ಬಿಟ್‌ಕಾಯಿನ್ ಹಗರಣದ ಕಿಂಗ್‌ಪಿನ್ ಶ್ರೀಕಿ ನಂಟು: ಶಾಸಕ ಎನ್.ಎ. ಹ್ಯಾರಿಸ್ ಪುತ್ರರ ನಿವಾಸದ ಮೇಲೆ ಇಡಿ ದಾಳಿ! Bitcoin scam 
ರಾಜ್ಯ

ಬಿಟ್‌ಕಾಯಿನ್ ಹಗರಣದ ಕಿಂಗ್‌ಪಿನ್ ಶ್ರೀಕಿ ನಂಟು: ಶಾಸಕ ಎನ್.ಎ. ಹ್ಯಾರಿಸ್ ಪುತ್ರರ ನಿವಾಸದ ಮೇಲೆ ಇಡಿ ದಾಳಿ! Bitcoin scam

ಪ್ರಮುಖ ಮುಖ್ಯಾಂಶಗಳು

  • ಬಿಟ್‌ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ಶಾಸಕ ಎನ್.ಎ. ಹ್ಯಾರಿಸ್ ಪುತ್ರರ ನಿವಾಸದ ಮೇಲೆ ಇಡಿ ದಾಳಿ
  • ಹಗರಣದ ಕಿಂಗ್‌ಪಿನ್ ಶ್ರೀಕಿಯೊಂದಿಗೆ ಆರೋಪಿಗಳು ಹೊಂದಿರುವ ಹಣಕಾಸು ವ್ಯವಹಾರ ಹಾಗೂ ಡಿಜಿಟಲ್ ಪುರಾವೆಗಳ ಸಂಗ್ರಹ ನಡೆಯುತ್ತಿದೆ
  • 2017ರ ಅಂತಾರಾಷ್ಟ್ರೀಯ ಹ್ಯಾಕಿಂಗ್ ಮೂಲಕ ಕಳವು ಮಾಡಲಾದ ಬಿಟ್‌ಕಾಯಿನ್‌ಗಳ ಹಣದ ಹರಿವನ್ನು ಪತ್ತೆಹಚ್ಚಲು ಇಡಿ ಮುಂದಾಗಿದೆ
  • ಈ ದಾಳಿಯನ್ನು ಕಾಂಗ್ರೆಸ್ ರಾಜಕೀಯ ಪ್ರೇರಿತ ಎಂದು ಟೀಕಿಸಿದ್ದು, ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ
ಬೆಂಗಳೂರು: ಇಂದು (ಏಪ್ರಿಲ್​ 20) ಜಾರಿ ನಿರ್ದೇಶನಾಲಯ (ED) ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಶಾಂತಿನಗರ ಶಾಸಕ ಎನ್.ಎ. ಹ್ಯಾರಿಸ್ ಅವರ ಪುತ್ರರಾದ ಮೊಹಮ್ಮದ್ ನಲಪಾಡ್ ಮತ್ತು ಉಮರ್ ಫಾರೂಕ್ ನಲಪಾಡ್ ( Bitcoin scam ) ಸೇರಿದಂತೆ ಪ್ರಭಾವಿಗಳಿಗೆ ಬಿಸಿ ಮುಟ್ಟಿಸಿದೆ. 
ಬಿಟ್‌ಕಾಯಿನ್ ಹಗರಣದ ಕಿಂಗ್‌ಪಿನ್ ಶ್ರೀಕಿಯೊಂದಿಗೆ ಸಂಪರ್ಕ ಹೊಂದಿರುವ ಆರೋಪದ ಮೇಲೆ, ಮಾಜಿ ಕೇಂದ್ರ ಸಚಿವರ ಮೊಮ್ಮಗ ಹಾಗೂ ಹ್ಯಾರಿಸ್ ಪುತ್ರರ ನಿವಾಸಗಳು ಸೇರಿದಂತೆ ಒಟ್ಟು 12ಕ್ಕೂ ಹೆಚ್ಚು ಸ್ಥಳಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ. ಕೋಟ್ಯಂತರ ರೂಪಾಯಿ ಮೌಲ್ಯದ ಕ್ರಿಪ್ಟೋಕರೆನ್ಸಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಜಿಟಲ್ ಪುರಾವೆಗಳನ್ನು ಕಲೆಹಾಕುತ್ತಿರುವ ಇಡಿ ಅಧಿಕಾರಿಗಳ ಈ ದಿಢೀರ್ ಕ್ರಮ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ.
2017ರಲ್ಲಿ ನಡೆದ ಅಂತಾರಾಷ್ಟ್ರೀಯ ವೆಬ್‌ಸೈಟ್ ಹ್ಯಾಕಿಂಗ್ ಮತ್ತು ಬಿಟ್‌ಕಾಯಿನ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಶೋಧ ಕಾರ್ಯ ನಡೆದಿದೆ. ದುಬೈ ಮೂಲದ ಕ್ರಿಪ್ಟೋ ಎಕ್ಸ್ಚೇಂಜ್‌ನಿಂದ ಹ್ಯಾಕ್ ಮಾಡಲಾದ ಬಿಟ್‌ಕಾಯಿನ್‌ಗಳು ನಲಪಾಡ್ ಸಹೋದರರಿಗೆ ತಲುಪಿವೆ ಎಂಬ ಸಂಶಯದ ಮೇಲೆ ತನಿಖೆ ನಡೆಯುತ್ತಿದೆ. ಇದೇ ಪ್ರಕರಣದಲ್ಲಿ ಮಾಜಿ ಕೇಂದ್ರ ಸಚಿವ ಕೆ. ರೆಹಮಾನ್ ಖಾನ್ ಅವರ ಮೊಮ್ಮಗ ಮೊಹಮ್ಮದ್ ಹಕೀಬ್ ಖಾನ್ ಅವರ ನಿವಾಸದ ಮೇಲೂ ದಾಳಿ ಮಾಡಲಾಗಿದ್ದು, ಶ್ರೀಕಿ ಮತ್ತು ಹಕೀಬ್ ನಡುವಿನ ಸಂಶಯಾಸ್ಪದ ಹಣಕಾಸು ವಹಿವಾಟುಗಳ ಬಗ್ಗೆ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

ಹಳೆಯ ಪ್ರಕರಣಕ್ಕೆ ಮರುಜೀವ

ಈ ಹಿಂದೆ ಕರ್ನಾಟಕದ ಸಿಸಿಬಿ ಮತ್ತು ಸಿಐಡಿ ವಿಭಾಗಗಳು ಈ ಪ್ರಕರಣದ ತನಿಖೆ ನಡೆಸಿದ್ದವು. ಈಗ ಜಾರಿ ನಿರ್ದೇಶನಾಲಯವು ಡಿಜಿಟಲ್ ಪುರಾವೆಗಳನ್ನು ಆಧರಿಸಿ ಹಣದ ಹರಿವನ್ನು ಪತ್ತೆ ಹಚ್ಚುತ್ತಿದೆ. ಹ್ಯಾಕಿಂಗ್ ಮೂಲಕ ಗಳಿಸಿದ ಅಕ್ರಮ ಹಣವು ಯಾರಿಗೆಲ್ಲಾ ಸಂದಾಯವಾಗಿದೆ ಎಂಬ ಗುಟ್ಟನ್ನು ರಟ್ಟು ಮಾಡುವುದು ತನಿಖಾ ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ.
ಈ ದಾಳಿಯನ್ನು ಆಡಳಿತಾರೂಢ ಕಾಂಗ್ರೆಸ್ ಪಕ್ಷವು ತೀವ್ರವಾಗಿ ಖಂಡಿಸಿದೆ. ಸಚಿವ ಪ್ರಿಯಾಂಕ್ ಖರ್ಗೆ ಅವರು ಬಿಜೆಪಿಯು ಇಡಿ, ಸಿಬಿಐ ಮತ್ತು ಐಟಿ ಸಂಸ್ಥೆಗಳನ್ನು ರಾಜಕೀಯ ಅಸ್ತ್ರಗಳಾಗಿ ಬಳಸಿಕೊಳ್ಳುತ್ತಿದೆ ಎಂದು ಟೀಕಿಸಿದ್ದಾರೆ. ಇಡಿ ಸಂಸ್ಥೆಯ ಶಿಕ್ಷೆಯ ಪ್ರಮಾಣ ಕೇವಲ ಶೇ. 2 ರಷ್ಟಿದ್ದು, ಇದು ಕೇವಲ ವಿರೋಧ ಪಕ್ಷಗಳನ್ನು ಹತ್ತಿಕ್ಕುವ ಪ್ರಯತ್ನ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.