ಮನಸೂರ ರಸ್ತೆ ಬದಿಯ ಜಮೀನಿನಲ್ಲಿ ಯುವತಿಯೊಬ್ಬಳ ಶವ ಪತ್ತೆ
ಧಾರವಾಡ: ನಗರ ಹೊರವಲಯದ ಮನಸೂರ ರಸ್ತೆ ಬದಿಯ ಜಮೀನಿನಲ್ಲಿ ಬುಧವಾರ ಬೆಳಗ್ಗೆ ಯುವತಿಯೊಬ್ಬಳ ಶವ ಪತ್ತೆಯಾಗಿದೆ. ಮೃತಳನ್ನು ನಗರದ ಗಾಂಧಿ ಚೌಕ್ ನಿವಾಸಿ ಝಕಿಯಾ ಮುಲ್ಲಾ (19) ಎಂದು ಗುರುತಿಸಲಾಗಿದೆ.
ಪ್ಯಾರಾ ಮೆಡಿಕಲ್ ಕೋರ್ಸ್ ಮುಗಿಸಿದ್ದ ಝಕಿಯಾ ನೌಕರಿಗಾಗಿ ಹುಡುಕಾಟ ನಡೆಸಿದ್ದಳು. ಇದೇ ವಿಚಾರವಾಗಿ ಮಂಗಳವಾರ ಸಂಜೆ 5 ಗಂಟೆ ಸುಮಾರಿಗೆ ಹೊರ ಹೋದವಳು ರಾತ್ರಿಯಾದರೂ ಮನೆಗೆ ಬಂದಿರಲಿಲ್ಲ. ಇದರಿಂದ ಗಾಬರಿಗೊಂಡ ಪಾಲಕರು ಶಹರ ಠಾಣೆಗೆ ಮಾಹಿತಿ ನೀಡಿದ್ದರು.
ಯುವತಿಯ ಬಳಿ ಇದ್ದ ಮೊಬೈಲ್ ಟವರ್ ಲೊಕೇಶನ್ ಅತ್ತಿಕೊಳ್ಳ, ಮನಸೂರು ರಸ್ತೆ ತೋರಿಸಿದ್ದನ್ನು ಪೊಲೀಸರು ಪಾಲಕರಿಗೆ ತಿಳಿಸಿದ್ದರು. ಪೊಲೀಸ್ ಸಿಬ್ಬಂದಿ ಹಾಗೂ ಸಂಬಂಧಿಕರು ಈ ಪ್ರದೇಶದಲ್ಲಿ ತಡರಾತ್ರಿವರೆಗೆ ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ. ಬುಧವಾರ ಬೆಳಗ್ಗೆ ಈ ರಸ್ತೆ ಮಾರ್ಗವಾಗಿ ಹೋಗುತ್ತಿದ್ದವರು ಮೃತದೇಹ ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸಂಬಂಧಿಕರು ಸ್ಥಳಕ್ಕೆ ಭೇಟಿ ನೀಡಿದಾಗ ಮೃತದೇಹದ ಗುರುತು ಪತ್ತೆಯಾಗಿದೆ.
ಸ್ಥಳಕ್ಕೆ ಎಸ್ಪಿ ಗುಂಜನ್ ಆರ್ಯ ಹಾಗೂ ಗ್ರಾಮಿಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಯುವತಿಯ ಕತ್ತಿಗೆ ವೇಲ್ನಿಂದ ಬಿಗಿದು ಹತ್ಯೆ ಮಾಡಿ ನಿರ್ಜನ ಪ್ರದೇಶದಲ್ಲಿ ಎಸೆದು ಹೋಗಲಾಗಿದೆ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ. ಈ ಕುರಿತು ತನಿಖೆ ಕೈಗೊಳ್ಳಲಾಗುವುದು ಎಂದು ಎಸ್ಪಿ ಗುಂಜನ್ ಆರ್ಯ ಪ್ರತಿಕ್ರಿಯಿಸಿದರು.