ಕಲಬುರಗಿಯಲ್ಲಿ ಜಿಲ್ಲಾಧಿಕಾರಿ ಇಕ್ರಮ್ ಶರೀಪ್ ಅವರಿಗೆ ಬಿಜೆಪಿ ಶಾಸಕರಾದ ಡಾ.ಬಿ.ಜಿ.ಪಾಟೀಲ್, ಶಶೀಲ್ ನಮೋಶಿ, ಡಾ.ಅವಿನಾಶ ಜಾಧವ್, ಗ್ರಾಮೀಣ ಜಿಲ್ಲಾಧ್ಯಕ್ಷ ಅಶೋಕ ಬಗಲಿ, ಮಾಜಿ ಅಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ, ಮಾಜಿ ಶಾಸಕ ರಾಜಕುಮಾರ ತೆಲ್ಕೂರ, ಅವ್ವಣ್ಣ ಮ್ಯಾಕೇರಿ, ಶರಣಪ್ಪ ತಳವಾರ, ಲಿಂಗರಾಜ ಬಿರಾದಾರ ಶುಕ್ರವಾರ ಮನವಿಪತ್ರ ಸಲ್ಲಿಸಿದರು.
- ಬರ ಘೋಷಣೆಗೆ ಡಿಸಿ ಭೇಟಿಯಾದ ಕೇಸರಿಪಡೆ
- ಮಕ್ಕಳು ಅಸ್ವಸ್ಥಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಿ
ಕಲಬುರಗಿ: ಚಿತ್ತಾಪುರ ತಾಲೂಕಿನ ದಂಡೋತಿ ಗ್ರಾಮದ ಮುರಾರ್ಜಿ ದೇಸಾಯಿ ಅಲ್ಪಸಂಖ್ಯಾತರ ವಸತಿಶಾಲೆಯಲ್ಲಿ ವಿಷಪೂರಿತ ಆಹಾರ ಸೇವಿಸಿ 45 ಮಕ್ಕಳು ಅಸ್ವಸ್ಥಗೊಂಡ ಪ್ರಕರಣದ ಸಮಗ್ರ ತನಿಖೆ ನಡೆಸುವಂತೆ ಬಿಜೆಪಿ ನಿಯೋಗ ಜಿಲ್ಲಾಡಳಿತಕ್ಕೆ ಆಗ್ರಹಿಸಿದೆ.
ಬಿಜೆಪಿ ಜಿಲ್ಲಾಧ್ಯಕ್ಷ, ಶಾಸಕರು ಹಾಗೂ ಮುಖಂಡರನ್ನು ಒಳಗೊಂಡಿದ್ದ ನಿಯೋಗ ದಂಡೋತಿ ಹಾಸ್ಟೆಲ್ಗೆ ಭೇಟಿ ನೀಡಿದಾಗ ಹಲವಾರು ಲೋಪಗಳು ಕಂಡು ಬಂದಿವೆ. ಹೀಗಾಗಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ಅವರಿಗೆ ಮನವಿಪತ್ರ ಸಲ್ಲಿಸಿ ಒತ್ತಾಯಿಸಿತು.
ವಿಧಾನ ಪರಿಷತ್ ಸದಸ್ಯರಾದ ಡಾ.ಬಿ.ಜಿ. ಪಾಟೀಲ್, ಶಶೀಲ್ ನಮೋಶಿ, ಶಾಸಕ ಡಾ.ಅವಿನಾಶ ಜಾಧವ್, ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ, ಗ್ರಾಮಾಂತರ ಜಿಲ್ಲಾಧ್ಯಕ್ಷ ಅಶೋಕ ಬಗಲಿ, ಮಾಜಿ ಅಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ, ಮುಖಂಡರಾದ ಲಿಂಗರಾಜ ಬಿರಾದಾರ, ಅವ್ವಣ್ಣ ಮ್ಯಾಕೇರಿ, ಶರಣಪ್ಪ ತಳವಾರ, ಕುಲಕರ್ಣಿ ಶುಕ್ರವಾರ ಡಿಸಿ ಜತೆ ಸುಮಾರು ಹೊತ್ತು ಚರ್ಚಿಸಿದರು.
ಮಳೆ ಕೊರತೆಯಿಂದಾಗಿ ರೈತರು ಸಂಕಷ್ಟದಲ್ಲಿದ್ದು, ಕುಡಿವ ನೀರಿನ ಸಮಸ್ಯೆ ಶುರುವಾಗಿದೆ. ಹೀಗಾಗಿ ಜಿಲ್ಲೆಯನ್ನು ಬರಪೀಡಿತ ಘೋಷಿಸಿ ಅಗತ್ಯ ಪರಿಹಾರ ಕ್ರಮ ಕೈಗೊಳ್ಳಬೇಕು. ಬೆಳೆ ವಿಮೆಯ ಎರಡನೇ ಕಂತಿನ ಪರಿಹಾರ ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಗುತ್ತಿಗೆದಾರರ ಲೈಸೆನ್ಸ್ ರದ್ದುಪಡಿಸಿ
ದಂಡೋತಿ ವಸತಿ ಶಾಲೆಗೆ ಕಳಪೆ ಆಹಾರ ಸಾಮಗ್ರಿ ಒದಗಿಸಿದ ಗುತ್ತಿಗೆದಾರರ ಲೈಸೆನ್ಸ್ ರದ್ದುಗೊಳಿಸಿ ಕ್ರಿಮಿನಲ್ ಕೇಸ್ ದಾಖಲಿಸಬೇಕು. ಕುಡಿಯುವ ನೀರಿನ ಟ್ಯಾಂಕ್ ಎರಡ್ಮೂರು ವರ್ಷಗಳಿಂದ ಸ್ವಚ್ಛಗೊಳಿಸದ್ದರಿಂದ ಗಲೀಜು ನೀರು ಬಳಸಲಾಗಿದೆ. ಇನ್ಮುಂದೆ ನಿತ್ಯ ಮಕ್ಕಳಿಗೆ ಶುದ್ಧ ಕುಡಿವ ನೀರಿನ ವ್ಯವಸ್ಥೆ ಮಾಡಬೇಕು ಎಂದು ನಿಯೋಗ ಒತ್ತಾಯಿಸಿದೆ. ಒಂದೇ ಕೋಣೆಯಲ್ಲಿ 25 ಮಕ್ಕಳು ಮಲಗುತ್ತಾರೆ. ಕಿಟಕಿ, ಫ್ಯಾನ್ ವ್ಯವಸ್ಥೆ ಇಲ್ಲ. ಮೊಟ್ಟೆ ವಿತರಿಸುವುದಿಲ್ಲ. ಮಗುವಿನ ವೆಚ್ಚಕ್ಕೆ ನೀಡುವ ಹಣ ದುರ್ಬಳಕೆ ಆಗಿರುವ ಸಾಧ್ಯತೆ ಇದೆ. ಹೀಗಾಗಿ ಸೂಕ್ತ ತನಿಖೆ ನಡೆಸಬೇಕು ಎಂದು ಆಗ್ರಹಿಸಲಾಗಿದೆ ಎಂದು ಡಾ.ಬಿ.ಜಿ.ಪಾಟೀಲ್ ಮತ್ತು ರಾಜಕುಮಾರ ತೆಲ್ಕೂರ ತಿಳಿಸಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು ಹಾಗೂ ವಸತಿನಿಲಯಗಳ ವಾರ್ಡನ್, ಮೇಲ್ವಿಚಾರಕರು ಸರಿಯಾಗಿ ಕೆಲಸ ಮಾಡದ್ದರಿಂದಲೇ ಘಟನೆ ನಡೆದಿದೆ. ಅನುದಾನ ದುರುಪಯೋಗ ಮಾಡಿಕೊಂಡು ಬಡ ಮಕ್ಕಳಿಗೆ ಸಮಯಾನುಸಾರ ಉತ್ತಮ ಆಹಾರ ಒದಗಿಸುವಲ್ಲಿ ವಿಫಲವಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿರುತ್ತದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
"
ಕಲಬುರಗಿ, ಯಾದಗಿರಿ ಜಿಲ್ಲೆಗಳಲ್ಲಿ ಮಳೆ ಕೊರತೆಯಾಗಿದ್ದರಿಂದ ಕೂಡಲೇ ಬರಪೀಡಿತ ಘೋಷಿಸಿ ರೈತರಿಗೆ ಪರಿಹಾರ ವಿತರಿಸಬೇಕು. ದನಗಳಿಗೆ ಮೇವಿನ ವ್ಯವಸ್ಥೆ ಮಾಡಬೇಕು. ಬರ ಪರಿಹಾರ ಕಾರ್ಯ ಆರಂಭಿಸಿ ಜನರ ನೆರವಿಗೆ ಸರ್ಕಾರ ಧಾವಿಸಬೇಕು.
— > ಡಾ.ಬಿ.ಜಿ.ಪಾಟೀಲ್ ವಿಧಾನ ಪರಿಷತ್ ಸದಸ್ಯ