ಎಚ್.ಡಿ.ಕುಮಾರಸ್ವಾಮಿ 
ರಾಜ್ಯ

ಬಿಜೆಪಿ-ಜೆಡಿಎಸ್ ಮೈತ್ರಿ: ರಾಜ್ಯ ರಾಜಕಾರಣದಲ್ಲಿ ಬೆಸೆದುಕೊಂಡ ಹೊಸ ಆಯಾಮ

ಪ್ರಮುಖ ಮುಖ್ಯಾಂಶಗಳು

  • *ಬಿಜೆಪಿ-ಜೆಡಿಎಸ್ ಮೈತ್ರಿಗೆ ಒಂದು ಮುಕ್ಕಾಲು ವರ್ಷ
  • *ಯಾವ ಚುನಾವಣೆಯಲ್ಲೂ ಕಾಣಿಸಿಕೊಳ್ಳದ ಸಂಘರ್ಷ
  • *ಭವಿಷ್ಯದ ರಾಜಕಾರಣಕ್ಕೆ ಮೈತ್ರಿ ಧರ್ಮದ ಸಧೃಢ ಹೆಜ್ಜೆ
ಶಿವಾನಂದ ತಗಡೂರು, ಬೆಂಗಳೂರು:
ರಾಜ್ಯ ರಾಜಕೀಯದಲ್ಲಿ ಧೃವೀಕರಣ ನಿರಂತರವಾಗಿ ನಡೆಯುತ್ತಲೇ ಬಂದಿದೆ. ರಾಜಕಾರಣ ನಿಂತ ನೀರಲ್ಲ ಎನ್ನುವುದು ಆಗಿಂದಾಗ್ಗೆ ರುಜುವಾತಾಗುತ್ತಲೇ ಇದೆ. ಈ ಮಾತಿಗೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಕೂಡ ಹೊರತಾಗಿಲ್ಲ.
ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಬೆಸೆದುಕೊಂಡಿದ್ದಕ್ಕೆ ಈಗ ಬರೋಬ್ಬರಿ ಒಂದು ವರ್ಷ ಒಂಬತ್ತು ತಿಂಗಳ ಹರೆಯ. ಮೊದಲು ಈ ಮೈತ್ರಿ ಯಾಕೆ? ಎಂದು ಪ್ರಶ್ನೆ ಮಾಡಿದವರಿಗೆಲ್ಲ ಹೈಕಮಾಂಡ್ ಮೌನವೇ ಉತ್ತರ ನೀಡಿತ್ತು. ಅಂದಿನಿಂದ ಈ ತನಕ ಈ ಎರಡೂ ಪಕ್ಷದ ಮೈತ್ರಿಯಲ್ಲಿ ಹೇಳಿಕೊಳ್ಳುವ ಮಟ್ಟಕ್ಕೆ ಎಲ್ಲಿಯೂ ಬಿರುಕು ಕಾಣಿಸಿಕೊಂಡಿಲ್ಲ ಎನ್ನುವುದು ಮಹತ್ವದ ಸಂಗತಿ. ಈ ಮೈತ್ರಿ ಭವಿಷ್ಯದ ರಾಜಕೀಯದಲ್ಲಿ ಮಹತ್ವದ ಹೆಜ್ಜೆಯಾಗಲಿದೆ ಎನ್ನುವ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿರುವುದು ಹೊಸದೊಂದು ಪಲ್ಲಟಕ್ಕೆ ಕಾಲ ಪಕ್ವವಾಗುತ್ತಿದೆ ಎಂದು ಅರ್ಥೈಯಿಸಲಾಗುತ್ತಿದೆ.
2023 ಮೇ ತಿಂಗಳಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಆಡಳಿತರೂಢ ಬಿಜೆಪಿ 65 ಸ್ಥಾನಕ್ಕೆ ಕುಸಿದು ಅಧಿಕಾರ ಕಳೆದುಕೊಂಡಿತ್ತು. ಕನಿಷ್ಠ 40 ಸ್ಥಾನದ ನಿರೀಕ್ಷೆಯಲ್ಲಿ ಕಿಂಗ್ ಮೇಕರ್ ಕನಸು ಕಾಣುತ್ತಿದ್ದ ಜೆಡಿಎಸ್ ಬಲ ಕೂಡ 19ಕ್ಕೆ ಕುಸಿದಿತ್ತು. ಆಗ ಆದ ಜ್ಞಾನೋದಯವೇ ಮೈತ್ರಿಗೆ ಮೂಲ ಮಂತ್ರವಾಯಿತು.
ಮೈತ್ರಿಗೆ ಮೊದಲ ಅಗ್ನಿ ಪರೀಕ್ಷೆ:
ಬಿಜೆಪಿ ಹೈಕಮಾಂಡ್, ರಾಜ್ಯ ಮುಖಂಡರ ಮಾತನ್ನು ಕೇಳುವ ಸ್ಥಿತಿಯಲ್ಲಿರಲಿಲ್ಲ. ಸೋತು ಸುಣ್ಣವಾಗಿದ್ದ ಜೆಡಿಎಸ್‌ಗೂ ಮೈತ್ರಿ ಅನಿವಾರ್ಯವಾಗಿತ್ತು. ಆಗ ಬೆಸೆದುಕೊಂಡ ಮೈತ್ರಿಗೆ ಲೋಕಸಭೆ ಚುನಾವಣೆಯೇ ಮೊದಲ ಅಗ್ನಿ ಪರೀಕ್ಷೆಯಾಯಿತು.
ಅಂದು ಎಲ್ಲಾ ರಾಜಕೀಯ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿ, ಎನ್‌ಡಿಎ (ಬಿಜೆಪಿ 17 ಮತ್ತು ಜೆಡಿಎಸ್ 2) 19 ಸ್ಥಾನಗಳನ್ನು ಪಡೆಯುವ ಮೂಲಕ ಆಡಳಿತರೂಢ ಕಾಂಗ್ರೆಸ್ ಪಕ್ಷವನ್ನು ಕೇವಲ 9 ಸ್ಥಾನಕ್ಕೆ ಕಟ್ಟಿ ಹಾಕಿದ್ದು ಮೈತ್ರಿ ಹೆಜ್ಜೆ ದೊರೆತ ಮೊದಲ ಗೆಲುವು.
ಬಳಿಕ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿಯೂ ಬಿಜೆಪಿ ಜೆಡಿಎಸ್ ಮೈತ್ರಿಗೆ ಉತ್ತಮ ಳಿತಾಂಶ ಬಂದಿದ್ದು, ರಾಜಕೀಯವಾಗಿ ಹೊಸ ಆಯಾಮವನ್ನೆ ಸೃಷ್ಟಿ ಮಾಡಿದೆ.

*ಹೈಕಮಾಂಡ್ ನಿರ್ದೇಶನದಂತೆ ರಾಜ್ಯದಲ್ಲಿಯೂ ಎನ್‌ಡಿಎ ಮೈತ್ರಿಕೂಟ ಮುನ್ನೆಡೆಯುತ್ತಿದೆ. ಜೆಡಿಎಸ್ ನಾಯಕರ ಜೊತೆಗೆ ಇಲ್ಲಿಯ ತನಕ ಯಾವುದೇ ಭಿನ್ನಾಭಿಪ್ರಾಯವಿಲ್ಲ.

-ಬಿ.ವೈ.ವಿಜಯೇಂದ್ರ, ರಾಜ್ಯಾಧ್ಯಕ್ಷರು, ಬಿಜೆಪಿ.

ಎಲ್ಲೂ ಲಯ ತಪ್ಪದ ಮೈತ್ರಿ:
ಲೋಕಸಭೆ ಚುನಾವಣೆ, ವಿಧಾನಸಭೆ, ವಿಧಾನ ಪರಿಷತ್ ಚುನಾವಣೆಯಲ್ಲಿ ಎಲ್ಲಿಯೂ ಲಯ ತಪ್ಪದ ಬಿಜೆಪಿ-ಜೆಡಿಎಸ್ ಮೈತ್ರಿ ರಾಜಕಾರಣಕ್ಕೆ, ವಿಧಾನಸಭೆಯ 3 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಭ್ರಮನಿರಸನ ಆಗಿದ್ದು ಇದೆ. ಅಲ್ಲಿಂದ ಮುಂದಕ್ಕೆ ಇನ್ನೂ ಎಚ್ಚರಿಕೆ ವಹಿಸುತ್ತ ಬಂದಿರುವ ಎರಡೂ ಪಕ್ಷಗಳ ನಾಯಕರು, ಆಗಿಂದಾಗ್ಗೆ ಜಂಟಿ ಸಭೆಗಳನ್ನು ಮಾಡುತ್ತಲೇ ನಾವೆಲ್ಲ ಒಂದಾಗಿದ್ದೇವೆ ಎನ್ನುವ ಮಾಹಿತಿಯನ್ನು ಸಾರುತ್ತಲೇ ಬಂದಿದ್ದಾರೆ.
ಸ್ಥಳೀಯ ಸಂಸ್ಥೆ ಚುನಾವಣೆಗೂ ಮೈತ್ರಿ:
ಮುಂಬರಲಿರುವ ತಾಲೂಕು, ಜಿಲ್ಲಾ ಪಂಚಾಯಿತಿ, ಪುರಸಭೆ, ನಗರಸಭೆ, ಮಹಾನಗರ ಪಾಲಿಕೆ ಚುನಾವಣೆಯಲ್ಲಿಯೂ ಮೈತ್ರಿ ಮೂಲಕವೇ ಚುನಾವಣೆ ಎದುರಿಸಲು ಎರಡೂ ಪಕ್ಷಗಳು ಮಾನಸಿಕವಾಗಿ ಸಿದ್ಧವಾಗಿವೆ. ಇದಕ್ಕೆ ಹೈಕಮಾಂಡ್ ಕೂಡ ಅಸ್ತು ಎಂದಿದೆ. ಮೈತ್ರಿ ಬಗ್ಗೆ ಅಪಸ್ವರ ಎತ್ತಿದ್ದ ಬಿಜೆಪಿ ನಾಯಕರ ಧ್ವನಿಯೂ ಕ್ಷೀಣಿಸುತ್ತಾ ಬಂದಿದೆ. ಹೈಕಮಾಂಡ್ ತೀರ್ಮಾನಕ್ಕೆ ಬದ್ದ ಎನ್ನುವ ಮಾತುಗಳಷ್ಟೆ ಗಟ್ಟಿಯಾಗಿ ಕೇಳಿ ಬರುತ್ತಿರುವುದು ಸಂಘಟನೆಗೆ ಮಹತ್ವದ ಹೆಜ್ಜೆ.
ಬಿಜೆಪಿ ನಾಯಕತ್ವಕ್ಕೂ ಸವಾಲು:

*ನಮ್ಮ ಎನ್‌ಡಿಎ ಮೈತ್ರಿ ಕೂಟದಲ್ಲಿ ಯಾವುದೇ ಭಿನ್ನಸ್ವರ ಇಲ್ಲ. ರಾಜ್ಯದಲ್ಲಿಯೂ ಮೈತ್ರಿ ಧರ್ಮ ಪಾಲಿಸಿಕೊಂಡೇ ಮುಂಬರುವ ಎಲ್ಲಾ ಚುನಾವಣೆಗಳನ್ನು ಎದುರಿಸಲಾಗುವುದು. -ಎಚ್.ಡಿ.ಕುಮಾರಸ್ವಾಮಿ, ರಾಜ್ಯಾಧ್ಯಕ್ಷರು, ಜೆಡಿಎಸ್.

ಜೆಡಿಎಸ್‌ಗೂ ಅನಿವಾರ್ಯ:
ಇನ್ನೇನು ಮುಗಿದೇ ಹೋಗಿತು ಎನ್ನುವ ಮಟ್ಟಕ್ಕೆ ರಾಜಕೀಯ ಚರ್ಚೆ ನಡೆಯುತ್ತಿರುವ ಹೊತ್ತಿನಲ್ಲಿ ಬಿಜೆಪಿ ಜೊತೆಗಿನ ಮೈತ್ರಿ ಜೆಡಿಎಸ್‌ಗೆ ವರದಾನವೇ ಆಯಿತು. ಸದ್ಯದ ಪರಿಸ್ಥಿತಿಯಲ್ಲಿ ಜೆಡಿಎಸ್ ಮೈತ್ರಿ ಮುರಿದುಕೊಳ್ಳುವ ಯಾವುದೇ ಲಕ್ಷಣಗಳಿಲ್ಲ. ರಾಜ್ಯ ರಾಜಕಿಯದಲ್ಲಿ ಜೆಡಿಎಸ್‌ಗೆ ಮೈತ್ರಿ ಅನಿವಾರ್ಯವೂ ಆಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.