ಅಧಿವೇಶನದಲ್ಲಿ ನಾಗೇಂದ್ರ ರಾಜೀನಾಮೆ, ವಂದೇ ಮಾತರಂ ವಾಕ್ಸಮರ 
ರಾಜ್ಯ

ನಾಗೇಂದ್ರ ರಾಜೀನಾಮೆಗೆ ಬಿಜೆಪಿ ಪಟ್ಟು, ವಂದೇ ಮಾತರಂಗೆ ಕಾಂಗ್ರೆಸ್​ ತಿರುಗೇಟು: ಸದನದಲ್ಲಿ ಕಾವೇರಿದ ರಾಜಕೀಯ ಕದನ! Karnataka Assembly

ಪ್ರಮುಖ ಮುಖ್ಯಾಂಶಗಳು

  • ವಾಲ್ಮೀಕಿ ಹಗರಣ ಆರೋಪಿ ನಾಗೇಂದ್ರ ರಾಜೀನಾಮೆಗೆ ಬಿಜೆಪಿ ಪಟ್ಟು
  • ವಂದೇಮಾತರಂ ಗೀತೆ ಕುರಿತು ಬಿ.ಕೆ. ಹರಿಪ್ರಸಾದ್​ ಕಿಡಿನುಡಿ
  • ಕಾಂಗ್ರೆಸ್​ ರಾಷ್ಟ್ರಗೀತೆಗೆ ಗೌರವ ಕೊಡಲ್ಲ ಎಂದ ಅರವಿಂದ್​ ಬೆಲ್ಲದ್​​
  • ಒಬ್ಬನಿಗಾಗಿ, ದಲಿತ ಸಮೂದಾಯದ ಬಲಿ ಕೊಡಬೇಡಿ: ಆರ್​. ಅಶೋಕ್​
ಬೆಂಗಳೂರು: ಸಂಪುಟ ವಿಸ್ತರಣೆ ನಡೆದು, ಅಧಿವೇಶನ (Karnataka Assembly) ಪ್ರಾರಂಭವಾಗುತ್ತಿದ್ದಂತೆ ರಾಜ್ಯ ರಾಜಕಾರಣ ರಂಗೇರಿದ್ದು, ವಿಧಾನಸಭೆ ಮತ್ತು ವಿಧಾನ ಪರಿಷತ್​​ನಲ್ಲಿ ವಾಲ್ಮೀಕಿ ಹಗರಣದ ಆರೋಪ ಎದುರಿಸುತ್ತಿರುವ ಸಚಿವ ನಾಗೇಂದ್ರ ರಾಜೀನಾಮೆ ಹಾಗೂ ಕಾಂಗ್ರೆಸ್ ಪಕ್ಷದ ಸಭೆಯಲ್ಲಿ ವಂದೇಮಾತರಂ ಗೀತೆಯನ್ನು ಮೊಟಕುಗೊಳಿಸುವ ನಿರ್ಧಾರದ ಬಗ್ಗೆ ತೀವ್ರ ವಾಕ್ಸಮರ ನಡೆದಿದೆ.

ಒಬ್ಬನಿಗಾಗಿ, ದಲಿತ ಸಮುದಾಯದ ಬಲಿ ಪಡೆಯಬೇಡಿ!

ವಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, ನಾಗೇಂದ್ರ ಅವರು ದಲಿತರ ಹಣ ತಿಂದಿದ್ದಾರೆ, ಈಗ ದಲಿತ ಅನ್ನುವ ಶೆಲ್ಟರ್ ತೆಗೆದುಕೊಳ್ಳಲು ಹೊರಟಿದ್ದಾರೆ. ಕಾಂಗ್ರೆಸ್‌ಗೆ ಒಬ್ಬ ದಲಿತ ಬೇಕಾ ಅಥವಾ ರಾಜ್ಯದ ಎಲ್ಲಾ ದಲಿತರು ಬೇಕಾ? ಎಂದು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ನಾಗೇಂದ್ರ ರಾಜೀನಾಮೆ ನೀಡುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದು, ಸಚಿವ ಸತೀಶ್ ಜಾರಕಿಹೊಳಿ ಮತ್ತು ಪರಮೇಶ್ವರ್ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿ, ಒಬ್ಬ ಸಚಿವನಿಗಾಗಿ ಈಡೀ ದಲಿತ ಸಮುದಾಯಕ್ಕೆ ಅನ್ಯಾಯ ಮಾಡಬೇಡಿ ಎಂದು ಆಗ್ರಹಿಸಿದ್ದಾರೆ.
ಇದೇ ವೇಳೆ ಮಾತನಾಡಿದ ಪರಿಷತ್​​ ಸದಸ್ಯ ಸಿ.ಟಿ. ರವಿ, ಇದು ಬೇಲಿಯೇ ಎದ್ದು ಹೊಲ ಮೇಯ್ದ ಕತೆ ಎಂದಿದ್ದಾರೆ. ವಾಲ್ಮೀಕಿ ನಿಗಮದ ಹಣವನ್ನು ನಕಲಿ ಖಾತೆಗಳಿಗೆ ವರ್ಗಾಯಿಸಲಾಗಿದ್ದು, ಸಚಿವರ ಮೌಖಿಕ ಸೂಚನೆಯ ಮೇರೆಗೆ ಈ ಹಗರಣ ನಡೆದಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್​ ರಾಷ್ಟ್ರಗೀತೆಗೆ ಗೌರವ ಕೊಡಲ್ಲ!

ಮತ್ತೊಂದೆಡೆ, CWC ಸಭೆಯಲ್ಲಿ ವಂದೇಮಾತರಂ ರಾಷ್ಟ್ರಗೀತೆಯನ್ನು ಎರಡು ಸಾಲುಗಳಿಗೆ ಮೊಟಕುಗೊಳಿಸುವ ನಿರ್ಧಾರದ ವಿರುದ್ಧ ಬಿಜೆಪಿ ನಾಯಕರು ಕಿಡಿಕಾರಿದ್ದಾರೆ. ವಂದೇಮಾತರಂ ಬ್ರಿಟಿಷರ ವಿರುದ್ಧದ ಹೋರಾಟಕ್ಕೆ ಧ್ವನಿಯಾಗಿದ್ದ ಗೀತೆ. ಅಂಥ ರಾಷ್ಟ್ರಗೀತೆಗೆ ಗೌರವ ಕೊಡಲು ಕಾಂಗ್ರೆಸ್‌ಗೆ ಮನಸ್ಸಿಲ್ಲ ಎಂದು ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ವಾಗ್ದಾಳಿ ನಡೆಸಿದ್ದಾರೆ.
ಆದರೆ, ಇದಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ್, ಬಿಜೆಪಿಯವರಿಗೆ ತಾಕತ್ತಿದ್ದರೆ ಸಂಘದಲ್ಲಿ ರಾಷ್ಟ್ರಗೀತೆ ಹಾಡಲಿ. ನಾವು ಹಾಡುವುದೇ ಎರಡು ಚರಣ ಮಾತ್ರ. CWC ಸಭೆಯಲ್ಲಿ ಸರಿಯಾದ ನಿರ್ಣಯವನ್ನೇ ತೆಗೆದುಕೊಂಡಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ಸದನದಲ್ಲಿ ಭ್ರಷ್ಟಾಚಾರದ ಆರೋಪಗಳು ಹಾಗೂ ರಾಷ್ಟ್ರಗೀತೆಯ ವಿವಾದ ಈಗ ರಾಜ್ಯ ರಾಜಕಾರಣದಲ್ಲಿ ದೊಡ್ಡ ಬಿರುಗಾಳಿಯನ್ನು ಎಬ್ಬಿಸಿದೆ ಎಂದು ಹೇಳಬಹುದಾಗಿದೆ.