಲು ನೆರೆ ರಾಜ್ಯದವರು ಅಡ್ಡಿಪಡಿಸುತ್ತಿದ್ದರಿಂದ ಜೀವಭಯ ಕಾಡುತ್ತಿದೆ ಎಂದು ಅಳಲು ಜತೆ ಆಕ್ರೋಶ ಹೊರಹಾಕುತ್ತಿದ್ದಾರೆ.
ಈಗಾಗಲೇ ಎರಡು ಬಾರಿ ಮುಖ್ಯ ಕಾರ್ಯದರ್ಶಿಗಳನ್ನು ಭೇಟಿಯಾಗಿ ಶಾದಿಪುರ ಭಾಗದ ಬಡವರಿಗೆ ಭೂಮಿ ಹಂಚಿಕೆ ಕುರಿತು ಮನವರಿಕೆ ಮಾಡಿಕೊಟ್ಟಿದ್ದು, ಗಡಿ ವಿವಾದ ಬಗೆಹರಿಸುವ ಭರವಸೆ ನೀಡಿದ್ದಾರೆ. ಇದೀಗ ಮುಂಗಾರು ಅಧಿವೇಶನದಲ್ಲೂ ಧ್ವನಿ ಎತ್ತುವ ಮೂಲಕ ನಮ್ಮ ಭಾಗದ ಭೂಮಿ ರಕ್ಷಣೆಗೆ ಶ್ರಮಿಸುತ್ತೇನೆ.
— > ಡಾ.ಅವಿನಾಶ ಜಾಧವ್ ಶಾಸಕ
"
ನಮ್ಮ ಭೂಮಿ ನಮ್ಮ ಹಕ್ಕು. ಯಾವ ಕಾರಣಕ್ಕೂ ಭೂಮಿ ಪಡೆಯುವವರೆಗೆ ಹೋರಾಟ ನಿಲ್ಲದು. ನಮ್ಮ ಜಮೀನಿನಲ್ಲಿ ಅಕ್ರಮ ಕೆಂಪು ಮಣ್ಣು ಸಾಗಿಸುವ ಮಾಫಿಯಾಗಳಿಗೆ ಕಡಿವಾಣ ಹಾಕಬೇಕು. ಗಡಿ ವಿವಾದ ಬಗೆಹರಿಸಲು ಸರ್ಕಾರ ಮುಂದಾಗಬೇಕು.
— > ಲಿಂಬಾಜಿ ಚವ್ಹಾಣ್ ತಾಲೂಕು ಅಧ್ಯಕ್ಷ, ಕರ್ನಾಟಕ ರಕ್ಷಣಾ ವೇದಿಕೆ (ಸ್ವಾಭಿಮಾನ ಸೇನೆ)