ಎಸ್‌ಐಆರ್ ಮಹಾ ಸಂಪರ್ಕ ಅಭಿಯಾನದ ಲೋಗೋ ಬಿಡುಗಡೆ
ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಸಂಬಂಧ ಬಿಜೆಪಿಯು 25, 26ರಂದು ಮಹಾಸಂಪರ್ಕ ಅಭಿಯಾನ ಹಮ್ಮಿಕೊಂಡಿದ್ದು, ಮನೆ ಮನೆಗೆ ಭೇಟಿ ಕೊಟ್ಟು ಜಾಗೃತಿ ಮತ್ತು ಸಹಾಯ ಮಾಡಲು ಮುಂದಾಗಿದೆ.
ಪಕ್ಷದ ರಾಜ್ಯ ಕಚೇರಿಯಲ್ಲಿ ಬುಧವಾರ ಎಸ್‌ಐಆರ್ ಮಹಾ ಸಂಪರ್ಕ ಅಭಿಯಾನದ ಲೋಗೋ ಬಿಡುಗಡೆ ಮಾಡಲಾಯಿತು. ಈ ವೇಳೆ ಅಭಿಯಾನದ ಸಂಚಾಲಕ ಎಸ್.ದತ್ತಾತ್ರಿ ಮಾತನಾಡಿ, ರಾಜ್ಯದಲ್ಲಿ ಪ್ರತಿಯೊಬ್ಬ ಕಾರ್ಯಕರ್ತ 20 ಮನೆಗಳಿಗೆ ತೆರಳುವಂತೆ ಗುರಿ ನೀಡಲಾಗಿದೆ. ಆ ಮನೆಯವರಿಗೆ ಫಾರ್ಮ್ ಬಗ್ಗೆ ವಿಚಾರಿಸಿ, ನಮೂನೆ ತುಂಬಿಸಲು ಬಿಎಲ್ಎ-2 ಜತೆ ಸಂಪರ್ಕ ಕಲ್ಪಿಸಿ ಸಹಾಯ ಮಾಡುವ ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದರು.
ದಿನಕ್ಕೆ 10 ಮನೆಯಂತೆ ಭೇಟಿ ಮಾಡಿ ಕರಡು ಮತದಾರರ ಪಟ್ಟಿ ಬಳಿಕ ಏನು ಎಂಬುದರ ಬಗ್ಗೆ ಮಾಹಿತಿ ನೀಡಲು ಸೂಚಿಸಲಾಗಿದೆ. ಚುನಾವಣಾ ಆಯೋಗ ಮುಂದೆ ಕೇಳಬಹುದಾದ ದಾಖಲೆಗಳ ವಿವರಗಳನ್ನು ಮತದಾರರಿಗೆ ಕೊಡಲಿದ್ದೇವೆ. ಇದಕ್ಕಾಗಿ ಮ್ಯಾಪಿಂಗ್ ನಡೆದಿದೆ. ಲಭ್ಯ ಮಾಹಿತಿಯನ್ನು ಬಿಎಲ್ಎ-2ಗೆ ನೀಡಲು ನಿರ್ಧಾರ ಮಾಡಲಾಗಿದೆ ಎಂದರು.
ಕಳೆದ 6 ತಿಂಗಳಿನಿಂದ ಕಾರ್ಯಕರ್ತರಿಗೆ ಎಸ್‌ಐಆರ್ ಕುರಿತಂತೆ ತರಬೇತಿ ನೀಡಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಬ್ಬರನ್ನು ಪ್ರಭಾರಿಯಾಗಿ ನೇಮಿಸಿ, ಎಸ್‌ಐಆರ್ ಚಟುವಟಿಕೆ ಮೇಲೆ ನಿಗಾವಹಿಸಲು ಸೂಚಿಸಲಾಗಿದೆ. ಎನ್ಯುಮರೇಷನ್ ಫಾರ್ಮ್ ಭರ್ತಿ ಮಾಡಿ ಬಿಎಲ್ಒಗಳಿಗೆ ಕೊಡಬೇಕಿದೆ. ಫಾರ್ಮ್ ಭರ್ತಿ ಮಾಡುವ ವಿಚಾರದಲ್ಲೂ ತರಬೇತಿ ಕೊಟ್ಟಿದ್ದೇವೆ. ಶಾಸಕರು, ಜಿಪಂ ಮಾಜಿ ಸದಸ್ಯರು, ಮಾಜಿ ಶಾಸಕರು, ವಿಧಾನ ಪರಿಷತ್ ಮಾಜಿ ಸದಸ್ಯರು ಕೈ ಜೋಡಿಸಲಿದ್ದಾರೆ. 224 ವಿಧಾನಸಭಾ ಕ್ಷೇತ್ರಗಳಿಗೆ 56 ಸಾವಿರ ಬಿಎಲ್ಎ- 2ಗಳನ್ನು ನೇಮಿಸಿದ್ದು, ಅದರ ವಿವರವನ್ನು ಚುನಾವಣಾ ಆಯೋಗಕ್ಕೆ ಕೊಟ್ಟಿದ್ದೇವೆ ಎಂದು ಎಸ್.ದತ್ತಾತ್ರಿ ಮಾಹಿತಿ ನೀಡಿದರು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್, ಎಸ್‌ಐಆರ್ ಮಹಾಭಿಯಾನದ ಸಹ ಸಂಚಾಲಕಿ ಎಚ್.ಎಸ್. ಶ್ಯಾಮಲಾ ಭಾಗವಹಿಸಿದ್ದರು.