MP Tejasvi Surya on BMTC Bus Shortage
- ಬಿಎಂಟಿಸಿ ಬಸ್ಗಳಲ್ಲಿ ಪ್ರಯಾಣಿಸುವವರ ಗೋಳು ಕೇಳಿದ ಸಂಸದ
- ಬೆಂಗಳೂರಿಗೆ ಹೆಚ್ಚುವರಿ ಬಸ್ ತರುವಂತೆ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡ ತೇಜಸ್ವಿ ಸೂರ್ಯ
- ಐದು ನಿಮಿಷಕ್ಕೊಮ್ಮೆ ಬಸ್ಗಳು ಪ್ರಯಾಣಿಕರಿಗೆ ಸಿಗುವಂತೆ ವ್ಯವಸ್ಥೆ ಕಲ್ಪಿಸಲು ಮನವಿ
ಬೆಂಗಳೂರು: ಬನಶಂಕರಿಯಿಂದ ಕತ್ರಿಗುಪ್ಪೆಗೆ ಪ್ರಯಾಣಿಸಿದ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು ಪ್ರಯಾಣಿಕರು ನಿತ್ಯ ಎದುರಿಸುತ್ತಿರುವ ಸಮಸ್ಯೆ, ಬಸ್ಗಳ ವಿಳಂಬದ(BMTC Bus Shortage) ಎಕ್ಸ್ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ, ಖುದ್ದು ಫೀಲ್ಡಿಗಿಳಿದು ಮಾಡಿರುವ ರಿಪೋರ್ಟ್ ಸದ್ಯ ವೈರಲ್ ಆಗಿದೆ.
ಜನರ ಕಷ್ಟ ಕೇಳಿ ಮಂತ್ರಿಗಳೇ
ಬೆಂಗಳೂರಿನಲ್ಲಿ ಪ್ರತಿನಿತ್ಯ 45 ಲಕ್ಷ ಜನರು ಬಿಎಂಟಿಸಿ ಬಸ್ ನಲ್ಲಿ ಓಡಾಡುತ್ತಾರೆ.45 ಲಕ್ಷ ಜನರ ಪ್ರತಿನಿತ್ಯದ ಬವಣೆ ಇದು. ಕರ್ನಾಟಕ ಸರ್ಕಾರದ ಬಳಿ ಶ್ರೀಮಂತರಿಗಾಗಿ ಸಾವಿರಾರು ಕೋಟಿಯ ಟನಲ್ ರೋಡ್ ಕಟ್ಟಲು ದುಡ್ಡಿದೆ. ಬಿಎಂಟಿಸಿ ಬಸ್ ನಿಂದ ಜನಸಾಮಾನ್ಯರು ಪಡುತ್ತಿರುವ ಕಷ್ಟ ಕೇಳಲು ಮನಸ್ಸಿಲ್ಲವಾ. ಒಮ್ಮೆಯಾದರೂ ಬಿಎಂಟಿಸಿ ಬಸ್ ನಲ್ಲಿ ಓಡಾಡಿ ಜನಸಾಮಾನ್ಯರ ಕಷ್ಟ ಕೇಳಿ ಮಾನ್ಯ ಮುಖ್ಯಮಂತ್ರಿಗಳೇ ಎಂದು ಬರೆದುಕೊಂಡಿದ್ದಾರೆ,
ಬಸ್ ಸಂಖ್ಯೆ ಹೆಚ್ಚಿಸಿ
ಉತ್ತಮ ಸಾರಿಗೆ ವ್ಯವಸ್ಥೆ ಪಾದಾಚಾರಿ ಮಾರ್ಗವಿಲ್ಲದೆ, ಜನರು ಸುಗಮವಾಗಿ ಸಂಚರಿಸಲು ಸಾಧ್ಯವಾಗೋದಿಲ್ಲ. ಬೆಂಗಳೂರಿನಲ್ಲಿ 15 ಸಾವಿರ ಬಿಎಂಟಿಸಿ ಬಸ್ಗಳನ್ನು ಹೆಚ್ಚಿಸಬೇಕು. ಯಾವುದೇ ಭಾಗದಲ್ಲಿಯಾದರೂ ಜನರಿಗೆ ಐದು ನಿಮಿಷಕ್ಕೊಮ್ಮೆ ಬಸ್ ಸಿಗುವಂತಹ ವ್ಯವಸ್ಥೆ ಜಾರಿ ಮಾಡಬೇಕು. ಆದರೆ, ಅರ್ಧ ಗಂಟೆ ಕಾದರೂ ಕೆಲವೊಮ್ಮೆ ಬಸ್ ಬರೋದಿಲ್ಲ. ಪ್ರಯಾಣಿಕರು ಬಸ್ಗಾಗಿ ಕಾಯುತ್ತ ನಿಲ್ಲಬೇಕೇ ಅಥವಾ ಕಚೇರಿಗಳಿಗೆ ತೆರಳಿ ಕೆಲಸ ಮಾಡಬೇಕೆ ಎಂದು ಕಿಡಿಕಾರಿ ಪೋಸ್ಟ್ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.
ಬಸ್ಗಳಿಗಾಗಿ ಕೇಂದ್ರದಿಂದ ಹಣ ಮಂಜೂರು
ಕೇಂದ್ರ ಸರ್ಕಾರದಿಂದ ನಮ್ಮ ಬೆಂಗಳೂರಿಗೆ ಮಂಜೂರಾಗಿರುವ 4,500 ಎಲೆಕ್ಟ್ರಿಕ್ ಬಸ್ ಗಳನ್ನು ತರುವ ಯೋಗ್ಯತೆ ರಾಜ್ಯ ಸರ್ಕಾರಕ್ಕೆ ಇಲ್ಲ, ಆದರೆ 40,000 ಕೋಟಿ ರೂ, ದುಡ್ಡನ್ನು ಸುರಂಗಕ್ಕೆ ಚೆಲ್ಲಲು ಮಾತ್ರ ಯಾವ ಅಡ್ಡಿ - ಆತಂಕವೂ ಇಲ್ಲ. ಬಡವರ ಹೊಟ್ಟೆ ಉರಿಸಿ, ನಿಮ್ಮ ಜೇಬು ತುಂಬಿಸಿಕೊಳ್ಳುವ ಈ 'ಸುರಂಗ' ದಾರಿ ಯಾವ ಪುರುಷಾರ್ಥಕ್ಕೆ ಮಾನ್ಯ ಮುಖ್ಯಮಂತ್ರಿಗಳೇ. ಸಾಮಾನ್ಯ ಜನರ ಪ್ರಯಾಣ ನರಕ, ಇವರ ಕಮಿಷನ್ ಹಪಾಹಪಿತನ ಮಾತ್ರ ನಿರಾತಂಕ ಎಂದು ಬರೆದುಕೊಂಡಿದ್ದಾರೆ, (ಏಜೆನ್ಸೀಸ್).