ಅಂಧರ ಟಿ20 ವಿಶ್ವಕಪ್: ಭಾರತದ ಮಹಿಳೆಯರಿಗೆ ಹ್ಯಾಟ್ರಿಕ್ ಜಯ
- ಅಂಧರ ಕ್ರಿಕೆಟ್ ಟೂರ್ನಿಗೂ ಜಾಗತಿಕ ಮನ್ನಣೆ ಸಿಗುವಂತಾಗಲಿ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್
- ಅಂಧ ಮಹಿಳೆಯರ ಟಿ20 ವಿಶ್ವಕಪ್ ಟೂರ್ನಿ ಬೆಂಗಳೂರು ಚರಣಕ್ಕೆ ಚಾಲನೆ
- ಭಾರತ - ನೇಪಾಳ ನಡುವಿನ ಪಂದ್ಯ ವೀಕ್ಷಿಸಿದ ಸಚಿವರು
ಬೆಂಗಳೂರು: ಆತಿಥೇಯ ಭಾರತ ತಂಡ ಚೊಚ್ಚಲ ಆವೃತ್ತಿಯ ಅಂಧ ಮಹಿಳೆಯರ ಟಿ20 ವಿಶ್ವಕಪ್ (blind womens t20 cricket world cup) ಟೂರ್ನಿಯಲ್ಲಿ ಹ್ಯಾಟ್ರಿಕ್ ಗೆಲುವಿನ ಸಂಭ್ರಮ ಕಂಡಿದೆ. ತಿರುಮೇನಹಳ್ಳಿಯ ಸಂಪ್ರಸಿದ್ಧಿ ಸ್ಪೋರ್ಟ್ಸ್ ಎಸ್ಟಾಡಿಯೊದಲ್ಲಿ ಶುಕ್ರವಾರ ಆರಂಭಗೊಂಡ ಬೆಂಗಳೂರು ಚರಣದ ಮೊದಲ ಪಂದ್ಯದಲ್ಲಿ ಭಾರತ ತಂಡ ನೇಪಾಳ ವಿರುದ್ಧ 85 ರನ್ಗಳಿಂದ ಗೆಲುವು ದಾಖಲಿಸಿತು. ಈ ಮೂಲಕ 6 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಭದ್ರಪಡಿಸಿಕೊಂಡಿತು.
ಮೊದಲು ಬ್ಯಾಟಿಂಗ್ಗೆ ಇಳಿದ ಭಾರತ ತಂಡ ನಾಯಕಿ ಹಾಗೂ ಕನ್ನಡತಿ ದೀಪಿಕಾ ಟಿ.ಸಿ. (78*ರನ್, 46 ಎಸೆತ) ಮತ್ತು ಸಿಮು ದಾಸ್ (68 ರನ್, 42 ಎಸೆತ) ಅರ್ಧಶತಕದ ನೆರವಿನಿಂದ 3 ವಿಕೆಟ್ಗೆ 209 ರನ್ ಕಲೆಹಾಕಿತು. ಪ್ರತಿಯಾಗಿ ನೇಪಾಳ ತಂಡ 7 ವಿಕೆಟ್ಗೆ 124 ರನ್ ಗಳಿಸಲಷ್ಟೇ ಶಕ್ತಗೊಂಡಿತು. ಭಾರತ ತಂಡ ಶನಿವಾರ ಅಮೆರಿಕ ವಿರುದ್ಧ ತನ್ನ 4ನೇ ಲೀಗ್ ಪಂದ್ಯ ಆಡಲಿದೆ.
ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ಸಬಲೀಕರಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಸಮರ್ಥನಂ ಟ್ರಸ್ಟ್ ಮತ್ತು ಭಾರತೀಯ ಅಂಧರ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಡಾ. ಮಹಾಂತೇಶ್ ಜಿ.ಕೆ. ಅವರು ಬೆಂಗಳೂರು ಚರಣದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದರು. ಟೂರ್ನಿಗಾಗಿ ರಾಜ್ಯ ಸರ್ಕಾರ 1 ಕೋಟಿ ರೂ. ಅನುದಾನವನ್ನೂ ನೀಡಿದೆ.
ವಿಶೇಷ ಮಕ್ಕಳು ಪಾಲ್ಗೊಳ್ಳುತ್ತಿರುವ ಅಂಧರ ಕ್ರಿಕೆಟ್ ಟೂರ್ನಿಗೆ ಜಾಗತಿಕವಾಗಿ ಮನ್ನಣೆ ಸಿಗಲಿ ಎಂಬುದೇ ನನ್ನ ಆಶಯ ಎಂದು ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು. ಟೂರ್ನಿಗೆ ಚಾಲನೆ ನೀಡಿ ಮಾತನಾಡಿದ ಸಚಿವರು, ಸರಿಯಾಗಿ ಕೈಕಾಲು ಇದ್ದರೂ, ಕಣ್ಣುಗಳು ಕಾಣಿಸಿದರೂ ಸಾಮಾನ್ಯ ಜನರು ಕ್ರೀಡೆಯಲ್ಲಿ ಪಾಲ್ಗೊಳ್ಳುವುದು ಕಷ್ಟ. ಆದರೆ, ಸರಿಯಾಗಿ ಕಣ್ಣುಕಾಣದ ಮಕ್ಕಳು ಕ್ರಿಕೆಟ್ ಆಡುವುದು ಅಷ್ಟು ಸುಲಭವಲ್ಲ ಎಂದರು.
ಈ ಮಹತ್ವದ ಟೂರ್ನಿಯ ಪ್ರಮುಖ ಭಾಗವನ್ನು ಬೆಂಗಳೂರಿನಲ್ಲಿ ಆಯೋಜಿಸುತ್ತಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯ. ನಮ್ಮ ರಾಜ್ಯವು ಕ್ರೀಡೆಗೆ ಸಮಾನ ಅವಕಾಶಗಳನ್ನು ಉತ್ತೇಜಿಸುವಲ್ಲಿ ಮುಂಚೂಣಿಯಲ್ಲಿರುವುದು ಎಲ್ಲರೂ ತಿಳಿದಿರುವ ವಿಷಯ. ನಮ್ಮ ಇಲಾಖೆಯಿಂದ ಸಂಪೂರ್ಣ ಸಹಕಾರ ನೀಡಲಾಗುವುದು ಎಂದರು.