ಸೂಲಿಬೆಲೆಯಲ್ಲಿ ಹಮ್ಮಿಕೊಂಡಿದ್ದ ಎಸ್ಐಆರ್ ಜಾಗೃತಿ ಅಭಿಯಾನಕ್ಕೆ ಸಚಿವ ಮುನಿಯಪ್ಪ, ಶಾಸಕ ಶರತ್ ಬಚ್ಚೇಗೌಡ ಚಾಲನೆ ನೀಡಿದರು. ಸಹಕಾರ ಬ್ಯಾಂಕ್ ಅಧ್ಯಕ್ಷ ಬಿ.ವಿ.ಸತೀಶಗೌಡ, ಯುವ ಮುಖಂಡ ನಾರಾಯಣಗೌಡ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಬಿ.ವೆಂಕಟೇಶ್, ಜಿಪಂ ಮಾಜಿ ಅಧ್ಯಕ್ಷ ಸಿ.ಮುನಿಯಪ್ಪ ಇತರರಿದ್ದರು.
ಸೂಲಿಬೆಲೆ : ವಾಮವಾರ್ಗದಿಂದ ಅಧಿಕಾರ ಹಿಡಿಯುವ ಹುನ್ನಾರ ಬಿಜೆಪಿ ನಡೆಸುತ್ತಿದ್ದು, ಮತಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ ಮತದಾರರು ಹಾಗೂ ಕಾರ್ಯಕರ್ತರು ಎಚ್ಚರದಿಂದಿರಬೇಕು ಎಂದು ಸಚಿವ ಕೆ.ಎಚ್.ಮುನಿಯಪ್ಪ ಎಚ್ಚರಿಕೆ ನೀಡಿದರು.
ಬೆಂಡಿಗಾನಹಳ್ಳಿ ಚೌಡೇಶ್ವರಿ ದೇವಾಲಯದಲ್ಲಿ ಹಮ್ಮಿಕೊಂಡಿದ್ದ ಹೋಬಳಿಮಟ್ಟದ ಮತದಾರ ಪಟ್ಟಿ ಪರಿಷ್ಕರಣೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬಿಹಾರ ಮತ್ತು ಪಶ್ವಿಮಬಂಗಾಳ ರಾಜ್ಯಗಳಲ್ಲಿ ಸುಮಾರು 93 ಲಕ್ಷ ಮತದಾರರನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ. ಕಾಂಗ್ರೆಸ್ಪರ ಇರುವ ಮತಗಳನ್ನು ತೆಗೆದುಹಾಕಿ ಅಧಿಕಾರ ಹಿಡಿಯುವ ಕುತಂತ್ರ ಬುದ್ಧಿ ಬಿಜೆಪಿಗಿದೆ. ಹಾಗಾಗಿ ಬಿಎಲ್ಒಗಳು ಗ್ರಾಮದ ಬೂತ್, ವಾರ್ಡ್ಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡಬೇಕು ಎಂದರು.
ಶಾಸಕ ಶರತ್ ಬಚ್ಚೇಗೌಡ ಮಾತನಾಡಿ, ಕೇಂದ್ರ ಸರ್ಕಾರವು ವ್ಯವಸ್ಥಿತ ಮತಗಳ ಡಿಲೀಟ್ ಮಾಡುವ ಪಿತೂರಿ ನಡೆಸುತ್ತಿದೆ. ಬಿಹಾರ ಮತ್ತು ಪಶ್ವಿಮಬಂಗಾಳದಂತೆ ರಾಜ್ಯದಲ್ಲೂ ಮತದಾರರ ಪಟ್ಟಿಯಿಂದ ಹೆಸರು ತೆಗೆದರೆ ಸರ್ಕಾರದ ಯಾವುದೇ ಸವಲತ್ತುಗಳು ಸಿಗುವುದಿಲ್ಲ. ಜಿಲ್ಲೆಯಲ್ಲಿ 9.12 ಲಕ್ಷ ಮತದಾರರಿದ್ದು, ಶೇ.99.67 ಅರ್ಜಿ ವಿತರಣೆಯಾಗಿದೆ. 4.93 ಸಾವಿರದ 893 ಮತಗಳನ್ನು ಡಿಜಿಟಲ್ ದಾಖಲೆ ಮಾಡಲಾಗಿದ್ದು, ಅರ್ಜಿ ವಿತರಣೆಯಲ್ಲಿ ಶೇ.100 ಹಾಗೂ ಶೇ.75 ಡಿಜಿಟಲ್ ದಾಖಲೆ ಮಾಡಲಾಗಿದೆ. ಈ ಬಗ್ಗೆ ಕಾರ್ಯಕರ್ತರು ಮತ್ತು ಮತದಾರರು ಜಾಗೃತರಾಗಿರಬೇಕು ಎಂದರು.
ಭಾರತ ಚುನಾವಣಾ ಆಯೋಗವು 1 ತಿಂಗಳು ಎಸ್ಐಆರ್ಗೆ ಅವಕಾಶ ನೀಡಿದ್ದು, ಈ ಬಗ್ಗೆ ಸ್ಥಳಿಯ ಮುಖಂಡರು ಗ್ರಾಮಗಳು, ವಾರ್ಡ್ ಹಾಗೂ ಬೂತ್ಗಳಲ್ಲಿ ಮತದಾರರ ಮಾಹಿತಿ ಸಂಗ್ರಹಿಸಿ ಮತ ಉಳಿಸುವ ಬಗ್ಗೆ ಗಮನಹರಿಸಬೇಕು ಎಂದರು.
15ನೇ ಹಣಕಾಸು ಸಮಿತಿ ಅಧ್ಯಕ್ಷ ನಾರಾಯಣಸ್ವಾಮಿ ಮಾತನಾಡಿ, ಎಸ್ಐಆರ್ನಲ್ಲಿ ದಾಖಲೆ ಸಲ್ಲಿಸಿ ಮತ ಉಳಿಸಿಕೊಳ್ಳಬೇಕು. 13 ರಾಜ್ಯಗಳಲ್ಲಿ 6 ಕೋಟಿ ಮತದಾರರನ್ನು ಪಟ್ಟಿಯಿಂದ ತೆಗೆದು ಹಾಕಲಾಗಿದೆ ಎಂದು ತಿಳಿಸಿದರು. ಗ್ಯಾರಂಟಿ ಯೋಜನೆ ಜಿಲ್ಲಾಧ್ಯಕ್ಷ ರಾಜಣ್ಣ, ನಗರೇನಹಳ್ಳಿ ನಾಗರಾಜಪ್ಪ, ಡಾ.ಡಿ.ಟಿ.ವೆಂಕಟೇಶ್, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಅಕ್ಬರ್ ಅಲಿಖಾನ್ ಇತರರಿದ್ದರು.