ramesh babu 
ರಾಜ್ಯ

ಎಸ್‌ಐಆರ್ ಮೂಲಕ ಶೇ.20 ರಷ್ಟು ಮತದಾರರ ಹೆಸರು ಅಳಿಸಿರುವುದಕ್ಕೆ ಬಿಜೆಪಿಯೇ ನೇರ ಹೊಣೆ : ಕಾಂಗ್ರೆಸ್ ಆರೋಪ

ಪ್ರಮುಖ ಮುಖ್ಯಾಂಶಗಳು

  • ಅನೇಕ ಕಡೆ ಮತದಾರರ ಮನೆಗಳಿಗೆ ಭೇಟಿ ನೀಡದೆ, ಗಣತಿ ನಮೂನೆ ವಿತರಿಸದೆ ಈ ಕ್ರಮ ಕೈಗೊಳ್ಳಲಾಗುತ್ತಿದೆ
  • ಕಳೆದ ವಾರ ಶೇ.15 ಮತದಾರರ ಹೆಸರು ಅಳಿಸುವ ಸಾಧ್ಯತೆ ಇದ್ದರೆ, ಈ ವಾರ ಅದು ಶೇ.20ಕ್ಕೆ ಏರಿಕೆಯಾಗಿದೆ.
ಬೆಂಗಳೂರು:
ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಹೆಸರಿನಲ್ಲಿ ರಾಜ್ಯದಲ್ಲಿ ಶೇ.20 ಮತದಾರರ ಹೆಸರನ್ನು ಮತಪಟ್ಟಿಯಿಂದ ಕೈಬಿಡುವ ಪ್ರಯತ್ನ ನಡೆಯುತ್ತಿದ್ದು, ಇದಕ್ಕೆ ಬಿಜೆಪಿಯೇ ನೇರ ಹೊಣೆ ಎಂದು ಕೆಪಿಸಿಸಿ ಮಾಧ್ಯಮ ಹಾಗೂ ಸಂವಹನ ವಿಭಾಗದ ಮುಖ್ಯಸ್ಥ ರಮೇಶ್ ಬಾಬು ಆರೋಪಿಸಿದರು.
ಗುರುವಾರ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಸುಮಾರು 5.40 ಕೋಟಿ ಮತದಾರರ ಪೈಕಿ ಒಂದು ಕೋಟಿಗೂ ಹೆಚ್ಚು ಮತದಾರರ ಹೆಸರು ಅಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ದೂರಿದರು.
ಗೈರುಹಾಜರಿ, ಮೃತಪಟ್ಟವರು, ವಿಳಾಸ ಬದಲಾವಣೆ ಹಾಗೂ ಒಂದಕ್ಕಿಂತ ಹೆಚ್ಚು ಕಡೆ ಮತದಾರರ ಹೆಸರು ಇರುವುದನ್ನು ಕಾರಣವನ್ನಾಗಿ ನೀಡಿ ಮತದಾರರ ಹೆಸರುಗಳನ್ನು ಕೈಬಿಡಲಾಗುತ್ತಿದೆ. ಆದರೆ ಅನೇಕ ಕಡೆ ಮತದಾರರ ಮನೆಗಳಿಗೆ ಭೇಟಿ ನೀಡದೆ, ಗಣತಿ ನಮೂನೆ ವಿತರಿಸದೆ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಆರೋಪಿಸಿದರು.
ಕಳೆದ ವಾರ ಶೇ.15 ಮತದಾರರ ಹೆಸರು ಅಳಿಸುವ ಸಾಧ್ಯತೆ ಇದ್ದರೆ, ಈ ವಾರ ಅದು ಶೇ.20ಕ್ಕೆ ಏರಿಕೆಯಾಗಿದೆ. ಕೆ.ಆರ್.ಪುರಂ ಕ್ಷೇತ್ರದಲ್ಲೇ ಸುಮಾರು ಒಂದು ಲಕ್ಷ ಮತದಾರರು ಗೈರಾಗಿದ್ದಾರೆ ಎಂದು ದಾಖಲೆ ಸೃಷ್ಟಿಸಲಾಗುತ್ತಿದೆ ಎಂದು ಅವರು ಟೀಕಿಸಿದರು.
ಕಾಂಗ್ರೆಸ್ ಮತದಾರರೇ ಗುರಿ:
ಚುನಾವಣಾ ಆಯೋಗವು ಶೇ.97.7 ಗಣತಿ ನಮೂನೆ ವಿತರಿಸಲಾಗಿದೆ ಎಂದು ಹೇಳುತ್ತಿದೆ. ಆದರೆ ಸ್ಥಳಾಂತರಗೊಂಡವರು ಹಾಗೂ 2002ರ ಮತಪಟ್ಟಿಯೊಂದಿಗೆ ಹೊಂದಾಣಿಕೆ ಆಗದವರಿಗೆ ನಮೂನೆ ತಲುಪಿಲ್ಲ. ಬೆಂಗಳೂರು ಹೊರತುಪಡಿಸಿ ಈಗಾಗಲೇ ಶೇ.92 ಮತದಾರರ ಮ್ಯಾಪಿಂಗ್ ಪೂರ್ಣಗೊಂಡಿದೆ ಎಂದು ಆಯೋಗ ಹೇಳಿದ್ದರೂ, ಕೇಂದ್ರ ಸರ್ಕಾರದ ನಿರ್ದೇಶನದಂತೆ ಕಾಂಗ್ರೆಸ್ ಪರ ಮತದಾರರನ್ನು ಗುರಿಯಾಗಿಸಿಕೊಂಡು ಹೆಸರು ಅಳಿಸುವ ಯತ್ನ ನಡೆಯುತ್ತಿದೆ ಎಂದರು.
ಅರ್ಹ ಮತದಾರರ ಮತದಾನದ ಹಕ್ಕು ರಕ್ಷಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ವಾಸದೃಢೀಕರಣ ಪತ್ರ ನೀಡಿದರೂ, ಅದನ್ನೂ ಬಿಜೆಪಿ ಟೀಕಿಸಿದೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಶೇ.43 ಮತ ಬಂದಿರುವುದರಿಂದ ಕಾಂಗ್ರೆಸ್ ಬೆಂಬಲಿಗರ ಹೆಸರನ್ನು ಮತಪಟ್ಟಿಯಿಂದ ಕೈಬಿಡುವ ಉದ್ದೇಶ ಬಿಜೆಪಿ ಹೊಂದಿದೆ ಎಂದು ರಮೇಶ್ ಬಾಬು ದೂರಿದರು.
ಕಾಲಾವಧಿ ವಿಸ್ತರಣೆಗೆ ಆಗ್ರಹ:
ಚುನಾವಣಾ ಆಯೋಗಕ್ಕೆ ಹಲವು ಬಾರಿ ಪತ್ರ ಬರೆದರೂ ಯಾವುದೇ ಸಮರ್ಪಕ ಉತ್ತರ ಸಿಕ್ಕಿಲ್ಲ. ಎಲ್ಲಾ ಬೂತ್‌ಗಳಲ್ಲಿ ಸಹಾಯ ಕೇಂದ್ರ ತೆರೆಯುವ ಭರವಸೆ ನೀಡಿದ್ದರೂ ಅದನ್ನು ಜಾರಿಗೆ ತರಲಾಗಿಲ್ಲ. ಹೀಗಾಗಿ ಕೇಂದ್ರ ಚುನಾವಣಾ ಆಯೋಗ ಮಧ್ಯಪ್ರವೇಶಿಸಿ ಗಣತಿ ನಮೂನೆ ಸಲ್ಲಿಸಲು ಕನಿಷ್ಠ ಒಂದು ತಿಂಗಳ ಕಾಲಾವಧಿ ವಿಸ್ತರಿಸಬೇಕು ಹಾಗೂ ಶೇ.20 ಮತದಾರರ ಹೆಸರು ಅಳಿಸುವ ಪ್ರಕ್ರಿಯೆಗೆ ತಡೆ ಹಾಕಬೇಕು ಎಂದು ಅವರು ಒತ್ತಾಯಿಸಿದರು.
ಅಗತ್ಯವಿದ್ದರೆ ಈ ವಿಚಾರವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗುವುದು ಎಂದೂ ರಮೇಶ್ ಬಾಬು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಪದವೀಧರರ ವಿಭಾಗದ ಅಧ್ಯಕ್ಷ ನಟರಾಜ ಗೌಡ ಹಾಗೂ ಮಾಜಿ ಮೇಯರ್ ರಾಮಚಂದ್ರಪ್ಪ ಉಪಸ್ಥಿತರಿದ್ದರು.

*ರಾಜ್ಯದ ಬಿಜೆಪಿ ನಾಯಕರು ಹಾಗೂ ಕೇಂದ್ರ ಸಚಿವರು ಚುನಾವಣಾ ಆಯೋಗದ ಕ್ರಮವನ್ನು ಸಮರ್ಥಿಸಿಕೊಳ್ಳುತ್ತಿರುವುದರಿಂದ, ಅರ್ಹ ಮತದಾರರು ಮತದಾನದ ಹಕ್ಕು ಕಳೆದುಕೊಂಡರೆ ಅದಕ್ಕೆ ಬಿಜೆಪಿಯೇ ನೇರ ಹೊಣೆ.

-ಕೆಪಿಸಿಸಿ ಮಾಧ್ಯಮ ಹಾಗೂ ಸಂವಹನ ವಿಭಾಗದ ಮುಖ್ಯಸ್ಥ ರಮೇಶ್ ಬಾಬು