ಸಿಂದಗಿ ತಾಲೂಕಿನ ಡಂಬಳ ಕ್ರಾಸ್ ಬಳಿ ಬಿಜೆಪಿ ಮಂಡಲ ವತಿಯಿಂದ ಹಮ್ಮಿಕೊಂಡಿದ್ದ ಹೆದ್ದಾರಿ ತಡೆ ಪ್ರತಿಭಟನೆಯಲ್ಲಿ ಮಾಜಿ ಶಾಸಕ ರಮೇಶ ಭೂಸನೂರ ಮಾತನಾಡಿದರು. ಸಂತೋಷ ಪಾಟೀಲ, ಪ್ರಶಾಂತ ಕದ್ದರಕಿ, ಪ್ರಭುಗೌಡ ಪಾಟೀಲ, ಗುರು ತಳವಾರ ಇತರರಿದ್ದರು.
- ಸಿಂದಗಿ-ಶಹಾಪುರ-ಕೋಡಂಗಲ್ ರಾಜ್ಯ ಹೆದ್ದಾರಿ ನಿರ್ಮಾಣಕ್ಕೆ ಆಗ್ರಹ
- ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬುರಡೆ ಸರ್ಕಾರ
ಬ್ರಹ್ಮದೇವನಮಡು: ರೈತರ ಹೊಲಗಳಿಗೆ ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆ ಹಾಗೂ ಇಂಡಿ ಐಬಿಸಿ ಕಾಲುವೆಯಿಂದ ನೀರು ಹರಿಸಲು ಮತ್ತು ಸಂಪೂರ್ಣ ಹದಗೆಟ್ಟ ಸಿಂದಗಿ-ಕೋಡಂಗಲ್ ರಾಜ್ಯ ಹೆದ್ದಾರಿ ಕಾಮಗಾರಿ ಶೀಘ್ರ ನಿರ್ಮಾಣಕ್ಕೆ ಆಗ್ರಹಿಸಿ ಸಿಂದಗಿ ಬಿಜೆಪಿ ಮಂಡಲ ಹಾಗೂ ರೈತರ ನೇತೃತ್ವದಲ್ಲಿ ಗುರುವಾರ ಗೋಲಗೇರಿ ಮುಖ್ಯ ರಸ್ತೆಯಿಂದ ಮೆರವಣಿಗೆ ಮೂಲಕ ಡಂಬಳ ಕ್ರಾಸ್ ಬಳಿ ಹೆದ್ದಾರಿ ತಡೆ ನಡೆಸಿ ಪ್ರತಿಭಟನೆ ನಡೆಸಿದರು.
ಮಾಜಿ ಶಾಸಕ ರಮೇಶ ಭೂಸನೂರ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬುರಡೆ ಸರ್ಕಾರವಾಗಿದೆ. ತಾಲೂಕಿನ ರೈತರು ಅತಂತ್ರ ಸ್ಥಿತಿಯಲ್ಲಿದ್ದಾರೆ. ಮಳೆ ಬಾರದೆ ಬರಗಾಲ ಎದುರಿಸುವಂತಾಗಿದೆ. ಕೂಡಲೇ ಕಾಲವೆಗೆ ನೀರು ಹರಿಸಬೇಕು. ಶಾಸಕ ಅಶೋಕ ಮನಗೂಳಿ ಕೋಡಂಗಲ್ ಹೆದ್ದಾರಿ ನಿರ್ಮಾಣಕ್ಕೆ ಮಂಜೂರಾತಿ ದೊರಕಿದೆ ಎಂದು ಕಳೆದ ವರ್ಷ ತಿಳಿಸಿದ್ದರು. ಸರ್ಕಾರಕ್ಕೆ ಸಲ್ಲಿಸಿದ ಪ್ರಸ್ತಾಪ ಪತ್ರದೊಂದಿಗೆ ಕಾಂಗ್ರೆಸ್‌ನವರು ಗೋಲಗೇರಿಯಲ್ಲಿ ವಿಜಯೋತ್ಸವ ಸಂಭ್ರಮಿಸಿದ್ದರು. ಆ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದೆ ಎಂದು ಶಾಸಕರ ವಿರುದ್ಧ ವಾಗ್ದಾಳಿ ನಡೆಸಿದರು.
ಬಿಜೆಪಿ ಮಂಡಲ ಅಧ್ಯಕ್ಷ ಸಂತೋಷ ಪಾಟೀಲ ಡಂಬಳ ಮಾತನಾಡಿ, ರಾಜ್ಯ ಸರ್ಕಾರದ ಆಡಳಿತ ವೈಖರಿಯನ್ನು ತೀವ್ರವಾಗಿ ಟೀಕಿಸಿದರು. ರೈತರ ಸಮಸ್ಯೆಗಳ ಬಗ್ಗೆ ಸರ್ಕಾರ ನಿರ್ಲಕ್ಷೃ ವಹಿಸುತ್ತಿದ್ದು, ಅಭಿವೃದ್ಧಿ ಕಾಮಗಾರಿಗಳು ವಿಳಂಬವಾಗುತ್ತಿವೆ ಎಂದು ಆರೋಪಿಸಿದರು.
ಲೋಕೋಪಯೋಗಿ ಇಂಜಿನಿಯರ್ ಪೊಲೀಸ್ ಪಾಟೀಲ ಮಾತನಾಡಿ, ಸಿಂದಗಿ ಕೊಡಂಗಲ್ ರಸ್ತೆ ನಿರ್ವಹಣೆ ಮಾಡಲಾಗದಷ್ಟು ಹದಗೆಟ್ಟು ಹೋಗಿದೆ. ನಾಲ್ಕು ದಿನಗಳಲ್ಲಿ ರಸ್ತೆಗಳಲ್ಲಿರುವ ಗುಂಡಿಗಳನ್ನು ಮುಚ್ಚಿಸುವ ಕಾರ್ಯ ಕೈಗೆತ್ತಿಕೊಳ್ಳಲಾಗುವುದು. ಈ ರಸ್ತೆ ಕಾಮಗಾರಿಗೆ ಸರ್ಕಾರದಿಂದ 24 ಕೋಟಿ ರೂ. ಮಂಜೂರಾಗಿದೆ. ಡಿಪಿಆರ್ ಆಗಬೇಕು ಎಂದು ಹೇಳಿದರು. ತಹಸೀಲ್ದಾರ್ ಕರೆಪ್ಪ ಬೆಳ್ಳಿ ಅವರ ಮೂಲಕ ಸರ್ಕಾರಕ್ಕೆ ಪ್ರತಿಭಟನೆಕಾರರು ಮನವಿ ಸಲ್ಲಿಸಿದರು.
ಪ್ರಭುಗೌಡ ಪಾಟೀಲ, ಶ್ರೀಶೈಲ ಚಳ್ಳಗಿ, ಸೈಪುನಸಾಬ ಬಾಗವಾನ, ಶಿವಣ್ಣಸಾಹು ಮಾರಲಭಾವಿ, ಪ್ರಶಾಂತ ಕದ್ದರಕಿ, ಗುರು ತಳವಾರ, ಅನಸುಬಾಯಿ ಪರಗೊಂಡ, ಬಾಗು ಕೋಟೇಗೋಳ, ಡಾ.ಎನ್.ಪಿ. ನಾಯ್ಕೋಡಿ, ನಾಗಣ್ಣ ಪಡೆಕನೂರ, ಶರಣು ಮನಗೂಳಿ, ಭೀಮು ಡಿಗ್ಗಿ, ಪ್ರಭಯ್ಯ ಹಿರೇಮಠ, ಬಸಲಿಂಗಪ್ಪಗೌಡ ಪಾಟೀಲ ಸೇರಿ ಬಿಜೆಪಿ ಮುಖಂಡರು, ಕಾರ್ಯಕರ್ತರು, ರೈತರು ಭಾಗವಹಿಸಿದ್ದರು.