Board exams for 5th and 8th grades 
ರಾಜ್ಯ

5, 8ನೇ ತರಗತಿಗಳಿಗೆ ಬೋರ್ಡ್ ಪರೀಕ್ಷೆ?

ಮಣಿಕಂಠ ಪಾ ಹಿರೇಮಠ

ಇತರ ರಾಜ್ಯಗಳಲ್ಲಿ ಜಾರಿ ಹಿನ್ನೆಲೆಯಲ್ಲಿ ರಾಜ್ಯ ಶಿಕ್ಷಣ ಇಲಾಖೆ ಚಿಂತನೆ

ಎನ್.ಎಲ್. ಶಿವಮಾದು ಬೆಂಗಳೂರು
ಪ್ರಾಥಮಿಕ ಶಾಲೆಗಳಲ್ಲಿ ಕಲಿಕಾ ಗುಣಮಟ್ಟ ಹೆಚ್ಚಿಸುವ ಉದ್ದೇಶದಿಂದ ಶಾಲಾ ಶಿಕ್ಷಣ ಇಲಾಖೆಯು ರಾಜ್ಯ ಪಠ್ಯಕ್ರಮ ವ್ಯಾಸಂಗ ಮಾಡುತ್ತಿರುವ 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್ (ಮಂಡಳಿ) ಪರೀಕ್ಷೆ ನಡೆಸಲು ಚಿಂತನೆ ನಡೆಸುತ್ತಿದೆ.
ರಾಜ್ಯದಲ್ಲಿ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳನ್ನು ಅನುತ್ತೀರ್ಣ ಮಾಡುವಂತಿಲ್ಲ ಎಂಬ ನಿಯಮವಿರುವ ಕಾರಣ ಮಕ್ಕಳು ಪರೀಕ್ಷೆ ಕುರಿತು ನಿರ್ಲಕ್ಷ್ಯ ಭಾವನೆ ಹೊಂದುತ್ತಿದ್ದಾರೆಂಬ ಆರೋಪವಿದೆ. ಶಿಕ್ಷಣ ಇಲಾಖೆಯ ಸಮೀಕ್ಷೆಗಳಲ್ಲೂ ಇದು ಸಾಬೀತಾಗಿದೆ. ಈ ಕಾರಣದಿಂದ 5 ಮತ್ತು 8ನೆ ತರಗತಿಗೆ ಮಂಡಳಿ ಪರೀಕ್ಷೆ ನಡೆಸುವುದರಿಂದ ಒಂದಿಷ್ಟು ಗುಣಮಟ್ಟ ಕಾಪಾಡಿದಂತಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
 ಈ ಕುರಿತು ಇತ್ತೀಚೆಗೆ ಇಲಾಖೆ ಸಭೆಯೊಂದರಲ್ಲಿ ಚರ್ಚೆ ಆಗಿದೆ. ರಾಜ್ಯದಲ್ಲಿ ಮಂಡಳಿ ಪರೀಕ್ಷೆ ನಡೆಸುವ ಸಂಬಂಧ 2022ರಲ್ಲಿಯೇ ಆದೇಶ ಮಾಡಲಾಗಿತ್ತು. ಆದರೆ, ಖಾಸಗಿ ಶಾಲೆಗಳು ಸರ್ಕಾರದ ಆದೇಶ ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿದ್ದವು. ಸದ್ಯ ಪ್ರಕರಣ ಸುಪ್ರೀಂಕೋರ್ಟ್​ನಲ್ಲಿದೆ. ಹೀಗಾಗಿ ಪ್ರಕರಣ ತೆರವುಗೊಳಿಸಿದ ನಂತರ ಮುಂದಿನ ಕ್ರಮ ಕೈಗೊಳ್ಳಬೇಕೆಂದು ಇಲಾಖೆ ನಿರ್ಣಯ ಕೈಗೊಂಡಿರು ವುದಾಗಿ ಇಲಾಖೆಯ ಉನ್ನತ ಮೂಲಗಳು ಖಚಿತಪಡಿಸಿವೆ.
ಮಂಡಳಿ ಪರೀಕ್ಷೆ ಉದ್ದೇಶ: ಶಾಲಾ ಹಂತದಲ್ಲಿ 1ರಿಂದ 9ನೇ ತರಗತಿಯವರೆಗೆ ನಿರಂತರ ಕಲಿಕಾ ಮೌಲ್ಯಮಾಪನ (ಸಿಸಿಇ) ಅಡಿ ಮೌಲ್ಯಾಂಕನ ವಿಶ್ಲೇಷಣೆ ಮಾಡುತ್ತಿದ್ದು, ವಾರ್ಷಿಕ ಪರೀಕ್ಷೆ ನಿರ್ವಹಿಸುತ್ತಿಲ್ಲ. ಇದರಿಂದ ರಾಜ್ಯ ಪಠ್ಯಕ್ರಮದ ಎಲ್ಲ ಶಾಲೆಗಳಲ್ಲಿನ ವಿದ್ಯಾರ್ಥಿಗಳ ಸಾಧನೆ ಯಾವ ರೀತಿಯಲ್ಲಿದೆ ಎಂಬು ದನ್ನು ನಿಖರವಾಗಿ ತಿಳಿಯಲು ಸಾಧ್ಯವಾಗುತ್ತಿಲ್ಲ. 
ಮಕ್ಕಳ ಕಲಿಕಾ ಮಟ್ಟವೇನು? ಕೊರತೆಗಳೇನು? ಯಾವ ವಿಷಯದಲ್ಲಿ ಹಿನ್ನಡೆ ಯಾಗಿದೆ? ಎಂಬುದನ್ನು ನಿವಾರಿಸಿ ವಿದ್ಯಾರ್ಥಿಗಳ ಕಲಿಕಾ ಪ್ರಗತಿ/ಸಾಮರ್ಥ್ಯ ತಿಳಿಯುವುದ ಕ್ಕಾಗಿ ಮೌಲ್ಯಮಾಪನ ವಿಶ್ಲೇಷಣೆ ಅವಶ್ಯವಿದೆ.
ಈ ಹಿನ್ನೆಲೆಯಲ್ಲಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ (ಕೆಎಸ್​ಇಎಬಿ) ಹಂತದಲ್ಲಿ ಪ್ರಶ್ನೆಪತ್ರಿಕೆ ರೂಪಿಸಿ ಸರಬರಾಜು ಮಾಡಿ ಶಾಲಾ ಹಂತದಲ್ಲಿಯೇ ಪರೀಕ್ಷೆ ನಿರ್ವಹಿಸಲಾಗುತ್ತಿದೆ. ಮೌಲ್ಯಂಕನ ವಿಶ್ಲೇಷಣೆ ಆಡಿ ಕಲಿಕಾ ಪ್ರಗತಿ ಕುಂಠಿತವಾಗಿರುವ ವಿಷಯವಾರು, ಶಾಲಾವಾರು ಕ್ಲಸ್ಟರ್/ತಾಲ್ಲೂಕುವಾರು ವಿಶ್ಲೇಷಿಸಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಅಗತ್ಯ ಕ್ರಿಯಾ ಯೋಜನೆಯನ್ನು ರಚಿಸಿ ಬೋಧನಾ-ಕಲಿಕಾ ಪ್ರಕ್ರಿಯೆ ಬಲವರ್ಧನೆಗೊಳಿಸುವ ಉದ್ದೇಶ ಹೊಂದಿದೆ.
5 ಮತ್ತು 8ನೇ ತರಗತಿ ಮಕ್ಕಳಿಗೆ 60 ಅಂಕಗಳಿಗೆ ಸಿಸಿಇ ಮೌಲ್ಯಮಾಪನ ಮತ್ತು 40 ಅಂಕಗಳಿಗೆ ಲಿಖಿತ ಪರೀಕ್ಷೆ ನಡೆಸುವ ಉದ್ದೇಶ ಹೊಂದಲಾಗಿತ್ತು.
"

ರಾಜ್ಯದಲ್ಲಿ 5 ಮತ್ತು 8ನೇ ತರಗತಿಗೆ ಮಂಡಳಿ ಪರೀಕ್ಷೆ ನಡೆಸುವ ಬಗ್ಗೆ ಚರ್ಚೆ ನಡೆ ಯುತ್ತಿವೆ. ಸುಪ್ರೀಂಕೋರ್ಟ್​ನಲ್ಲಿರುವ ಪ್ರಕರಣ ಇತ್ಯರ್ಥಗೊಂಡ ನಂತರ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ.

ರಶ್ಮಿ ಮಹೇಶ್ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಧಾನ ಕಾರ್ಯದರ್ಶಿ

ಎಲ್ಲೆಲ್ಲಿದೆ ಬೋರ್ಡ್ ಪರೀಕ್ಷೆ?

 2025-26ನೇ ಸಾಲಿನಿಂದಲೇ ಕೇಂದ್ರ ಸರ್ಕಾರ ತನ್ನ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೇಂದ್ರೀಯ ವಿದ್ಯಾಲಯ, ಸೈನಿಕ ಶಾಲೆಗಳು, ನವೋದಯ ಶಾಲೆಗಳಲ್ಲಿ 5 ಮತ್ತು 8ನೇ ತರಗತಿಗೆ ಮಂಡಳಿ ಪರೀಕ್ಷೆ ನಿಯಮ ಜಾರಿಗೊಳಿಸಿದೆ. ಇದೇ ನಿಯಮವನ್ನು ಈ ಬಾರಿ ಮಧ್ಯಪ್ರದೇಶ ಸರ್ಕಾರ ಕೂಡ ಅಳವಡಿಸಿಕೊಂಡಿದೆ.

ಆರ್​ಟಿಇ ಏನು ಹೇಳುತ್ತೆ?

ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ-2009 (ಆರ್​ಟಿಇ) ಪ್ರಕಾರ, ಯಾವುದೇ ಮಗುವು ಶಿಕ್ಷಣದಿಂದ ವಂಚಿತವಾಗಬಾರದು. ಪ್ರತಿ ಶೈಕ್ಷಣಿಕ ವರ್ಷದ ಕೊನೆಯಲ್ಲಿ 5 ಮತ್ತು 8ನೇ ತರಗತಿ ಪರೀಕ್ಷೆ ನಡೆಸಬೇಕು. ಮುಖ್ಯ ಪರೀಕ್ಷೆಯಲ್ಲಿ ಮಗುವು ಅನುತ್ತೀರ್ಣರಾದಲ್ಲಿ ಫಲಿತಾಂಶ ಪ್ರಕಟವಾದ 2 ತಿಂಗಳೊಳಗೆ ಪೂರಕ ಪರೀಕ್ಷೆ ನಡೆಸುವ ಮೂಲಕ ಮತ್ತೊಂದು ಅವಕಾಶ ಕಲ್ಪಿಸಬೇಕು. ಪೂರಕ ಪರೀಕ್ಷೆಯಲ್ಲಿಯೂ ಮಗುವು ವಿಫಲವಾದರೆ, ಪ್ರಾಥಮಿಕ ಶಿಕ್ಷಣ ಮುಗಿಯುವವರೆಗೆ ಮಗುವನ್ನು ತಡೆಹಿಡಿಯದಿರಲು ಸರ್ಕಾರವು ಸೂಕ್ತ ಕ್ರಮ ವಹಿಸಬೇಕು.