ನೈಸ್ ಯೋಜನೆ ಸಂತ್ರಸ್ತರಿಗೆ ನ್ಯಾಯ ಒದಗಿಸುವಂತೆ ಸಿಎಂಗೆ ಬಿಜೆಪಿ ಮುಖಂಡ ಎಂ.ರುದ್ರೇಶ್ ಆಗ್ರಹ! M Rudresh
- ನೈಸ್ ಯೋಜನಾ ಸಂತ್ರಸ್ತರಿಗೆ ಪರಿಹಾರ ನೀಡುವಂತೆ ಸಿಎಂಗೆ ಬಿಜೆಪಿ ಮುಖಂಡ ರುದ್ರೇಶ್ ಮನವಿ
- ಸಿದ್ದಗಂಗಾ ಶ್ರೀಗಳ ಮಾರ್ಗದರ್ಶನದಲ್ಲಿ ಮುಖ್ಯಮಂತ್ರಿಯನ್ನು ಭೇಟಿಯಾದ ರೈತರು
- 2003ರಲ್ಲಿ ಭೂಸ್ವಾಧೀನ ಮಾಡಿಕೊಂಡರೂ ಇದುವರೆಗೆ ಸೂಕ್ತ ಪರಿಹಾರ ಸಿಕ್ಕಿಲ್ಲ ಎಂದ ರುದ್ರೇಶ್
- ನೈಸ್ ಅಕ್ರಮಗಳ ವಿರುದ್ಧ ಜಯಚಂದ್ರ ಸದನ ಸಮಿತಿ ವರದಿ ಜಾರಿಗೆ ಆಗ್ರಹಿಸಿದ ಬಿಜೆಪಿ ಮುಖಂಡ
ಬೆಂಗಳೂರು: ನೈಸ್ ( NICE Project ) ರಸ್ತೆ ಹಾಗೂ ಭೂಸ್ವಾಧೀನ ಪ್ರಕ್ರಿಯೆಯಿಂದ ಸಂಕಷ್ಟಕ್ಕೀಡಾಗಿರುವ ರೈತರಿಗೆ ಸೂಕ್ತ ಪರಿಹಾರ ನೀಡುವಂತೆ ಹಾಗೂ ಈ ಯೋಜನೆಯಲ್ಲಿ ಆಗಿರುವ ಅಕ್ರಮಗಳ ಬಗ್ಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಬಿಜೆಪಿ ಮುಖಂಡ ಎಂ.ರುದ್ರೇಶ್ ( M Rudresh ) ಅವರ ನೇತೃತ್ವದಲ್ಲಿ ಸೋಂಪುರ ಸರ್ಕಲ್ ಭಾಗದ ರೈತರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಸಿದ್ದಗಂಗಾ ಶ್ರೀಗಳ ಮಾರ್ಗದರ್ಶನ ಹಾಗೂ ಮುಖಂಡತ್ವದಲ್ಲಿ ಈ ನಿಯೋಗವು ಸಿಎಂ ಅವರನ್ನು ಭೇಟಿಯಾಗಿ ಪ್ರಮುಖ ವಿಚಾರಗಳನ್ನು ಚರ್ಚಿಸಿದೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಎಂ.ರುದ್ರೇಶ್, ಸಿದ್ದಗಂಗಾ ಮಠಕ್ಕೆ ಸೇರಿದ 8 ಎಕರೆ ಜಾಗವೂ ಸೇರಿದಂತೆ ನೈಸ್ ಯೋಜನೆಗಾಗಿ 2003ರಲ್ಲೇ ಭೂಸ್ವಾಧೀನ ಮಾಡಿಕೊಳ್ಳಲಾಗಿದೆ. ಆದರೆ, ಅಂದು ಕೇವಲ ಪ್ರತಿ ಎಕರೆಗೆ 5 ರಿಂದ 6 ಲಕ್ಷ ರೂಪಾಯಿಗಳಷ್ಟು ಅತ್ಯಲ್ಪ ಹಣವನ್ನು ಮಾತ್ರ ಬಿಡುಗಡೆ ಮಾಡಲಾಗಿದೆ. ಅಷ್ಟೇ ಅಲ್ಲದೆ, ಕೆಲ ರೈತರ ಒಟ್ಟು 2 ರಿಂದ 3 ಎಕರೆ ಜಾಗ ಪೂರ್ಣ ಪ್ರಮಾಣದಲ್ಲಿ ಭೂಸ್ವಾಧೀನವಾಗಿದ್ದರೂ ಇದುವರೆಗೆ ಅವರಿಗೆ ಸರಿಯಾದ ಪರಿಹಾರ ಸಿಕ್ಕಿಲ್ಲ ಎಂದು ರುದ್ರೇಶ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೈತರ ಜಮೀನನ್ನು 2003ರಲ್ಲಿ ಸ್ವಾಧೀನಪಡಿಸಿಕೊಂಡು, ನಂತರ 2009ರಲ್ಲಿ ರಸ್ತೆ ನಿರ್ಮಿಸಲಾಗಿದೆ, ಆದರೆ ಅನೇಕರಿಗೆ ಇದುವರೆಗೆ ನ್ಯಾಯಯುತ ಹಣ ಸಿಕ್ಕಿಲ್ಲ. ಈ ಕುರಿತು ಮಾಜಿ ಸಚಿವ ಟಿ.ಬಿ. ಜಯಚಂದ್ರ ಅವರ ನೇತೃತ್ವದ ಸದನ ಸಮಿತಿ ವರದಿ ಇದ್ದರೂ ಇಲ್ಲಿಯವರೆಗೆ ಯಾವುದೇ ರೀತಿಯ ಕಠಿಣ ಕ್ರಮ ಕೈಗೊಂಡಿಲ್ಲ. ಇದರೊಂದಿಗೆ ಹೈಕೋರ್ಟ್ ಆದೇಶವಿರುವ ಬಗ್ಗೆಯೂ ಸಿಎಂ ಅವರ ಗಮನಕ್ಕೆ ತರಲಾಗಿದೆ ಎಂದು ರುದ್ರೇಶ್ ಅವರು ತಿಳಿಸಿದ್ದಾರೆ.
ಇದೇ ವೇಳೆ, ಕುಮಾರಸ್ವಾಮಿ ಅವರು ಟೋಲ್ ಕಟ್ ಮಾಡಬೇಡಿ ಎಂದು ಹೇಳಿರುವುದು ರೈತರು ಹಾಗೂ ಸಾರ್ವಜನಿಕರಲ್ಲಿ ಮತ್ತಷ್ಟು ಆತಂಕ ಸೃಷ್ಟಿಗೆ ಕಾರಣವಾಗಿದೆ. ಈ ಎಲ್ಲಾ ಗೊಂದಲಗಳು ಮತ್ತು ಸಂಕಷ್ಟಗಳ ಬಗ್ಗೆ ಮುಖ್ಯಮಂತ್ರಿಗಳಿಗೆ ಸಂಪೂರ್ಣ ವಿವರಣೆ ನೀಡಲಾಗಿದ್ದು, ನೈಸ್ ಯೋಜನಾ ಸಂತ್ರಸ್ತ ರೈತರ ಹಿತ ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ನಿಯೋಗವು ಮನವಿ ಮಾಡಿಕೊಂಡಿದೆ ಎಂದು ರುದ್ರೇಶ್ ಅವರ ಹೇಳಿದ್ದಾರೆ.