ರೈತ ಸಂಘ ಮತ್ತು ಹಸಿರು ಸೇನೆಯಿಂದ ಜೇವರ್ಗಿಯಲ್ಲಿ ಮಂಗಳವಾರ ರಸ್ತೆ ಸಂಚಾರ ತಡೆ ನಡೆಸಿದವರ ಜತೆ ತಹಸೀಲ್ದಾರ್ ಅಂಜುಂ ತಬಸ್ಸುಮ್ ಮಾತನಾಡಿದರು. ನೆಲೋಗಿ, ಕಡಕೋಳ, ಚಿಗರಳ್ಳಿ ಶ್ರೀಗಳು ಹಾಗೂ ಮಹಾಂತಗೌಡ ನಂದಿಹಳ್ಳಿ, ಪ್ರಶಾಂತ ಪಾಟೀಲ ಜೈನಾಪುರ ಇದ್ದರು.
- ಮಲ್ಲಾಬಾದ್ ಏತ ನೀರಾವರಿ ಕಾಮಗಾರಿ ಕಳಪೆ
- ಜೇವರ್ಗಿಯಲ್ಲಿ ರೈತ ಸಂಘ ಮತ್ತು ಹಸಿರು ಸೇನೆ ಪ್ರತಿಭಟನೆ
ಜೇವರ್ಗಿ: ಜೇವರ್ಗಿ ಹಾಗೂ ಯಡ್ರಾಮಿ ತಾಲೂಕು ಬರಪೀಡಿತ ಘೋಷಿಸಿ ಬೆಳೆ ವಿಮೆ ತಾರತಮ್ಯ ಸರಪಡಿಸಬೇಕು. ಮಲ್ಲಾಬಾದ್ ಏತ ನೀರಾವರಿ ಕಳಪೆ ಕಾಮಗಾರಿ ಮಾಡಿದ ಅಧಿಕಾರಿಗಳ ಅಮಾನತು ಜತೆ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯಿಂದ ಬಸವೇಶ್ವರ ವೃತ್ತದಲ್ಲಿ ಮಂಗಳವಾರ ರಸ್ತೆ ಸಂಚಾರ ತಡೆ ನಡೆಯಿತು.
ನೇತೃತ್ವ ವಹಿಸಿದ್ದ ಸೇನೆ ತಾಲೂಕು ಅಧ್ಯಕ್ಷ ಮಹಾಂತಗೌಡ ನಂದಿಹಳ್ಳಿ ಮಾತನಾಡಿ, ಎರಡೂ ತಾಲೂಕಿನ ರೈತರ ಸಾಲ ಸಂಪೂರ್ಣ ಮನ್ನಾ ಮಾಡಬೇಕು. ಮರು ಬಿತ್ತನಗೆ ಬೀಜ&ರಸಗೊಬ್ಬರ ಉಚಿತ ವಿತರಿಸಬೇಕು. ಮಹಾರಾಷ್ಟ್ರದ ಉಜಿನಿ ಡ್ಯಾಮ್ನಿಂದ 15 ಟಿಎಂಸಿ ನೀರು ಬಿಡುಗಡೆ ಮಾಡಬೇಕು. ಸಕ್ಕರೆ ಕಾರ್ಖಾನೆಗಳು ಬೆಳೆಗಾರರ ನೆರವಿಗೆ ಧಾವಿಸಿ ಕಬ್ಬು ಕಟಾವಿಗೆ ಬಂದ ತಕ್ಷಣ ಕೂಲಿ ಕಾರ್ಮಿಕರನ್ನು ಹೊಲಗಳಿಗೆ ಬರುವಂತೆ ನೋಡಿಕೊಳ್ಳಬೇಕು. ಕಬ್ಬು ಕಂಪನಿಗಳಿಗೆ ಮಾರಿದ ತಕ್ಷಣ ರೈತರ ಖಾತೆಗೆ ಹಣ ಜಮೆ ಮಾಡಬೇಕು. ಮಲ್ಲಾಬಾದ್ ಏತ ನೀರಾವರಿಯ ಜೆಬಿಸಿ ಮತ್ತು ಎಂಬಿಸಿ ವಿಭಾಗದ ಅಧಿಕಾರಿಗಳನ್ನು ಅಮಾನತುಗೊಳಿಸಿ, ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ ಬಿಲ್ ತಡೆಹಿಡಿಯಬೇಕು ಎಂದು ಒತ್ತಾಯಿಸಿದರು.
ನೆಲೋಗಿ, ಕಡಕೋಳ, ಚಿಗರಳ್ಳಿ ಶ್ರೀಗಳು, ಪ್ರಮುಖರಾದ ಮಲ್ಲಣ್ಣಗೌಡ ಪಾಟೀಲ್ ಕೆಲ್ಲೂರ, ಪ್ರಶಾಂತ ಪಾಟೀಲ್ ಜೈನಾಪುರ, ಪಂಚಯ್ಯ ಹಿರೇಮಠ, ರವಿಚಂದ್ರ ಗುತ್ತೇದಾರ್, ಭೀಮು ಜನಿವಾರ, ಪರಮೇಶ್ವರ ಬಿರಾಳ, ದೇವಮ್ಮ ಯಾಳವಾರ, ಮಂಜುಳಾ ಭಜಂತ್ರಿ, ಸುಶೀಲಾ ಪೂಜಾರಿ, ಸಾಹೇಬಗೌಡ ಹಂಗರಗಿ, ಲಾಳೇಸಾಬ್ ಮನಿಯಾರ್, ಸಿದ್ದಣ್ಣಗೌಡ ರಾಜವಾಳ, ರಿಯಾಜ್ ಪಟೇಲ್ ಬಿಳವಾರ, ಸಿದ್ದು ಯಂಕಚಿ, ಶರಣಗೌಡ ಪಾಟೀಲ್ ಬೆಳಮಗಿ, ಅನಿಲಕುಮಾರ ದೊಡ್ಮನಿ, ಯಲ್ಲಾಲಿಂಗ ಹರನಾಳ ಇತರರಿದ್ದರು.