ಬಾಂಬ್ ಹಾಕುವುದಾಗಿ ಬಂದಿರುವ ಮೇಲ್ ಸಂದೇಶ.
ನೆಲಮಂಗಲ : ತರಗತಿಯಲ್ಲೇ ಮೆಡಿಕಲ್ ವಿದ್ಯಾರ್ಥಿನಿಗೆ ಪ್ರೇಮ ನಿವೇದನೆ ಮಾಡಿದ್ದ ಪ್ರಾಧ್ಯಾಪಕನಿಗೆ ವಿದ್ಯಾರ್ಥಿಗಳು ಥಳಿಸಿದ್ದರಿಂದ ಅಪರಿಚಿತರು ಪ್ರತಿಷ್ಠಿತ ಕಾಲೇಜಿನ ಇ&ಮೇಲ್ಗೆ ಬಾಂಬ್ ಬೆದರಿಕೆ ಸಂದೇಶ ಕಳುಹಿಸಿದ್ದು, ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ತಾಲೂಕಿನ ಟಿ.ಬೇಗೂರಿನ ಖಾಸಗಿ ಮೆಡಿಕಲ್ ಕಾಲೇಜಿನಲ್ಲಿ ಬುಧವಾರ ವಿದ್ಯಾರ್ಥಿನಿಗೆ ಪ್ರೀತಿ ನಿವೇದನೆ ಮಾಡಿದ್ದಾನೆ ಎಂದು ಉಪನ್ಯಾಸಕ ಡಾ.ಅಬ್ದುಲ್ ಮೇಲೆ ವಿದ್ಯಾರ್ಥಿಗಳು ಹಲ್ಲೆ ಮಾಡಿದ್ದರು. ಗುರುವಾರ ವಿಡಿಯೋ ವೈರಲ್ ಆಗಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪ್ರಧ್ಯಾಪಕನಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಿದ್ದರು. ಆದರೆ, ಶುಕ್ರವಾರ ರಾತ್ರಿ 2.45ಕ್ಕೆ ಕಾಲೇಜಿನ ಇ&ಮೇಲ್ಗೆ ಅಪರಿಚಿತರು ಕಾಲೇಜಿನ ಮೇಲೆ ಬಾಂಬ್ ಹಾಕುವುದಾಗಿ ಬೆದರಿಕೆ ಸಂದೇಶ ಕಳುಹಿಸಿದ್ದಾರೆ. ಬೆದರಿಕೆ ಸಂದೇಶ ಬಂದಿದೆ ಎಂದು ತಿಳಿಯುತ್ತಿದ್ದಂತೆ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು, ವೈದ್ಯರು ಆತಂಕದಿಂದ ಹೊರಗೆ ಬಂದರು.
ಪೊಲೀಸರ ತಂಡ ಹಾಗೂ ಶ್ವಾನದಳ, ಬಾಂಬ್ ನಿಷ್ಕ್ರಿಯ ದಳದ ಅಧಿಕಾರಿಗಳು ಆಗಮಿಸಿ ಕಾಲೇಜು ಸುತ್ತಮುತ್ತಲು ಹಾಗೂ ವಿವಿಧ ಭಾಗಗಳಲ್ಲಿ ಪರಿಶೀಲನೆ ಮಾಡಿದ್ದಾರೆ. ಯಾವುದೇ ಬಾಂಬ್ ಕಂಡುಬಂದಿಲ್ಲ. ಹುಸಿ ಬಾಂಬ್ ಸಂದೇಶ ಎಂದು ಡಿವೈಎಸ್ಪಿ ಜಗದೀಶ್ ತಿಳಿಸಿದ್ದು, ಈ ವಿಚಾರವಾಗಿ ಡಾ.ಅಬ್ದುಲ್ ವಿಚಾರಣೆ ಇಲ್ಲ. ಆದರೆ, ನೋಟಿಸ್ಗೆ ಉತ್ತರ ನೀಡಲು ಠಾಣೆಗೆ ಆಗಮಿಸುತ್ತಾರೆ ಎಂದು ಮಾಹಿತಿ ನೀಡಿದರು.
ಮೇಲ್ನಲ್ಲಿ ಏನಿದೆ ? : ಸಹೋದರ ಅಬ್ದುಲ್ನನ್ನು ಅವಮಾನಿಸಿರುವುದು ಟಿಇಕೆ -ಕಾಶ್ಮೀರ ಘಟಕಗಳ ಗಮನಕ್ಕೆ ಬಂದಿದೆ. ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ಖಾಸಗಿ ಕಾಲೇಜೊಂದರ ಕ್ಯಾಂಪಸ್ನಲ್ಲಿ 15 ಸೈನೈಡ್ ಅನಿಲ ತುಂಬಿದ ಐಇಡಿಗಳನ್ನು ಮಿನಿ ಡ್ರೋನ್ ಮೂಲಕ ಇಟ್ಟಿದ್ದು, ನಮಗೆ ಆಸ್ತಿ ಹಾನಿ ಮಾಡುವುದು ಮಾತ್ರ ಬೇಕಾಗಿರುವ ಕಾರಣ ವಿದ್ಯಾರ್ಥಿಗಳನ್ನು ಕ್ಯಾಂಪಸ್ನಿಂದ ಸ್ಥಳಾಂತರಿಸಿ ಎಂಬ ಸಂದೇಶ ಇ&ಮೇಲ್ ಮೂಲಕ ಸಂಸ್ಥೆಯ ಅಧಿಕೃತ ಮೇಲ್ಗೆ ಬಂದಿದೆ.