ಸಮಾಜ ಸೇವಕ ಗ್ರಾನೈಟ್ ರಾಜಶೇಖರ್ ಜನ್ಮದಿನದ ಅಂಗವಾಗಿ ಅಭಿಮಾನಿಗಳು ಪಟ್ಟಣದ ಶ್ರೀ ಶಿವಕುಮಾರ ಸ್ವಾಮೀಜಿ ಕಲ್ಯಾಣ ಮಂಟಪದಲ್ಲಿ ಗಣ್ಯರ ಸಮ್ಮುಖದಲ್ಲಿ ರಕ್ತದಾನ ಮಾಡುತ್ತಿರುವುದು 
ರಾಜ್ಯ

ರಕ್ತದಾನ ಶಿಬಿರ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಬೇಲೂರು: ಸಮಾಜ ಸೇವಕ ಗ್ರಾನೈಟ್ ರಾಜಶೇಖರ್ ಅವರ 63ನೇ ಜನ್ಮದಿನದ ಅಂಗವಾಗಿ ಅಭಿಮಾನಿಗಳು ಪಟ್ಟಣದ ಶ್ರೀ ಶಿವಕುಮಾರ ಸ್ವಾಮೀಜಿ ಕಲ್ಯಾಣ ಮಂಟಪದಲ್ಲಿ ವಿವಿಧ ಮಠಾಧೀಶರ ಸಮ್ಮುಖದಲ್ಲಿ ರಕ್ತದಾನ ಶಿಬಿರ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಆಯೋಜಿಸುವ ಮೂಲಕ ಸೋಮವಾರ ಆಚರಿಸಿದರು.
ತೆಂಕಲಗೋಡು ಯಸಳೂರು ಬೃಹನ್ ಮಠದ ಶ್ರೀ ಚನ್ನಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ಬೇಲೂರು ತಾಲೂಕಿನಲ್ಲಿ ದೇವಸ್ಥಾನ, ಮಠ ಮಾನ್ಯ ಹಾಗೂ ಸಾಮಾಜಿಕ ಕಾರ್ಯಗಳಿಗೆ, ವಿದ್ಯಾರ್ಥಿಗಳು, ಬಡವರಿಗೆ ಸದಾ ಕೈಲಾದ ಸಹಾಯ ಮಾಡುತ್ತ ಮುಂಚೂಣಿಯಲ್ಲಿ ನಿಲ್ಲುವ ವ್ಯಕ್ತಿ ಎಂದರೆ ಸಮಾಜ ಸೇವಕ ಗ್ರಾನೈಟ್‌ರಾಜಶೇಖರ್, ಅವರು ತಮ್ಮ ಸಾಮಾಜಿಕ ಕಳಕಳಿ ಹಾಗೂ ಪ್ರೀತಿಯ ಮೂಲಕ ತಾಲೂಕಿನಾದ್ಯಂತ ಜನರ ಮನ ಗೆದ್ದಿದ್ದಾರೆ. ಇಂದು ತಮ್ಮ 63ನೇ ವಸಂತಕ್ಕೆ ಪಾದಾರ್ಪಣೆ ಮಾಡುತ್ತಿರ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು, ಹಿತೈಷಿಗಳು ಜನ್ಮ ದಿನದವನ್ನು ವಿಶೇಷವಾಗಿ ಆಚರಿಸುತ್ತಿರುವುದು ಶ್ಲಾಘನೀಯವಾಗಿದೆ. ಹುಟ್ಟುಹಬ್ಬ ಎಂದರೆ ಕೇವಲ ಸಂಭ್ರಮಾಚರಣೆಯಷ್ಟೇ ಅಲ್ಲ ಇಂತಹ ಕಾರ್ಯಕ್ರಮ ಆಯೋಜಿಸಿರುವುದು ಅತ್ಯಂತ ಶ್ಲಾಘನೀಯವಾಗಿದ್ದು ಸಮಾಜಕ್ಕೆ ಮಾದರಿಯಾಗಿದೆ ಎಂದರು.
ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಬಿ.ಶಿವರಾಜು ಮಾತನಾಡಿ, ರಕ್ತದಾನ ಮಹಾದಾನ. ಒಬ್ಬರು ಮಾಡವ ರಕ್ತದಾನವು ಮೂರು ಜನರ ಜೀವ ಉಳಿಸಲು ಸಹಕಾರಿಯಾಗುತ್ತದೆ. ಸಮಾಜ ಸೇವಕ ಗ್ರಾನೈಟ್ ರಾಜಸೇಖರ್ ಹುಟ್ಟು ಹಬ್ಬದ ಹೆಸರಲ್ಲಿ ಇಂತಹ ಕಾರ್ಯಕ್ರಮ ಶ್ಲಾಘನೀಯ. ಜತೆಗೆ ತಾಲೂಕಿನಲ್ಲಿ ಎಸೆಸೆಲ್‌ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಪ್ರತಿಭಾ ಪುರಸ್ಕಾರದ ಮೂಲಕ ಗೌರವಿಸುವುದು ವಿದ್ಯಾರ್ಥಿಗಳ ಭವಿಷ್ಯಕ್ಕೆ ಪ್ರೇರಣೆ ನೀಡುವಂತ್ತದ್ದಾಗಿದೆ. ಮತ್ತು ಕನ್ನಡದ ಪ್ರಥಮ ಶಿಲಾ ಶಾಸನ ದೊರೆತ ಹಲ್ಮಿಡಿ ಗ್ರಾಮದಲ್ಲಿ ಶಾಶನದ ಪ್ರತಿಕೃತಿ ಮಂಟಪವನ್ನು 28 ಲಕ್ಷ ರೂ. ಸ್ವಂತ ಹಣದಲ್ಲಿ ಅಭಿವೃದ್ಧಿಪಡಿಸಿರುವುದು ಅವರ ಕೆಲಸಕ್ಕೆ ಸಾಕ್ಷಿಯಾಗಿದೆ. ಅವರು ಇನ್ನಷ್ಟು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಮಾಜ ಸೇವೆಯಲ್ಲಿ ಹೆಚ್ಚಿನ ಸಾಧನೆ ಮಾಡಲಿ ಎಂದರು.
ಗ್ರಾನೈಟ್ ರಾಜಶೇಖರ್ ಮಾತನಾಡಿ, ನಾನು ನನ್ನ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುವುದಿಲ್ಲ. ಆದರೆ ನಮ್ಮ ಅಭಿಮಾನಿಗಳು ಹುಟ್ಟು ಹಬ್ಬವನ್ನು ಆಚರಿಸುವ ಸಲುವಾಗಿ ರಕ್ತದಾನ ಶಿಬಿರ, ಪ್ರತಿಭಾ ಪುರಸ್ಕಾರ ಆಯೋಜಿಸಿ, ದಾಸೋಹದ ಮೂಲಕ ಆಚರಿಸಲು ಮುಂದಾಗಿದ್ದಾರೆ. ರಕ್ತವನ್ನು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲ. ಆದ್ದರಿಂದ ಒಬ್ಬರು ನೀಡುವ ರಕ್ತ ಮೂವರ ಜೀವ ಉಳಿಸುವುದು ಸಾರ್ಥಕತೆಗೆ ಸಾಕ್ಷಿಯಾಗುತ್ತದೆ. ಜತೆಗೆ ವಿದ್ಯಾರ್ಥಿಗಳ ಮುಂದಿನ ಭವಿಷ್ಯ ರೂಪಿಸುವಲ್ಲಿ ಇದು ಸಹಕಾರಿ. ಇಂತಹ ಸಮಾಜ ಮುಖಿ ಕೆಲಸಗಳ ಮೂಲಕ ಆಚರಿಸಿರುವುದು ಸಂತೋಷ ತಂದಿದೆ ಎಂದರು.
ಪುರಸಭೆ ಅಧ್ಯಕ್ಷ ಅಕ್ರಂ ಷರೀಫ್, ವೀರಶೈವ-ಲಿಂಗಾಯತ ಯುವ ಘಟಕದ ಮಾಜಿ ಅಧ್ಯಕ್ಷ ಚೇತನ್ ಗೆಂಡೇಹಳ್ಳಿ, ಮಹಿಳಾ ಘಟಕದ ಅಧ್ಯಕ್ಷೆ ವಿಂಪು ಸಂತೋಷ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮದೇಗೌಡ, ಅಭಿಮಾನಿ ಬಳಗದ ಧರ್ಮಪಾಲ್, ಭರತ್, ಮಸಾಲೆ ಮಂಜು, ರವಿ, ಲಕ್ಷ್ಮೀನಾರಾಯಣ ಸೇರಿದಂತೆ ಇತರರಿದ್ದರು.