ದಾವಣಗೆರೆ/ಬಾಗಲಕೋಟೆ: ರಾಜ್ಯ ರಾಜಕೀಯದಲ್ಲಿ(ByElection 2026) ಭಾರೀ ಕುತೂಹಲ ಮೂಡಿಸಿದ್ದ ಉಪಚುನಾವಣೆಯ ಅಖಾಡಕ್ಕೆ ಬಿಜೆಪಿ ತನ್ನ ಸಾರಥಿಗಳನ್ನು ಅಂತಿಮಗೊಳಿಸಿದೆ. ಯುಗಾದಿಯ ಈ ಶುಭ ಸಂದರ್ಭದಲ್ಲಿ ಬಣ ರಾಜಕಾರಣದ ಸವಾಲುಗಳ ನಡುವೆಯೇ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಕ್ಷೇತ್ರಗಳಿಗೆ ಬಿಜೆಪಿ ಹೈಕಮಾಂಡ್ ಅಭ್ಯರ್ಥಿಗಳ ಹೆಸರನ್ನು ಅಧಿಕೃತವಾಗಿ ಘೋಷಿಸಿದೆ.
ಶ್ರೀನಿವಾಸ ದಾಸಕರಿಯಪ್ಪಗೆ ಮಣೆ!
ತೀವ್ರ ಪೈಪೋಟಿ ಏರ್ಪಟ್ಟಿದ್ದ ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಅಚ್ಚರಿಯ ಆಯ್ಕೆ ನಡೆದಿದೆ. ಎಂಟು ಜನ ಪ್ರಬಲ ಆಕಾಂಕ್ಷಿಗಳ ಪಟ್ಟಿಯಲ್ಲಿದ್ದ ರಾಜ್ಯ ಬಿಜೆಪಿ ಎಸ್ಟಿ ಮೋರ್ಚಾ ಉಪಾಧ್ಯಕ್ಷ ಶ್ರೀನಿವಾಸ ದಾಸಕರಿಯಪ್ಪ ಅವರನ್ನು ಪಕ್ಷದ ಅಧಿಕೃತ ಅಭ್ಯರ್ಥಿ ಎಂದು ಘೋಷಿಸಲಾಗಿದೆ. ಜಿಲ್ಲೆಯ ಬಣ ರಾಜಕಾರಣದ ನಡುವೆ ಸಂಘಟನಾತ್ಮಕ ಹಿನ್ನೆಲೆಯುಳ್ಳ ಶ್ರೀನಿವಾಸ ಅವರಿಗೆ ಟಿಕೆಟ್ ನೀಡಿರುವುದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ವೀರಣ್ಣ ಚರಂತಿಮಠ ಅಖಾಡಕ್ಕೆ!
ಬಾಗಲಕೋಟೆ ಉಪಚುನಾವಣೆಗೆ ಮಾಜಿ ಶಾಸಕ ಹಾಗೂ ಹಿರಿಯ ನಾಯಕ ವೀರಣ್ಣ ಚರಂತಿಮಠ ಅವರ ಹೆಸರನ್ನು ಬಿಜೆಪಿ ಹೈಕಮಾಂಡ್ ಪ್ರಕಟಿಸಿದೆ. ಟಿಕೆಟ್ ಘೋಷಣೆಯ ಬೆನ್ನಲ್ಲೇ ಹರ್ಷ ವ್ಯಕ್ತಪಡಿಸಿರುವ ಚರಂತಿಮಠ ಅವರು, "ಪಕ್ಷದ ರಾಷ್ಟ್ರೀಯ ಮತ್ತು ರಾಜ್ಯ ನಾಯಕರಿಗೆ ನಾನು ಆಭಾರಿ. ಈ ಬಾರಿ ಸಂಘಟಿತವಾಗಿ ಗೆಲುವು ಸಾಧಿಸುತ್ತೇವೆ," ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಎರಡೂ ಕ್ಷೇತ್ರಗಳಲ್ಲಿ ಈಗ ಚುನಾವಣಾ ಕಾವು ರಂಗೇರಿದ್ದು, ಬಿಜೆಪಿಯ ಈ ತಂತ್ರಗಾರಿಕೆ ಎಷ್ಟರ ಮಟ್ಟಿಗೆ ಫಲ ನೀಡಲಿದೆ ಎಂಬುದು ಕುತೂಹಲಕಾರಿಯಾಗಿದೆ.