- ಸಚಿವ ಎಂ.ಬಿ. ಪಾಟೀಲ ಹೇಳಿಕೆ
- ವಿಜಯೇಂದ್ರ-ಯತ್ನಳ ವಿರುದ್ಧ ವಾಗ್ದಾಳಿ
- ಫಲಿತಾಂಶದ ಬಳಿಕ ಇಬ್ಬರೂ ಒಟ್ಟಿಗೆ ಮನೆಗೆ
ವಿಜಯಪುರ: ‘ದೇಶದ ಸ್ವಾತಂತ್ರೃಕ್ಕಾಗಿ ಆರ್‌ಎಸ್‌ಎಸ್‌ನವರು ಹೋರಾಟ ಮಾಡಿಲ್ಲ, ಅವರು ಬ್ರಿಟಿಷರ ಏಜೆಂಟ್‌ರಾಗಿದ್ದರು, ಇಂಡಿಯಾ ಗೇಟ್ ಬಳಿ ಇರುವ ಸ್ವಾತಂತ್ರೃ ಹೋರಾಟಗಾರರ ಹೆಸರಿನಲ್ಲಿ ಒಬ್ಬ ಆರ್‌ಎಸ್‌ಎಸ್ ವ್ಯಕ್ತಿಯ ಹೆಸರು ಸಹ ಇಲ್ಲ, ಇಂಥವರಿಂದ ದೇಶಾಭಿಮಾನದ ಪಾಠ ಕಲಿಯಬೇಕಿಲ್ಲ’ ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಡಾ.ಎಂ.ಬಿ. ಪಾಟೀಲ ಪ್ರತಿಕ್ರಿಯಿಸಿದರು.
‘ಬಿಜೆಪಿ-ಆರ್‌ಎಸ್‌ಎಸ್ ವಿಷಕಾರಿ ಹಾವು ಇದ್ದಂತೆ ಕೊಲ್ಲಿ’ ಎಂಬ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಗೆ ಸಂಬಂಧಿಸಿದಂತೆ ಬುಧವಾರ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ‘ಮಲ್ಲಿಕಾರ್ಜುನ ಖರ್ಗೆ ಅವರು ಕೊಲ್ಲಿ ಎಂದು ಹೇಳಿದ್ದು ಆ ಅರ್ಥದಲ್ಲಲ್ಲ; ವಿಷವನ್ನು ಕೊಲ್ಲ ಎಂಬರ್ಥದಲ್ಲಿ ಹೇಳಿದ್ದಾರೆ. ವಿಷ ಇರಬಾರದು ಎಂದಿದ್ದಾರೆ. ಹೀಗಾಗಿ ಅದಕ್ಕೆ ಬಣ್ಣ ಬಳಿಯುವುದು ಬೇಡ’ ಎಂದರು.
‘ಕೆಲವರು ಕಿಸೆಯಲ್ಲಿ ಬೆಂಕಿ ಪಟ್ಟಣ ಇಟ್ಟುಕೊಂಡು ಹೊರಟಿರುತ್ತಾರೆ. ಬೆಂಕಿ ಹಚ್ಚುವುದೇ ಅವರ ಕೆಲಸ’ ಎಂದು ಬಿಜೆಪಿ ಮತ್ತು ಆರ್‌ಎಸ್‌ಎಸ್ ವಿರುದ್ಧ ಕಿಡಿಕಾರಿದ ಸಚಿವ ಎಂ.ಬಿ. ಪಾಟೀಲರು, ಆರ್‌ಎಸ್‌ಎಸ್ ಹಾಗೂ ಬಿಜೆಪಿಯವರು ದೇಶದ ಸ್ವಾತಂತ್ರೃಕ್ಕಾಗಿ ಹೋರಾಡಿಯೇ ಇಲ್ಲ ಮತ್ತು ಅವರು ಬ್ರಿಟಿಷರ ಏಜೆಂಟ್‌ರಾಗಿದ್ದರ ಎಂದ ಮೇಲೆ ಅವರಿಂದ ದೇಶಾಭಿಮಾನದ ಪಾಠ ಕಲಿಯುವುದೇನಿದೆ? ಇಂಡಿಯಾ ಗೇಟ್ ಬಳಿ ಹೋಗಿ ನೋಡಿ ದೇಶದ ಸ್ವಾತಂತ್ರೃಕ್ಕಾಗಿ ಹೋರಾಡಿದ ಮುಸ್ಲಿರಾದಿಯಾಗಿ ಅನೇಕರ ಹೆಸರುಗಳಿವೆ. ಅದರಲ್ಲಿ ಆರ್‌ಎಸ್‌ಎಸ್‌ನವರ ಹೆಸರೇ ಇಲ್ಲ ಎಂದು ಲೇವಡಿ ಮಾಡಿದರು.
ವಿಜಯೇಂದ್ರ-ಯತ್ನಾಳ ಮನೆಗೆ
ದಾವಣಗೆರೆ ಹಾಗೂ ಬಾಗಲಕೋಟೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ನಿಶ್ಚಿತ ಮತ್ತು ಫಲಿತಾಂಶದ ಬಳಿಕ ವಿಜಯೇಂದ್ರ ಹಾಗೂ ಯತ್ನಾಳ ಒಟ್ಟಿಗೆ ಮನೆಗೆ ಹೋಗೋದು ಸಹ ಅಷ್ಟೇ ನಿಶ್ಚಿತ ಎಂದು ಎಂ.ಬಿ. ಪಾಟೀಲ ಪ್ರತಿಕ್ರಿಯಿಸಿದರು.
ಉಪ ಚುನಾವಣೆ ಬಳಿಕ ವಿಜಯೇಂದ್ರ ಅವರನ್ನು ತೆಗೆದು ಹಾಕುತ್ತಾರೆ. ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲರನ್ನು ಕರೆದೊಯ್ದು ಪ್ರಚಾರ ಮಾಡುವ ದುಃಸ್ಥಿತಿಗೆ ಬಿಜೆಪಿ ತಲುಪಿದೆ. ಯತ್ನಾಳ ಪ್ರಚಾರ ಮಾಡಿದರೂ ಕಾಂಗ್ರೆಸ್ ನಿಶ್ಚಿತವಾಗಿ ಗೆಲುವು ಸಾಧಿಸಲಿದೆ. ಹೀಗಾಗಿ ವಿಜಯೇಂದ್ರ ಮತ್ತು ಯತ್ನಾಳ ಇಬ್ಬರೂ ಒಟ್ಟಿಗೆ ಮನೆಗೆ ಹೋಗುತ್ತಾರೆಂದು ಟೀಕಿಸಿದರು.
ಹಣ ಹಂಚಿಕೆ ಕುರಿತ ಎಐ ವಿಡಿಯೋ ಹರಿಬಿಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ವಾಗ್ದಾಳಿ ನಡೆಸಿದ ಎಂ.ಬಿ. ಪಾಟೀಲರು, ವಿಜಯೇಂದ್ರ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದೇ ಕಾರಣಕ್ಕೆ ಈ ಹಿಂದೆ ಯತ್ನಾಳ ಅವರು ವಿಜಯೇಂದ್ರ ಕುರಿತು ‘ಅವರ ತಂದೆಯ ಸಹಿ ಮಾಡುತ್ತಾರೆ, ಮಾರಿಷಸ್‌ನಲ್ಲಿ ಹತ್ತು ಸಾವಿರ ಕೋಟಿ ಇಟ್ಟು ಬಂದಿದ್ದಾರೆಂದು’ ಹೇಳುತ್ತಿದ್ದರು. ಬಹುಶಃ ಅದು ದುಬೈನೋ...ಸಿಂಗಾಪುರೋ...ಮಾರಿಷಸ್ಸೋ...ಗೊತ್ತಿಲ್ಲ ಎಂದರಲ್ಲದೇ ‘ಬಾಗಲಕೋಟೆ, ದಾವಣಗೆರೆಯಲ್ಲಿ ಕೇವಲ ಗ್ಯಾರಂಟಿ ಫಲಾನುಭವಿಗಳು ಮತ ಹಾಕಿದರೆ ನಾವು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.