ಕಾಂಗ್ರೆಸ್ ವಿರುದ್ಧ ಜಂಟಿ ಸಮರಕ್ಕೆ ಬಿಜೆಪಿ-ಜೆಡಿಎಸ್ ಪ್ಲ್ಯಾನ್​: ಸಮನ್ವಯ ಸಮಿತಿ ರಚನೆ ಬಗ್ಗೆ ಎಚ್​ಡಿಕೆ-ಬಿವೈವಿ ಚರ್ಚೆ! BJP-JDS Alliance 
ರಾಜ್ಯ

ಕಾಂಗ್ರೆಸ್ ವಿರುದ್ಧ ಜಂಟಿ ಸಮರಕ್ಕೆ ಬಿಜೆಪಿ-ಜೆಡಿಎಸ್ ಪ್ಲ್ಯಾನ್​: ಸಮನ್ವಯ ಸಮಿತಿ ರಚನೆ ಬಗ್ಗೆ ಎಚ್​ಡಿಕೆ-ಬಿವೈವಿ ಚರ್ಚೆ! BJP-JDS Alliance

ಪ್ರಮುಖ ಮುಖ್ಯಾಂಶಗಳು

  • ಕಾಂಗ್ರೆಸ್ ಸರ್ಕಾರ ಕಿತ್ತೊಗೆಯಲು ಬಿಜೆಪಿ ಜೆಡಿಎಸ್ ಮಾಸ್ಟರ್ ಪ್ಲಾನ್
  • ಮುಂಬರುವ ಉಪಚುನಾವಣೆ ಎದುರಿಸಲು ಸಿದ್ಧವಾಯ್ತು ಕೋ-ಆರ್ಡಿನೇಷನ್ ಕಮಿಟಿ
  • ಹಿರಿಯೂರು ಮತ್ತು ಧಾರವಾಡ ಉಪಚುನಾವಣೆಗೆ ಬಿಜೆಪಿ-ಜೆಡಿಎಸ್ ಜಂಟಿ ತಂತ್ರಗಾರಿಕೆ
  • ಯಾವುದೇ ಗೊಂದಲವಿಲ್ಲದೆ ಒಟ್ಟಾಗಿ ಚುನಾವಣೆ ಎದುರಿಸಲು ಮೈತ್ರಿಕೂಟ ನಿರ್ಧಾರ
ಬೆಂಗಳೂರು: ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟವನ್ನು ತೀವ್ರಗೊಳಿಸಲು ಹಾಗೂ ಮುಂಬರುವ ಚುನಾವಣಾ ಸವಾಲುಗಳನ್ನು ಒಗ್ಗಟ್ಟಿನಿಂದ ಎದುರಿಸಲು ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟ ( BJP-JDS Alliance ) ಭರ್ಜರಿ ಮಾಸ್ಟರ್ ಪ್ಲಾನ್ ರೂಪಿಸಿದೆ.
ಬೆಂಗಳೂರಿನಲ್ಲಿ ಇಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಖುದ್ದಾಗಿ ಭೇಟಿಯಾಗಿ, ರಾಜ್ಯ ರಾಜಕೀಯದ ಪ್ರಚಲಿತ ವಿದ್ಯಮಾನಗಳ ಕುರಿತು ಸಮಗ್ರವಾಗಿ ಸಮಾಲೋಚನೆ ನಡೆಸಿದರು. ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಅವರ ಉಪಸ್ಥಿತಿಯಲ್ಲಿ ನಡೆದ ಈ ಸುದೀರ್ಘ ಸಭೆಯಲ್ಲಿ, ಎರಡೂ ಪಕ್ಷಗಳ ಸಮನ್ವಯತೆಯನ್ನು ಮತ್ತಷ್ಟು ಬಲಪಡಿಸುವ ಕುರಿತು ಮಹತ್ವದ ತೀರ್ಮಾನಗಳನ್ನು ಕೈಗೊಳ್ಳಲಾಯಿತು.
ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಮತ್ತು ಜನವಿರೋಧಿ ನೀತಿಗಳ ವಿರುದ್ಧ ಹೋರಾಡಲು ಉಭಯ ಪಕ್ಷಗಳ ನಡುವೆ ಅಧಿಕೃತ ‘ಸಮನ್ವಯ ಸಮಿತಿ’ (Coordination Committee) ರಚಿಸುವ ಬಗ್ಗೆ ಈ ಸಭೆಯಲ್ಲಿ ಗಂಭೀರ ಚರ್ಚೆ ನಡೆದಿದೆ. ಬಿಜೆಪಿಯಿಂದ ಪ್ರಲ್ಹಾದ್ ಜೋಶಿ, ಆರ್. ಅಶೋಕ್ ಮತ್ತು ಬಿ.ವೈ. ವಿಜಯೇಂದ್ರ ಅವರು ಈ ಸಮಿತಿಯಲ್ಲಿ ಇರಲಿದ್ದು, ಜೆಡಿಎಸ್ ವತಿಯಿಂದಲೂ ಶೀಘ್ರದಲ್ಲೇ ಮೂವರು ನಾಯಕರ ಹೆಸರನ್ನು ಅಂತಿಮಗೊಳಿಸಿ ಪಟ್ಟಿ ನೀಡಲಿದ್ದಾರೆ. ರಾಷ್ಟ್ರೀಯ ನಾಯಕರ ಸೂಚನೆಯಂತೆ ರಾಜ್ಯದ ಹಿತದೃಷ್ಟಿಯಿಂದ ಈ ಸಮನ್ವಯ ಸಮಿತಿ ರಚನೆಯಾಗುತ್ತಿದ್ದು, ಮುಂಬರುವ ಹಿರಿಯೂರು ಹಾಗೂ ಧಾರವಾಡ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಮತ್ತು ಶಿಕ್ಷಕ-ಪದವೀಧರರ ಪರಿಷತ್ ಚುನಾವಣೆಗಳನ್ನು ಯಾವುದೇ ಗೊಂದಲಗಳಿಲ್ಲದೆ ಒಟ್ಟಾಗಿ ಎದುರಿಸಲು ಉಭಯ ನಾಯಕರು ಕಾರ್ಯತಂತ್ರ ರೂಪಿಸಿದ್ದಾರೆ.
ಇದೇ ವೇಳೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮತ್ತು ಬಿ.ವೈ. ವಿಜಯೇಂದ್ರ, ಪ್ರಸ್ತುತ ಕಾಂಗ್ರೆಸ್ ಸರ್ಕಾರವು ರಾಜ್ಯದ ಜನರ ಕಿವಿಗೆ ಹೂ ಮುಡಿಸುವ ಕೆಲಸ ಮಾಡುತ್ತಿದೆ ಎಂದು ತೀವ್ರ ವಾಗ್ದಾಳಿ ನಡೆಸಿದರು. ರಾಜ್ಯದಲ್ಲಿ ತಲೆದೋರಿರುವ ಬರಗಾಲದ ಪರಿಸ್ಥಿತಿಯನ್ನು ನಿರ್ಲಕ್ಷಿಸಿರುವ ಸರ್ಕಾರ, ಕೇವಲ ವೋಟ್ ಬ್ಯಾಂಕ್ ರಾಜಕಾರಣದ ಎಸ್‌ಐಆರ್ ಪ್ರಕ್ರಿಯೆಯಲ್ಲೇ ಮುಳುಗಿದೆ. ಬರ ಅಧ್ಯಯನಕ್ಕಾಗಿ ಶೀಘ್ರದಲ್ಲೇ ಜೆಡಿಎಸ್ ವತಿಯಿಂದ ವಿಶೇಷ ತಂಡವೊಂದು ಪ್ರವಾಸ ಮಾಡಲಿದೆ ಎಂದು ಕುಮಾರಸ್ವಾಮಿ ಪ್ರಕಟಿಸಿದರು.
ಇದೇ ವೇಳೆ ಬಿ.ವೈ. ವಿಜಯೇಂದ್ರ ಅವರು ಮಾತನಾಡಿ, "ಸುಪ್ರಿಂ ಕೋರ್ಟ್ ಆದೇಶದ ಪ್ರಕಾರ ಆಗಸ್ಟ್ ಅಂತ್ಯದೊಳಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಚುನಾವಣೆ ನಡೆಯಬೇಕಿತ್ತು. ಆದರೆ ರಾಜ್ಯ ಸರ್ಕಾರಕ್ಕೆ ಚುನಾವಣೆ ನಡೆಸುವ ಮನಸ್ಸಿಲ್ಲ, ಅವರ ಗಮನ ಕೇವಲ ಸಂಪುಟ ವಿಸ್ತರಣೆಯ ಮೇಲಿದೆ ಎಂದು ದೂರಿದರು.
ರಾಜ್ಯ ಸರ್ಕಾರದ ಆಡಳಿತ ಸಂಪೂರ್ಣವಾಗಿ ಹಳಿ ತಪ್ಪಿದೆ ಎಂದು ಟೀಕಿಸಿದ ವಿಜಯೇಂದ್ರ, ಸದ್ಯ ಸಚಿವಾಲಯದಲ್ಲಿ ಸುಮಾರು 80 ಸಾವಿರ ಕಡತಗಳು ವಿಲೇವಾರಿಯಾಗದೆ ಧೂಳು ಹಿಡಿಯುತ್ತಿರುವುದೇ ಇದಕ್ಕೆ ಸಾಕ್ಷಿ ಎಂದರು. ಇದೇ ವೇಳೆ ಬೆಂಗಳೂರಿನಲ್ಲಿ ಬೀದಿ ಬದಿ ವ್ಯಾಪಾರಿಗಳನ್ನು ಏಕಾಏಕಿ ತೆರವುಗೊಳಿಸುತ್ತಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಅವರು, ಬಡ ಕುಟುಂಬದಿಂದ ಬಂದ ಈ ವ್ಯಾಪಾರಿಗಳು ಸರ್ಕಾರಕ್ಕೆ ಆರ್ಥಿಕ ಶಕ್ತಿ ತುಂಬುವವರು. ಅವರಿಗೆ ಮೊದಲು ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಹೀಗೆ ಬೀದಿಗೆ ತಳ್ಳುವುದು ತಪ್ಪು. ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು ಕಳೆದ ಮೂರು ವರ್ಷಗಳ ತನ್ನ ವೈಫಲ್ಯಗಳನ್ನು ಸರಿಪಡಿಸಿಕೊಂಡು ರೈತರು ಮತ್ತು ಬಡವರ ಹಿತ ಕಾಯಬೇಕು ಎಂದು ಆಗ್ರಹಿಸಿದರು.
ಕೊನೆಯದಾಗಿ, ರಾಜ್ಯ ಸರ್ಕಾರದ ಓಲೈಕೆ ರಾಜಕಾರಣ ದೇಶದ ಭದ್ರತೆಗೆ ದೊಡ್ಡ ಕಂಟಕ ತರಲಿದೆ ಎಂದು ಮೈತ್ರಿಕೂಟದ ನಾಯಕರು ಆತಂಕ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಪಿಆರ್‌ಸಿ (PRC) ನೆಪದಲ್ಲಿ ಬಾಂಗ್ಲಾದೇಶಿ ವಲಸಿಗರಿಗೆ ಮತ್ತು ಅಕ್ರಮ ನುಸುಳುಕೋರರಿಗೆ ಅವಕಾಶ ಮಾಡಿಕೊಡಲು ಕಾಂಗ್ರೆಸ್ ಸರ್ಕಾರ ತೆರೆಮರೆಯಲ್ಲಿ ಸಿದ್ಧತೆ ನಡೆಸುತ್ತಿದೆ ಎಂದು ಅವರು ಗಂಭೀರ ಆರೋಪ ಮಾಡಿದರು. ಕೇವಲ ಅಲ್ಪಸಂಖ್ಯಾತರ ಓಲೈಕೆಗಾಗಿ ದೇಶದ ಹಿತದೃಷ್ಟಿಗೆ ಧಕ್ಕೆ ತರುವ ಇಂತಹ ದೇಶವಿರೋಧಿ ನಿರ್ಧಾರಗಳನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದ ವಿಜಯೇಂದ್ರ, ಈ ಕುರಿತು ರಾಜ್ಯಾದ್ಯಂತ ಜನರಲ್ಲಿ ದೊಡ್ಡ ಮಟ್ಟದ ಜಾಗೃತಿ ಮೂಡಿಸುವ ಹೋರಾಟವನ್ನು ಬಿಜೆಪಿ-ಜೆಡಿಎಸ್ ಜಂಟಿಯಾಗಿ ಕೈಗೆತ್ತಿಕೊಳ್ಳಲಿದೆ ಎಂದು ಎಚ್ಚರಿಸಿದರು.