ಬಳ್ಳಾರಿಯ ಸಂಘನ ಕಲ್ಲು ನವಶಿಲಾಯುಗ ಕಾಲದ ಆದಿಮಾನವ ನೆಲೆ
- ಪುರಾತತ್ವ ಇಲಾಖೆಯಿಂದ ಕಾಫಿ ಟೇಬಲ್ ಬುಕ್
- ರಾಜ್ಯದ 200ಕ್ಕೂ ಹೆಚ್ಚು ತಾಣಗಳ ಮಾಹಿತಿ
- ಆದಿಮಾನವರ ನೆಲೆಗಳ ಪರಿಚಯ
ಬೆಂಗಳೂರು: ಆದಿಮಾನವ ನೆಲೆ ಸೇರಿ ಕರ್ನಾಟಕದ ಸಮಗ್ರ ಇತಿಹಾಸಪೂರ್ವ ತಾಣಗಳು ಹಾಗೂ ಅವುಗಳ ವಿಶೇಷತೆಗಳನ್ನು ಜನರಿಗೆ ಪರಿಚಯಿಸಲು ಕರ್ನಾಟಕ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಕಾಫಿ ಟೇಬಲ್ ಪುಸ್ತಕ ಹೊರತರುತ್ತಿದೆ.
ಸುಮಾರು 40 ಲಕ್ಷ ರೂ. ವೆಚ್ಚದಲ್ಲಿ ರೂಪಿಸಿರುವ ಯೋಜನೆ ಇದಾಗಿದೆ. ಇದರಲ್ಲಿ ಆದಿಮಾನವರ ನೆಲೆಗಳು, ಗುಹೆಗಳು, ಚಿತ್ತಾರಗಳು, ಕಲ್ಲಿನ ಕೆತ್ತನೆಗಳು, ಸಮಾಧಿಗಳು, ಬಳಸುತ್ತಿದ್ದ ವಸ್ತುಗಳು ಸೇರಿ ಪ್ರಾಚೀನ ಶಿಲಾಯುಗ (Palaeolithic), ನವಶಿಲಾಯುಗ (Neolithic) ಮತ್ತು ಬೃಹತ್ ಶಿಲಾಯುಗ (Megalithic)ಪರಿಚಯಿಸುವ 200ಕ್ಕೂ ಹೆಚ್ಚಿನ ತಾಣಗಳ ಚಿತ್ರಸಹಿತ ಮಾಹಿತಿಯನ್ನು ಈ ಪುಸ್ತಕ ನೀಡಲಿದೆ.
ಯೋಜನೆ ಬಹುತೇಕ ಮುಕ್ತಾಯ ಹಂತದಲಿದೆ. ಡಿಸೆಂಬರ್‌ನಲ್ಲಿ ‘ಕಾಫಿ ಟೇಬಲ್ ಬುಕ್ ಆನ್ ದಿ ಪ್ರೀ ಹಿಸ್ಟೋರಿಕ್ ಸೈಟ್ಸ್ ಆ್ ಕರ್ನಾಟಕ’ ಪುಸ್ತಕ ಲೋಕಾರ್ಪಣೆಯಾಗಲಿದೆ. ಆದಿಮಾನವರ ಕಾಲಘಟ್ಟದ ಬಗ್ಗೆ ತಿಳಿಯಲು ಈ ಪುಸ್ತಕ ನೆರವಾಗಲಿದೆ ಎನ್ನುತ್ತಾರೆ ಇಲಾಖೆ ಆಯುಕ್ತ ಎ.ದೇವರಾಜ್.
ಸಮಗ್ರ ಪೂರ್ವ ಇತಿಹಾಸ:
ಕರ್ನಾಟಕದಲ್ಲಿ ಈವರೆಗೂ ಇತಿಹಾಸಪೂರ್ವದ ಕುರಿತು ಕೆಲ ಸಂಶೋಧಕರು ಹಾಗೂ ವಿವಿಗಳಿಂದ ಪುಸ್ತಕಗಳನ್ನು ಹೊರತರಲಾಗಿದೆ. ಆದರೆ ಈ ರೀತಿ ಕರ್ನಾಟಕದ ಸಮಗ್ರ ಇತಿಹಾಸಪೂರ್ವ ತಾಣಗಳ ಮಾಹಿತಿ ಹೊಂದಿರುವ ಪುಸ್ತಕ ಇದೇ ಮೊದಲ ಬಾರಿ ಪ್ರಕಟಗೊಳ್ಳುತ್ತಿದೆ. ಇತಿಹಾಸ ಹಾಗೂ ಪಾರಂಪರಿಕ ತಾಣಗಳ ಬಗ್ಗೆ ತಿಳಿಯಲು ಆಸಕ್ತಿ ಹೊಂದಿರುವವರಿಗೆ ಈ ಪುಸ್ತಕ ಉಪಯೋಗವಾಗಲಿದೆ ಎನ್ನುತ್ತಾರೆ ಇಲಾಖೆ ಅಧಿಕಾರಿಗಳು.
ಇತಿಹಾಸಪೂರ್ವ ತಾಣಗಳು:
ಕರ್ನಾಟಕದ ಪ್ರಮುಖ ಇತಿಹಾಸಪೂರ್ವ ತಾಣಗಳಲ್ಲಿ ಉತ್ತರ ಕರ್ನಾಟಕದ ಮಲಪ್ರಭಾ, ಘಟಪ್ರಭಾ ಕಣಿವೆಗಳ ಪ್ರದೇಶಗಳು ಸೇರಿವೆ. ಇಲ್ಲಿ ಆದಿಮಾನವನ ನೆಲೆಗಳು ಮತ್ತು ಕೈಗೊಡಲಿ ಸೇರಿ ಇತರ ಉಪಕರಣಗಳು ಪತ್ತೆಯಾಗಿವೆ. ಇವುಗಳ ಜೊತೆಗೆ, ಕೊಡಗು ಮತ್ತು ಮೂರೇ ಬೆಟ್ಟ ಪ್ರದೇಶಗಳಲ್ಲಿಯೂ ಇತಿಹಾಸಪೂರ್ವ ಕಾಲದ ಬೃಹತ್ ಶಿಲೆಯ ರಚನೆಗಳು ಮತ್ತು ಸಮಾಧಿಗಳು ಕಂಡುಬಂದಿವೆ. ಇದು ಆದಿಮಾನವನ ವಸಾಹತುಗಳು ಮತ್ತು ಶವಸಂಸ್ಕಾರ ಪದ್ಧತಿಗಳನ್ನು ತಿಳಿಸುತ್ತವೆ.
ಸಂಘನಕಲ್ಲು:
ಇನ್ನು ರಾಯಚೂರು ಜಿಲ್ಲೆಯ ಲಿಂಗಸೂಗೂರು ಪ್ರದೇಶದಲ್ಲಿ ಕಲ್ಲಿನ ಕೊಡಲಿಯಂತಹ ಉಪಕರಣಗಳು ಸಿಕ್ಕಿವೆ. ಬಳ್ಳಾರಿಯ ಸಂಘನ ಕಲ್ಲು ನವಶಿಲಾಯುಗ ಕಾಲದ ಒಂದು ಪ್ರಮುಖ ನೆಲೆಯಾಗಿದೆ. ಇಲ್ಲಿಯೂ ಆದಿಮಾನವರ ವಾಸಸ್ಥಳಗಳು, ಕಲ್ಲಿನ ಉಪಕರಣಗಳು, ಬಂಡೆಗಳ ಮೇಲೆ ಬಿಡಿಸಿರುವ ಚಿತ್ರಕಲೆಗಳು, ಮಣ್ಣಿನ ಗಡಿಗೆಗಳು, ಕಲ್ಲಿನ ಮಣಿಗಳು, ಅರೆಯುವ ಕಲ್ಲುಗಳು ಮತ್ತು ರಾಗಿ ಬಳಕೆಯಲ್ಲಿತ್ತು ಎಂಬುದಕ್ಕೆ ಸಾಕ್ಷ್ಯಗಳು ಸಿಕ್ಕಿವೆ.
ಹಿರೇಬೆಣಕಲ್ಲು:
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹಿರೇಬೆಣಕಲ್ ಅಥವಾ ಹಿರೇಬೆಣಕಲ್ಲು ರಾಜ್ಯದ ಒಂದು ಬೃಹತ್ ಶಿಲೆಯ ತಾಣವಾಗಿದೆ. ಇಲ್ಲಿ ಪ್ರಾಚೀನ ಶಿಲಾ ಸಮಾಧಿಗಳಿವೆ. ಇವನ್ನು ಮೋರೇರ್ ಬೆಟ್ಟ ಎಂಬುದಾಗಿಯೂ ಕರೆಯುತ್ತಾರೆ. ಇದು ಕರ್ನಾಟಕದ ಏಳು ಅದ್ಭುತಗಳ ಪಟ್ಟಿಯಲ್ಲಿದೆ. ಇಂತಹ ನೂರಾರು ಆದಿಮಾನವರ ತಾಣಗಳ ಕುರಿತು ಕಾಫಿ ಟೇಬಲ್ ಸಮಗ್ರ ಮಾಹಿತಿ ಒದಗಿಸಲಿದೆ.