- ಬೆಂಗಳೂರಿನ ಕೆಆರ್ಸರ್ಕಲ್ನಲ್ಲಿ ಬಿಎಂಟಿಸಿ ಬಸ್ ನಡುವೆ ಭೀಕರ ಅಪಘಾತ
- ಬಸ್ನಲ್ಲಿದ್ದ ಮಹಿಳೆಯರಿಗೆ ಗಾಯ, ಚಾಲಕ ಹಾಗೂ ಯುವತಿ ಆಸ್ಪತ್ರೆಗೆ ದಾಖಲು
- ನಿಂತಿದ್ದ ವಾಯು ವಜ್ರ ಬಸ್ಗೆ ಡಿಕ್ಕಿ ಹೊಡೆದ ಎಲೆಕ್ಟ್ರಿಕ್ ಬಸ್
ಬೆಂಗಳೂರು; ಇಲ್ಲಿನ ಕೆಆರ್ ಸರ್ಕಲ್ನಲ್ಲಿ ಶನಿವಾರ ಬೆಳ್ಳಂಬೆಳಗ್ಗೆ ಬಿಎಂಟಿಸಿ ಬಸ್ಗಳ ನಡುವೆ ಭೀಕರ ಅಪಘಾತ ಸಂಭವಿಸಿದೆ. ಈ ಘಟನೆಯಿಂದಾಗಿ ಎಂಟು ಮಂದಿ ಗಾಯಗೊಂಡಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.
ಇಂದು ಬೆಳಿಗ್ಗೆ ಕೃಷ್ಣರಾಜೇಂದ್ರ ವೃತ್ತ ಬಳಿ ಟ್ರಾಫಿಕ್ ಸಿಗ್ನಲ್ನಲ್ಲಿ, ಬಿಎಂಟಿಸಿ ವಾಯುವಜ್ರ ನಿಂತಿತ್ತು. ಈ ವೇಳೆ ಹಿಂಬದಿಯಿಂದ ವೇಗವಾಗಿ ಬಂದ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ನಿಂತಿದ್ದ ವಾಯುವಜ್ರಕ್ಕೆ ಡಿಕ್ಕಿ ಹೊಡೆದಿದೆ. ಬಸ್ ಗುದ್ದಿದ ರಭಸಕ್ಕೆ ಬಿಎಂಟಿಸಿ ಬಸ್‌ನ ಮುಂಭಾಗ ಸಂಪೂರ್ಣವಾಗಿ ಜಖಂಗೊಂಡಿದೆ. ಚಾಲಕ ಅಭಿಷೇಕ್ಗೆ ಗಂಭೀರ ಗಾಯವಾಗಿದೆ ಎನ್ನಲಾಗಿದೆ.
ಚಾಲಕ, ಯುವತಿ ಪರಿಸ್ಥಿತಿ ಗಂಭೀರ
ಕಲಬುರಗಿ ಮೂಲದ ಭಾಗ್ಯ ಎನ್ನುವ ಯುವತಿಯ ಎಡಗಾಲು ಸಿಕ್ಕಿಹಾಕಿಕೊಂಡಿತ್ತು. ಈ ವೇಳೆ ಸಾರ್ವಜನಿಕರು ಕಬ್ಬಿಣದ ಸಲಾಕೆಗಳನ್ನು ಹರ ಸಾಹಸಪಟ್ಟು ತುಂಡರಿಸಿ ಯುವತಿಯ ಕಾಲನ್ನು ಹೊರ ತೆಗೆಯಲು ಸಹಾಯ ಮಾಡಿದರು. ಆನಂತರ ಯುವತಿಯನ್ನು ಹಾಗೂ ಬಸ್ ಚಾಲಕ ಅಭಿಷೇಕ್ರನ್ನು ಸೇಂಟ್ ಮಾರ್ಥಾಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಕೇಂದ್ರ ಸಂಚಾರ ವಿಭಾಗದ ಅನೂಪ್ ಶೆಟ್ಟಿಯವರು ಮಾಹಿತಿ ಪಡೆದುಕೊಂಡಿದ್ದಾರೆ.
ಕೆಲವರಿಗೆ ಸಣ್ಣಪುಟ್ಟ ಗಾಯ
ಪೀಕ್ ಅವರ್ ಆದ ಕಾರಣ ಬಿಎಂಟಿಸಿ ಬಸ್ನಲ್ಲಿ ಕಚೇರಿಗೆ ಹಾಗೂ ಶಾಲಾ-ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಹೆಚ್ಚಾಗಿದ್ದರು. ಅನಿರೀಕ್ಷಿತವಾಗಿ ನಡೆದ ಈ ಅಪಘಾತದಿಂದಾಗಿ ಪ್ರಯಾಣಿಕರು ಅಘಾತಕ್ಕೆ ಒಳಗಾಗಿದ್ದರು. ಅಲ್ಲದೆ ಅಪಘಾತದಿಂದ ಮುಂದಿನ ಸೀಟಿನಲ್ಲಿ ಕುಳಿತಿದ್ದ ಮಹಿಳೆಯರಿಗೆ ಸಣ್ಣಪುಟ್ಟ ಗಾಯವಾಗಿದೆ. ಇದೇ ವೇಳೆ ಅವರ ಆಕ್ರಂದನ, ಕಿರುಚಾಟ ಮುಗಿಲುಮುಟ್ಟಿತ್ತು.
ಅತಿವೇಗದ ಚಾಲನೆಯಿಂದ ಅಪಘಾತ
ಎಲೆಕ್ಟ್ರಿಕ್ ಬಸ್ ಚಾಲಕ ಅತಿವೇಗವಾಗಿ ಬಸ್ ಚಾಲನೆ ಮಾಡಿದ್ದರಿಂದಲೇ ಅಪಘಾತಕ್ಕೆ ಕಾರಣವಾಗಿದೆ ಎಂದು ಸಂಚಾರಿ ಪೊಲೀಸರು ತಿಳಿಸಿದ್ದಾರೆ. ಇದಲ್ಲದೆ ಸಂಚಾರ ಮಾರ್ಗ ಬದಲಾವಣೆ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಹಾರಾಣಿ ಕಾಲೇಜು ಅಪ್ಪರ್ ರ‍್ಯಾಂಪ್ ಬಳಿ ಅಪಘಾತ ಸಂಭವಿಸಿರುವುದರಿಂದ ಕೆ.ಆರ್ ವೃತ್ತದ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ ಎಂದು ಎಕ್ಸ್ನಲ್ಲಿ ಮಾಹಿತಿ ನೀಡಲಾಗಿದೆ, (ಏಜೆನ್ಸೀಸ್).