ನಾಗಮಂಗಲ ಪಟ್ಟಣದಲ್ಲಿ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. 
ರಾಜ್ಯ

ಎಚ್‌ಡಿಕೆ ಇಲ್ಲದೆ ಬಿಜೆಪಿಗೆ ಶಕ್ತಿ ಇಲ್ಲ

ಕಿರಣ್ ಗೌಡ.ಜಿ

ಪ್ರಮುಖ ಮುಖ್ಯಾಂಶಗಳು

  • ನಾಯಕರ ವಿರುದ್ಧ ಎಲ್.ಆರ್.ಶಿವರಾಮೇಗೌಡ ವಾಗ್ದಾಳಿ
ನಾಗಮಂಗಲ: ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಾಗಿದ್ದರೂ ರಾಜ್ಯದಲ್ಲಿ ವಿರೋಧ ಪಕ್ಷವಿಲ್ಲದಂತಾಗಿದೆ. ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ರಾಜ್ಯ ರಾಜಕಾರಣಕ್ಕೆ ಎಚ್.ಡಿ.ಕುಮಾರಸ್ವಾಮಿ ಹಿಂದಿರುಗಲಿ ಎಂದು ಜೆಡಿಎಸ್ ಮುಖಂಡರೇ ಒತ್ತಾಯಿಸುತ್ತಿರುವುದನ್ನು ನೋಡಿದರೆ ಬಿಜೆಪಿಯವರು ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ಕಾಂಗ್ರೆಸ್ ವಕ್ತಾರ ಎಲ್.ಆರ್.ಶಿವರಾಮೇಗೌಡ ವ್ಯಂಗ್ಯವಾಡಿದರು.
ಎಚ್.ಡಿ.ಕುಮಾರಸ್ವಾಮಿ ಅವರನ್ನು ಪ್ರಧಾನಿ ನರೇಂದ್ರ ಮೋದಿ ಪಕ್ಕದಲ್ಲಿ ಕೂರಿಸಿಕೊಳ್ಳುತ್ತಿದ್ದಾರೆ. ಆದರೂ ರಾಜ್ಯದಲ್ಲಿ ವಿರೋಧ ಪಕ್ಷವಿಲ್ಲ ಎಂದು ಜೆಡಿಎಸ್‌ನವರೇ ಹೇಳುತ್ತಿದ್ದಾರೆ. ಕುಮಾರಸ್ವಾಮಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜ್ಯಕ್ಕೆ ಮತ್ತೆ ಬನ್ನಿ ಎಂದು ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಕರೆಯುತ್ತಿದ್ದಾರೆ.
ಜೆಡಿಎಸ್‌ನವರ ಬೇಳೆ ಬೇಯುತ್ತಿಲ್ಲ ಅಂತನೋ ಅಥವಾ ರಾಜ್ಯದಲ್ಲಿ ಇವರಿಗೆ ಅಸ್ತಿತ್ವವಿಲ್ಲದಂತಾಗುತ್ತಿದೆ ಎಂಬ ಭಯದಿಂದ ಕರೆಯುತ್ತಿದ್ದಾರೋ ಗೊತ್ತಿಲ್ಲ. ಬಿಜೆಪಿಯವರಿಗೆ ಹಿಂದೂತ್ವ ಅಷ್ಟೇ ಅವರ ಮತಬ್ಯಾಂಕ್ ಆಗಿದೆ. ಆದರೆ ಈಗ ಡಿ.ಕೆ.ಶಿವಕುಮಾರ್ ಅವರ ಹಿಂದುತ್ವ ನೋಡಿ ಬಿಜೆಪಿ ಅವರಿಗೆ ಭಯ ಆರಂಭವಾಗಿದೆ.
ಎಚ್.ಡಿ.ಕುಮಾರಸ್ವಾಮಿ ಅವರು ಒಂದು ಹೇಳಿಕೆ ನೀಡಿದರೆ ಅವರ ಹೇಳಿಕೆ ಹಿಂದೆ ಬಿಜೆಪಿ ಅವರು ಹೋಗುತ್ತಿದ್ದಾರೆ. ಎಚ್‌ಡಿಕೆ ಇಲ್ಲದೆ ಬಿಜೆಪಿಗೆ ಶಕ್ತಿ ಇಲ್ಲದಂತಾಗಿದೆ ಎಂದು ಪಟ್ಟಣದ ತಮ್ಮ ಗೃಹಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.
ಒಕ್ಕಲಿಗ ಸಮುದಾಯ ಎಚ್.ಡಿ.ಕುಮಾರಸ್ವಾಮಿ ಅವರ ನಾಯಕತ್ವದಿಂದ ಬೇಸತ್ತು, ಹೊಸ ಮುಖ ಹುಡುಕುತ್ತಿದ್ದಾರೆ. ಈಗ ಡಿ.ಕೆ.ಶಿವಕುಮಾರ್ ಸಿಕ್ಕಿದಾರೆ. ಕುಮಾರಸ್ವಾಮಿ ಅವರಿಗೆ ದೆಹಲಿಗೆ ಹೋಗಿ ಕೆಲಸ ಮಾಡಿ ಅಂದರೆ ರಾಮನಗರ, ಬಿಡದಿ ವಿಷಯಕ್ಕೆ ಬರುತ್ತಾರೆ. ಬಿಡದಿ ನೋಟಿಫಿಕೇಷನ್ ಅನ್ನು ಎಚ್‌ಡಿಕೆ ಅಧಿಕಾರದಲ್ಲಿದ್ದಾಗ ಮಾಡಿದ್ದು ಎಂಬುದನ್ನು ಅವರು ಮರೆತಿರಬಹುದು. ಆದರೆ ಆ ಭಾಗದ ಜನತೆ ಮರೆತಿಲ್ಲ. ಸಿಎಂ ಆಗಿ ಡಿ.ಕೆ.ಶಿವಕುಮಾರ್ ಒಳ್ಳೆಯ ಕೆಲಸ ಮಾಡುತ್ತಾರೆ ಎಂದು ಎಚ್‌ಡಿಕೆಗೆ ಹೊಟ್ಟೆ ಉರಿ ಬಂದಿದೆ ಎಂದರು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಹಿಡಿತದಲ್ಲಿದ್ದಾಗ ಜೆಡಿಎಸ್ ಒಂದು ಮಾದರಿ ಪಕ್ಷವಾಗಿ ಬೆಳೆಯುತ್ತಿತ್ತು. ಒಕ್ಕಲಿಗ ನಾಯಕರ ದಂಡೇ ಅವರ ಜತೆಗಿತ್ತು. ಆದರೆ ಕುಮಾರಸ್ವಾಮಿ ಪಕ್ಷದ ಜವಾಬ್ದಾರಿ ವಹಿಸಿಕೊಂಡ ನಂತರ ಪಕ್ಷದಿಂದ ಹೊರಬಂದವರ ದೊಡ್ಡ ಗುಂಪು ಸಿಗಲಿದೆ. ಎಚ್‌ಡಿಡಿ ಅವರ ಹಿಡಿತದಲ್ಲಿಯೇ ಇದ್ದಿದ್ದರೆ ತಮಿಳುನಾಡು, ಆಂಧ್ರ, ಕೇರಳ, ಪಶ್ಚಿಮ ಬಂಗಾಳ ರೀತಿಯಲ್ಲಿಯೇ ಪ್ರಾದೇಶಿಕ ಪಕ್ಷ ಬೆಳೆಯುತ್ತಿತ್ತು ಎಂದರು.
ಈ ಸಂದರ್ಭ ತಾ.ಪಂ.ಮಾಜಿ ಸದಸ್ಯ ಹೇಮರಾಜು ಮತ್ತು ಕರಿಯಣ್ಣ, ಅಹಿಂದ ಮುಖಂಡ ಬಿದರಕೆರೆ ಮಂಜೇಗೌಡ, ವಕೀಲ ಟಿ.ಕೆ.ರಾಮೇಗೌಡ, ಮುಖಂಡರಾದ ಲಾರಿಚನ್ನಪ್ಪ, ನರೇಂದ್ರ, ಹರೀಶ್ ಮತ್ತಿತರಿದ್ದರು.