ಕರ್ನಾಟಕ ಹೈಕೋರ್ಟ್ : ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಥವಾ ಕರ್ನಾಟಕ ಮಾಧ್ಯಮ ಅಕಾಡೆಮಿ ನೌಕರರು ಸರ್ಕಾರಿ ನೌಕರರಾಗಿದ್ದರೂ ಅವರ ಸೇವೆಯನ್ನು ಪಿಂಚಣಿಗೆ ಅರ್ಹಗೊಳಿಸುವ ಯಾವುದೇ ನಿಬಂಧನೆ ಇಲ್ಲ. ಹೀಗಾಗಿ, ಪಿಂಚಣಿ ಪಡೆಯಲು ಅರ್ಹರಲ್ಲ ಎಂದು ಕರ್ನಾಟಕ ಹೈಕೋರ್ಟ್(High Court) ತೀರ್ಪು ನೀಡಿದೆ. ಮಾಧ್ಯಮ ಅಕಾಡೆಮಿ ನಿವೃತ್ತ ಸಿಬ್ಬಂದಿ ಯಲಗಯ್ಯ, ಆರ್.ಜಿ. ಸಿದ್ದರಾಮೇಶ್ ಮತ್ತಿತರರು ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿದ್ದ ಏಕಸದಸ್ಯ ಪೀಠ ಅರ್ಜಿದಾರರಿಗೆ ಪಿಂಚಣಿ ಮತ್ತು ಭತ್ಯೆ ನೀಡುವಂತೆ ಆದೇಶಿಸಿತ್ತು. ಅದನ್ನು ಪ್ರಶ್ನಿಸಿ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಗಳನ್ನು ನ್ಯಾಯಮೂರ್ತಿಗಳಾದ ಅನು ಶಿವರಾಮನ್ ಮತ್ತು ವಿಜಯಕುಮಾರ್ ಪಾಟೀಲ್ ಅವರ ನ್ಯಾಯಪೀಠ ಪುರಸ್ಕರಿಸಿದೆ.
ಎಲ್ಲಾ ಸಂಬಂಧಿತ ಅಂಶಗಳು ಮತ್ತು ಇತರ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಹೊರಡಿಸಲಾದ ಆದೇಶಗಳನ್ನು ಗಮನಿಸಿ ಮಾಹಿತಿಯುಕ್ತ ನಿರ್ಧಾರ ತೆಗೆದುಕೊಳ್ಳುವುದು ಮತ್ತು ಅರ್ಜಿದಾರರ ಉದ್ಯೋಗವನ್ನು ಪಿಂಚಣಿಗೆ ಅರ್ಹಗೊಳಿಸಬೇಕೆ ಎಂದು ನಿರ್ಧಾರ ತೆಗೆದುಕೊಳ್ಳುವುದು ಸರ್ಕಾರದ ವಿವೇಚನೆಗೆ ಬಿಟ್ಟಿದ್ದಾಗಿದೆ ಎಂದೂ ನ್ಯಾಯಾಲಯ ಹೇಳಿದೆ. ಅಲ್ಲದೇ, ನಾಲ್ಕು ತಿಂಗಳಲ್ಲಿ ಮಾಧ್ಯಮ ಅಕಾಡೆಮಿ ಮತ್ತು ಮದ್ಯಪಾನ ಸಂಯಮ ಮಂಡಳಿಯನ್ನು ಆಲಿಸಿದ ನಂತರ ಮಾಹಿತಿಯುಕ್ತ ಆದೇಶವನ್ನು ಹೊರಡಿಸುವಂತೆ ಸರ್ಕಾರಕ್ಕೆ ನ್ಯಾಯಾಲಯ ನಿರ್ದೇಶನ ನೀಡಿದೆ.
ರಾಜ್ಯ ಸರ್ಕಾರ ಪರ ಹೆಚ್ಚುವರಿ ಅಡ್ವೊಕೇಟ್ ಜನರಲ್ ರೊಬೆನ್ ಜಾಕಬ್ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಥವಾ ಮಾಧ್ಯಮ ಅಕಾಡೆಮಿಯ ನೌಕರರು ಸರ್ಕಾರದ ಸೇವೆಯಲ್ಲಿಲ್ಲ ಮತ್ತು ಕರ್ನಾಟಕ ನಾಗರಿಕ ಸೇವೆಗಳ 1957 (ಕೆಸಿಎಸ್‌ಆರ್) ಅಡಿಯಲ್ಲಿ ಒದಗಿಸಲಾದ ವ್ಯಾಖ್ಯಾನದ ಪ್ರಕಾರ ಅವರು ಸರ್ಕಾರಿ ನೌಕರರಲ್ಲ ಎಂದು ವಾದ ಮಂಡಿಸಿದರು.
ಪ್ರತಿವಾದಿಗಳ ಪರ ವಕೀಲರಾದ ಪೃಥ್ವೀನ್ ಪ್ರಹ್ಲಾದ್ ಕಟ್ಟೀಮನಿ ಮತ್ತು ರಂಗನಾಥ್ ಜೋಯಿಷ್ ಅವರು ಅಕಾಡೆಮಿ ಮತ್ತು ಮಂಡಳಿಯು ವೃಂದ ಮತ್ತು ನೇಮಕಾತಿ ನಿಯಮಗಳನ್ನು ರೂಪಿಸಲು ವಿಫಲವಾಗಿದೆ ಎಂಬ ಅಂಶವು ಪರಿಸ್ಥಿತಿಯಲ್ಲಿ ಯಾವುದೇ ವ್ಯತ್ಯಾಸವನ್ನುಂಟು ಮಾಡುವುದಿಲ್ಲ. ಏಕೆಂದರೆ ನೇಮಕಾತಿಯು ಸರ್ಕಾರಿ ಸಂಸ್ಥೆಯಲ್ಲಿ ಮತ್ತು ಸರ್ಕಾರವು ಅನುಮೋದಿಸಿದ ಹುದ್ದೆಯಾಗಿರುತ್ತದೆ. ಅರ್ಜಿದಾರರಂತಹ ಉದ್ಯೋಗಿಗಳಿಗೆ ಕೆಸಿಎಸ್‌ಆರ್‌ಗಳ ನಿಬಂಧನೆಗಳನ್ನು ಅನ್ವಯಿಸಿದ ನಂತರ, ಪಿಂಚಣಿಗೆ ಸಂಬಂಧಿಸಿದ ನಿಬಂಧನೆಗಳು ಅವರಿಗೆ ಅನ್ವಯಿಸುವುದಿಲ್ಲ ಎಂದು ಹೇಳುವುದು ಸರಿಯಲ್ಲ ಎಂದು ನ್ಯಾಯಾಲಯದ ಮೊರೆ ಹೋಗಿದ್ದರು.(ಏಜೆನ್ಸೀಸ್).