ಬಿಜೆಪಿ ಬಾವುಟ 
ರಾಜ್ಯ

ರಾಜ್ಯಸಭೆ, ಪರಿಷತ್ ಅಭ್ಯರ್ಥಿ ಆಯ್ಕೆ ಬಿಜೆಪಿ ಸರ್ಕಸ್

ಬೆಂಗಳೂರು: ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆ ಹಾಗೂ ವಿಧಾನ ಪರಿಷತ್ ಸ್ಥಾನಕ್ಕೆ ನಡೆಯುವ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಮಾಡಲು ದೆಹಲಿಯಲ್ಲಿ ಚರ್ಚೆ ನಡೆದಿದ್ದು, ಶೀಘ್ರವೇ ಪಟ್ಟಿ ಅಂತಿಮವಾಗುವ ಸಾಧ್ಯತೆ ಇದೆ.
ಸೋಮವಾರವೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ. ಹೀಗಾಗಿ ತಡಮಾಡದೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ನಿರ್ಧರಿಸಲಾಗಿದ್ದು, ರಾಜ್ಯ ಬಿಜೆಪಿ ಕಳಿಸಿದ ಶಿಾರಸುಗಳನ್ನು ಕೇಂದ್ರ ಬಿಜೆಪಿ ಕೋರ್‌ಕಮಿಟಿ ಚರ್ಚೆಗೆ ಒಳಪಡಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಜೂನ್ 30ಕ್ಕೆ ಪರಿಷತ್‌ನಲ್ಲಿ ಜೆಡಿಎಸ್‌ನ 1 ಸ್ಥಾನ, ಬಿಜೆಪಿಯ 3 ಮತ್ತು ಕಾಂಗ್ರೆಸ್‌ನ 3 ಸ್ಥಾನಗಳು ಖಾಲಿಯಾಗಲಿವೆ. ಜೆಡಿಎಸ್‌ನ ಗೋವಿಂದರಾಜು, ಬಿಜೆಪಿಯ ಎನ್. ನಾಗರಾಜು(ಎಂಟಿಬಿ), ಕೆ. ಪ್ರತಾಪ್ ಸಿಂಹ ನಾಯಕ್, ಸುನೀಲ್ ವಲ್ಯಾಪುರ್, ಕಾಂಗ್ರೆಸ್‌ನ ಬಿ.ಕೆ. ಹರಿಪ್ರಸಾದ್, ನಸೀರ್ ಅಹ್ಮದ್ ಮತ್ತು ತಿಪ್ಪಣ್ಣ ಕಮಕನೂರ ನಿವೃತ್ತಿ ಆಗಲಿದ್ದಾರೆ. ತೆರವಾಗುವ ಏಳು ಸ್ಥಾನಗಳ ಪೈಕಿ 4 ಸ್ಥಾನ ಕಾಂಗ್ರೆಸ್‌ಗೆ, ಎರಡು ಸ್ಥಾನಗಳು ಬಿಜೆಪಿಗೆ ಸಿಗಲಿದೆ. ಕೊನೆಯ 1 ಸ್ಥಾನಕ್ಕೆ ಮತಗಳ ಕೊರತೆ ಕಾರಣ ಎರಡೂ ಪಕ್ಷಗಳಿಗೆ ಸಂಕಷ್ಟ ಎದುರಾಗಿದೆ.
ಬಿಜೆಪಿಗೆ ಸಿಗುವ 2 ಸ್ಥಾನಗಳಿಗೆ ಒಂದು ಮಹಿಳೆ ಮತ್ತು ಒಂದು ಪುರುಷರಿಗೆ ಹಂಚಿಕೆ ಮಾಡಲು ಬಿಜೆಪಿ ನಿರ್ಧಾರ ಮಾಡಿದೆ. ಜುಲೈಗೆ ಬಿಜೆಪಿಯ ಭಾರತಿ ಶೆಟ್ಟಿ ನಿವೃತ್ತಿಯಾಗಲಿದ್ದಾರೆ. ಹಾಗಾಗೆ ಮಹಿಳೆಗೆ ಒಂದು ಸ್ಥಾನ ಕೊಡಲು ಪಕ್ಷ ನಿರ್ಧಾರ ಮಾಡಿದ್ದು, ಈ ಸ್ಥಾನಕ್ಕೆ ನಟಿ ಶೃತಿ, ಮಾಳವಿಕಾ ಅವಿನಾಶ್, ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳಾ ಮತ್ತು ಗೀತಾ ವಿವೇಕಾನಂದ ಹೆಸರು ಕೇಳಿಬಂದಿವೆ.
ಇನ್ನೊಂದು ಸ್ಥಾನಕ್ಕೆ ಬೆಂಗಳೂರು ನಗರದಲ್ಲಿ ಪಕ್ಷದ ಮುಂಚೂಣಿ ನಾಯಕರಾಗಿದ್ದ ಸುಬ್ಬಣ್ಣ, ಕೊಳ್ಳೆಗಾಲದ ಎನ್. ಮಹೇಶ್, ಮೈಸೂರಿನ ರಘು ಕೌಟಿಲ್ಯ, ಲಿಂಗರಾಜು ಪಾಟೀಲ್, ಡಾ.ಎಂ. ನಾಗರಾಜು, ಶರಣ ತಳ್ಳಿಕೇರಿ, ಪ್ರಮೋದ್ ಮಧ್ವರಾಜ್, ಭೋಜರಾಜು ಕರಗಿ ಆಕಾಂಕ್ಷಿತರು. ಇದರಲ್ಲಿ ಪ್ರಮುಖವಾಗಿ ಕುರುಬ ಜಾತಿಗೆ ಅವಕಾಶ ಕೊಡಬೇಕೆಂಬ ಕೂಗು ಹೆಚ್ಚಾಗಿ ಕೇಳಿ ಬಂದಿದ್ದು, ಜಾತಿ, ಪಕ್ಷ ನಿಷ್ಠೆ, ಸಂಘಟನೆ ಲೆಕ್ಕಚಾರಗಳು ಹೈಕಮಾಂಡ್‌ನಲ್ಲಿ ನಡೆದಿದೆ.

ರಾಜ್ಯಸಭೆಗೂ ಪೈಪೋಟಿ

ರಾಜ್ಯಸಭೆಗೆ ಬಿಜೆಪಿಯಿಂದ ಒಬ್ಬರು ಪ್ರವೇಶ ಮಾಡಲು ಅವಕಾಶವಿದೆ. ಈ ಸ್ಥಾನಕ್ಕೆ ನಿರ್ಮಲ್ ಕುಮಾರ್ ಸುರಾನಾ, ಡಿ.ವಿ. ಸದಾನಂದಗೌಡ, ಪ್ರಮೋದ್ ಮಧ್ವರಾಜ್ ಮತ್ತು ವಿ. ಮಹೇಶ್ ಹೆಸರು ಕೇಳಿಬಂದಿವೆ. ಇನ್ನೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಹೆಸರು ಸಹ ಇದ್ದು, ಹೈಕಮಾಂಡ್ ಮಟ್ಟದಲ್ಲಿ ಚರ್ಚೆಗಳು ನಡೆದಿವೆ ಎನ್ನಲಾಗುತ್ತಿದೆ. ದೇವೇಗೌಡರು ರಾಜ್ಯದಿಂದಲೇ ಆಯ್ಕೆ ಆಗುತ್ತಾರಾ ಅಥವಾ ಬೇರೆ ರಾಜ್ಯದಿಂದ ರಾಜ್ಯಸಭೆಗೆ ಕಳುಹಿಸಲಾಗುವುದೇ ಎಂಬುದು ಕುತೂಹಲ ಮೂಡಿಸಿದೆ. ಒಂದು ವೇಳೆ ರಾಜ್ಯಸಭೆಯ ಒಂದು ಸ್ಥಾನ ದೇವೇಗೌಡರಿಗೆ ಎಂದು ತೀರ್ಮಾನವಾದಲ್ಲಿ, ನಿರ್ಮಲ್ ಕುಮಾರ್ ಸುರಾನ ಪರಿಷತ್ ಪ್ರವೇಶಿಸಲಿದ್ದಾರೆ.

ಪರಿಷತ್‌ನಲ್ಲಿ 32 ಮತಗಳ ಅಗತ್ಯ

ಕಾಂಗ್ರೆಸ್ ದಿವಂಗತ ಡಿ. ಸುಧಾಕರ್ ಮತ್ತು ವಿನಯ್ ಕುಲಕರ್ಣಿ ಹೊರತುಪಡಿಸಿದರೆ 222 ಶಾಸಕರ ಬಲದಲ್ಲಿ ಮೂರನ್ನೇ ಒಂದು ಲೆಕ್ಕಚಾರದ ಪ್ರಕಾರ ಪರಿಷತ್ ಪ್ರವೇಶ ಮಾಡುವರಿಗೆ 32 ಮತಗಳು ಅಗತ್ಯ ಇರಲಿವೆ. ಕಾಂಗ್ರೆಸ್‌ನಲ್ಲಿ 132 ಶಾಸಕರ ಬಲದಿಂದ 4 ಸ್ಥಾನವನ್ನು ಸುಲಭವಾಗಿ ಗೆಲ್ಲಬಹುದು. 5ನೇ ಸ್ಥಾನಕ್ಕೂ ಪ್ರಯತ್ನ ನಡೆಸುವ ಸಾಧ್ಯತೆ ಇದೆ. ಇನ್ನೂ ಬಿಜೆಪಿ ಉಚ್ಚಾಟಿತ ಎಸ್.ಟಿ. ಸೋಮಶೇಖರ್, ಶಿವರಾಮ್ ಹೆಬ್ಬಾರ್ ಮತ್ತು ಬಸನಗೌಡ ಪಾಟೀಲ ಯತ್ನಾಳ್ ಹೊರತುಪಡಿಸಿದರೆ 62 ಶಾಸಕರ ಬಲದಿಂದ ಜೆಡಿಎಸ್ ಜತೆಗೂಡಿ ಎರಡು ಸ್ಥಾನ ಗೆಲ್ಲಬಹುದು. 3ನೇ ಸ್ಥಾನಕ್ಕೆ ಪೈಪೋಟಿ ನಡೆಸಬಹುದು. ಶಾಸಕ ಗಾಲಿ ಜನಾರ್ದನ ರೆಡ್ಡಿ ಬೆಂಬಲ ಅತ್ಯಗತ್ಯ. 7ನೇ ಸ್ಥಾನ ಯಾರ ಪಾಲಾಗಲಿದೆ ಎಂಬುದು ನಿಗೂಢವಾಗಿದೆ.

ಅಧಿಸೂಚನೆ, 18ಕ್ಕೆ ಮತದಾನ

ಪರಿಷತ್‌ನಲ್ಲಿ ಜೂನ್ 30ಕ್ಕೆ ಅವಧಿ ಮುಕ್ತಾಯವಾಗುವ ಏಳು ಸದಸ್ಯ ಸ್ಥಾನಗಳಿಗೆ ಜೂನ್ 18ಕ್ಕೆ ಮತದಾನ ನಡೆಯಲಿದೆ. ಚುನಾವಣೆ ನಡೆಸಲು ಜೂನ್ 1ರಂದು ಅಧಿಸೂಚನೆ ಹೊರಡಿಸಲಿದ್ದು, ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಸಲ್ಲಿಕೆಗೆ ಜೂ.8 ಅಂತಿಮ ದಿನವಾಗಿದ್ದು, 9ಕ್ಕೆ ನಾಮಪತ್ರ ಪರಿಶೀಲನೆ ನಡೆಯಲಿದೆ. ನಾಮಪತ್ರ ಹಿಂಪಡೆಯಲು 11 ಕೊನೆಯ ದಿನಾಂಕವಾಗಿದ್ದು, 18ಕ್ಕೆ ಮತದಾನ ನಡೆಯಲಿದೆ. ಬೆಳಗ್ಗೆ 9 ರಿಂದ ಸಂಜೆ 4 ಗಂಟೆ ವರೆಗೂ ಮತದಾನಕ್ಕೆ ಅವಕಾಶ ಇದ್ದು, ಅದೇ ದಿನ ಲಿತಾಂಶ ಪ್ರಕಟವಾಗಲಿದೆ.