ಯಾದಗಿರಿ ಜಿಲ್ಲಾ ನ್ಯಾಯಾಲಯದಲ್ಲಿ ಬಾಂಬ್ ಪತ್ತೆ ಮಾಡುತ್ತಿರುವ ಶ್ವಾನದಳ, ಬಾಂಬ್ ನಿಷ್ಕ್ರಿಯ ದಳ ಸಿಬ್ಬಂದಿ.
- ಜಾಲಾಡಿದ ಬಾಂಬ್ ನಿಷ್ಕ್ರಿಯ ದಳ, ಶ್ವಾನದಳ ಸಿಬ್ಬಂದಿ
- ಪತ್ತೆಯಾಗದ ಸ್ಫೋಟಕ ವಸ್ತು
ಯಾದಗಿರಿ: ಮುದ್ನಾಳ ಕ್ರಾಸ್ ಹತ್ತಿರದ ಜಿಲ್ಲಾ ನ್ಯಾಯಾಲಯಕ್ಕೆ ಗುರುವಾರ ಇಮೇಲ್ ಮೂಲಕ ಬಂದ ಬಾಂಬ್ ಬೆದರಿಕೆ ಇಡೀ ದಿನ ಕೋರ್ಟ್ ಪರಿಸರದಲ್ಲಿ ಆತಂಕ ಮೂಡಿಸಿತ್ತು.
ವಿಷಯ ತಿಳಿಯುತ್ತಲೇ ದೌಡಾಯಿಸಿದ ಎಸ್ಪಿ ಪೃಥ್ವಿಕ್ ಶಂಕರ್ ಅವರು ಬಾಂಬ್ ನಿಷ್ಕ್ರಿಯ ದಳ, ಶ್ವಾನದಳ ಸಿಬ್ಬಂದಿಯನ್ನು ಕರೆಸಿ ಎಲ್ಲೆಡೆ ಪರಿಶೀಲನೆ ನಡೆಸಿದರು. ಎಲ್ಲೂ ಬಾಂಬ್ ಅಥವಾ ಸ್ಫೋಟಕ ವಸ್ತು ಪತ್ತೆಯಾಗದ್ದರಿಂದ ಇದೊಂದು ಹುಸಿ ಬೆದರಿಕೆ ಎಂಬುದು ಖಾತ್ರಿಯಾದ ಬಳಿಕ ಎಲ್ಲರೂ ನಿಟ್ಟುಸಿರು ಬಿಡುವಂತಾಯಿತು.
ಮಧ್ಯಾಹ್ನ 12ರ ಸುಮಾರಿಗೆ ಮೇಲ್ ಮೂಲಕ ಬಾಂಬ್ ಬೆದರಿಕೆ ಬರುತ್ತಲೇ ಎಚ್ಚೆತ್ತ ಸಿಬ್ಬಂದಿ ಮತ್ತು ವಕೀಲರು ಕೋರ್ಟ್ ಹಾಲ್ನಿಂದ ಹೊರಬಂದರು. ಜಮೀಶಾ ಮುಬೀನ್ ಎಂಬ ಹೆಸರಿನ ಐಡಿಯಿಂದ ಬಂದ ಇಮೇಲ್ನಲ್ಲಿ ಇಂದು ಮಧ್ಯಾಹ್ನ 1.20ರಿಂದ 3ರ ಮಧ್ಯೆ ನಿಮ್ಮ ನ್ಯಾಯಾಲಯದಲ್ಲಿ 13 ವಿಷ ಅನಿಲ+ಆರ್ಡಿಎಕ್ಸ್ ಬಾಂಬ್ಗಳು ಸ್ಫೋಟಗೊಳ್ಳಲಿವೆ. ನ್ಯಾಯಾಧೀಶರು, ಮುಗ್ಧ ಸಾರ್ವಜನಿಕರನ್ನು ಸ್ಥಳಾಂತರಿಸಿ ಎಂದು ಉಲ್ಲೆಖಿಸಲಾಗಿತ್ತು.
ನಿಷ್ಕ್ರಿಯ ದಳ, ಶ್ವಾನದಳದ ಸಿಬ್ಬಂದಿ ಕೋರ್ಟ್ನ ಎಲ್ಲ ಸಭಾಂಗಣ, ಆವರಣ, ಕೋಣೆಗಳು ಸೇರಿ ಒಂದಿಷ್ಟೂ ಸ್ಥಳ ಬಿಡದೆ ಶ್ವಾನದೊಂದಿಗೆ ಎರಡು ಗಂಟೆ ಶೋಧ ನಡೆಸಿದರೂ ಪತ್ತೆಯಾಗದ್ದರಿಂದ ಹುಸಿ ಇಮೇಲ್ ಎಂಬುದು ಖಾತ್ರಿಯಾಯಿತು.
"
ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ ಇಮೇಲ್ ಬಂದಿದ್ದರಿಂದ ಕೂಡಲೇ ಎಲ್ಲೆಡೆ ಶೋಧ ನಡೆಸಲಾಗಿದೆ. ಶಹಾಪುರ, ಸುರಪುರ ಕೋರ್ಟ್ಗಳಲ್ಲೂ ತಪಾಸಣೆ ಮಾಡಿಸಿದ್ದು, ಎಲ್ಲೂ ಬಾಂಬ್ ಪತ್ತೆಯಾಗಿಲ್ಲ. ಕೋರ್ಟ್ನ ಅನುಮತಿ ಪಡೆದು ದೂರು ದಾಖಲಿಸಲಾಗುವುದು.
— > ಪೃಥ್ವಿಕ್ ಶಂಕರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ