DK Shivakumar 
ರಾಜ್ಯ

ಬಿಜೆಪಿಯವರದ್ದು ಬರೀ ಒನ್ ಡೇ ಫೋಟೋ ಶೂಟ್, ದಿನಾ ಮೆಟ್ರೋದಲ್ಲಿ ಓಡಾಡ್ತಾರಾ?: DK Shivakumar ಪ್ರಶ್ನೆ!

ಬೆಂಗಳೂರು: "ಬಿಜೆಪಿ ನಾಯಕರು ಕೇವಲ ಒಂದು ದಿನದ ಫೋಟೋ ಶೂಟ್‌ಗಾಗಿ ಸಾರ್ವಜನಿಕ ಸಾರಿಗೆ ಬಳಸುವುದನ್ನು ಬಿಟ್ಟು, ಪ್ರತಿನಿತ್ಯ ಮೆಟ್ರೋ ಹಾಗೂ ಬಸ್‌ಗಳಲ್ಲಿ ಓಡಾಡುತ್ತಾರಾ?" ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್( DK Shivakumar ) ಕಟುವಾಗಿ ಪ್ರಶ್ನಿಸಿದ್ದಾರೆ.
ಗುರುವಾರ ಕುಮಾರಪಾರ್ಕ್‌ನಲ್ಲಿರುವ ಸರ್ಕಾರಿ ಗೃಹ ಕಚೇರಿಯಲ್ಲಿ ಆಯೋಜಿಸಿದ್ದ ಜಂಟಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸಚಿವ ವಿ. ಸೋಮಣ್ಣ ಸೇರಿದಂತೆ ಇತರೆ ಬಿಜೆಪಿ ನಾಯಕರ ಇತ್ತೀಚಿನ ಸಾರ್ವಜನಿಕ ಸಾರಿಗೆ ಪ್ರಯಾಣದ ಪ್ರಹಸನವನ್ನು ಲೇವಡಿ ಮಾಡಿದರು. ಬೆಲೆ ಏರಿಕೆ ನಿಯಂತ್ರಿಸಲು ಸಾಧ್ಯವಾಗದ ಬಿಜೆಪಿ, ಇಂಧನ ಉಳಿಸಿ ಎಂದು ನಾಟಕವಾಡುತ್ತಿದೆ. ಅವರು ಪೆಟ್ರೋಲ್, ಡೀಸೆಲ್ ಉಳಿಸುವುದಾದರೆ ಅಥವಾ ಅಡುಗೆ ಎಣ್ಣೆ ಇಲ್ಲದ ಆಹಾರ ತಿನ್ನುವುದಾದರೆ ನಮ್ಮದೇನೂ ಅಭ್ಯಂತರವಿಲ್ಲ ಎಂದರು.

ಮಾಂಗಲ್ಯ ಧರ್ಮದ ಸಂಕೇತ, ಚಿನ್ನ ಖರೀದಿ ಬೇಡ ಎನ್ನಲು ಇವರ‍್ಯಾರು?

ತಿರುಪತಿ ಭೇಟಿಯ ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿಕೆಶಿ, "ಮಾಂಗಲ್ಯ ಎನ್ನುವುದು ಹಿಂದೂ ಧರ್ಮದ ಅತ್ಯಂತ ಪವಿತ್ರ ಸಂಕೇತ. ಮದುವೆಯಲ್ಲಿ ಗಂಡು-ಹೆಣ್ಣಿನ ಬಾಂಧವ್ಯ ಬೆಸೆಯುವುದೇ ಈ ಮಾಂಗಲ್ಯ. ದೇವಾನುದೇವತೆಗಳ ಕಾಲದಿಂದಲೂ ನಡೆದುಕೊಂಡು ಬಂದಿರುವ ಈ ಪದ್ಧತಿಯಲ್ಲಿ, ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ ಎಂಬ ಕಾರಣಕ್ಕೆ ಚಿನ್ನದ ತಾಳಿ ಹಾಕಿಕೊಳ್ಳಬೇಡಿ, ಅರಿಶಿನ ಕೊಂಬು ಕಟ್ಟಿಕೊಳ್ಳಿ ಎನ್ನಲು ಹೇಗೆ ಸಾಧ್ಯ? ನೀವು ಕಷ್ಟಪಟ್ಟು ದುಡಿದ ಹಣದಲ್ಲಿ ಮಾಂಗಲ್ಯ ಖರೀದಿ ಮಾಡುತ್ತೀರಿ. ಅದಕ್ಕೂ ನಿರ್ಬಂಧ ಹೇರಲು ಹೊರಟಿರುವುದು ದುರದೃಷ್ಟಕರ" ಎಂದು ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳ ವಿರುದ್ಧ ಕಿಡಿಕಾರಿದರು.

ಗ್ಯಾರಂಟಿ ಯೋಜನೆಗಳಿಂದ ಇತಿಹಾಸ ಸೃಷ್ಟಿ!

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಮೂರು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಸರ್ಕಾರದ ಸಾಧನೆಗಳನ್ನು ತೆರೆದಿಟ್ಟ ಡಿಸಿಎಂ, "ನಮ್ಮ ಪಂಚ ಗ್ಯಾರಂಟಿ ಯೋಜನೆಗಳು ಇಡೀ ದೇಶದಲ್ಲೇ ಇತಿಹಾಸ ಸೃಷ್ಟಿಸಿವೆ. ಕಳೆದ ಮೂರು ವರ್ಷಗಳಲ್ಲಿ ಈ ಯೋಜನೆಗಳಿಗಾಗಿ ಸರ್ಕಾರ ಬರೋಬ್ಬರಿ 1.34 ಲಕ್ಷ ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಿದೆ. ವಿಶ್ವಪ್ರಸಿದ್ಧ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯವು ನಮ್ಮ ಈ ಕಾರ್ಯಕ್ರಮಗಳನ್ನು ಅಧ್ಯಯನ ಮಾಡಿದ್ದು, ಇದನ್ನು 'ಕತ್ತಲೆಯಲ್ಲಿ ಮೂಡಿದ ಬೆಳಕು' (Shining a Light in the darkness) ಎಂದು ಶ್ಲಾಘಿಸಿದೆ" ಎಂದರು. ಅಲ್ಲದೆ, ನಮ್ಮ ಯೋಜನೆಗಳನ್ನು ಈ ಹಿಂದೆ ಉಚಿತ ಎಂದು ಲೇವಡಿ ಮಾಡಿದ್ದ ಬಿಜೆಪಿ ನಾಯಕರು, ಇಂದು ಮಹಾರಾಷ್ಟ್ರ, ಮಧ್ಯಪ್ರದೇಶ, ಹರಿಯಾಣ ಹಾಗೂ ಬಿಹಾರದಲ್ಲಿ ಇದೇ ಮಾದರಿಯನ್ನು ನಕಲು ಮಾಡಿ ಚುನಾವಣೆ ಗೆಲ್ಲಲು ಹೊರಟಿದ್ದಾರೆ ಎಂದು ಟಾಂಗ್ ನೀಡಿದರು.

ರಾಜಣ್ಣ ಹೇಳಿಕೆಗೆ ಡಿಕೆಶಿ ಟ್ವಿಸ್ಟ್!

ಸಚಿವ ಕೆ.ಎನ್. ರಾಜಣ್ಣ ಅವರು 'ಸಿಎಂ ಬದಲಾವಣೆ ಆದರೆ ಜಿ. ಪರಮೇಶ್ವರ್ ಮುಖ್ಯಮಂತ್ರಿಯಾಗಬೇಕು' ಎಂದು ನೀಡಿರುವ ಹೇಳಿಕೆಗೆ ಡಿ.ಕೆ. ಶಿವಕುಮಾರ್ ತಮ್ಮದೇ ಶೈಲಿಯಲ್ಲಿ ಉತ್ತರಿಸಿದರು. "ರಾಜಣ್ಣ ಅವರೇ ಯಾಕೆ ಈಗ ಸಿಎಂ ಬದಲಾವಣೆ ಮಾಡಲು ಹೊರಟಿದ್ದಾರೆ? ಸಿದ್ದರಾಮಯ್ಯನವರೇ ಸಿಎಂ ಆಗಿ ಮುಂದುವರಿಯಲಿ ಎನ್ನುವುದರಲ್ಲಿ ತಪ್ಪೇನಿಲ್ಲ. ಪರಮೇಶ್ವರ್ ಅವರನ್ನು ಸಿಎಂ ಮಾಡಬೇಕು ಎಂದರೆ ಸದ್ಯದ ಮುಖ್ಯಮಂತ್ರಿಗಳು ಕೆಳಗಿಳಿಯಬೇಕು ಎಂದರ್ಥವೇ? ನಾನು ಎಲ್ಲೂ ಸಿಎಂ ಬದಲಾವಣೆ ಬಗ್ಗೆ ಮಾತನಾಡಿಲ್ಲ. ಈ ಪ್ರಶ್ನೆಯನ್ನು ನೀವೇ ರಾಜಣ್ಣ ಅವರ ಬಳಿ ಕೇಳಬೇಕು" ಎಂದು ಚುರುಕಿನ ಉತ್ತರ ನೀಡಿದರು.
ಇದೇ ವೇಳೆ, ತಾವು ಹೈಕಮಾಂಡ್ ಬಳಿ ಯಾವುದೇ 'ಕೂಲಿ' (ಮುಖ್ಯಮಂತ್ರಿ ಹುದ್ದೆ) ಕೇಳಿಲ್ಲ ಎಂದ ಡಿಕೆಶಿ, ಯುವ ಕಾಂಗ್ರೆಸ್‌ನಲ್ಲಿ ಅಶಿಸ್ತು ತೋರುವವರನ್ನು ಪಕ್ಷದಿಂದ ಕಿತ್ತು ಬಿಸಾಡುವುದಾಗಿ ಎಚ್ಚರಿಕೆ ನೀಡಿದರು.