ಮೌಲ್ಯಾಧಾರಿತ ರಾಜನೀತಿಯಲ್ಲಿ ಸಾಗಿ, ನಾಯಕತ್ವದ ಸಾಮರ್ಥ್ಯವನ್ನು ಸಾಬೀತು ಪಡಿಸಿದವರು ರಾಮಕೃಷ್ಣ ಹೆಗಡೆ. ಜನರೊಂದಿಗಿನ ಒಡನಾಟದಿಂದ ಸರಳ ರಾಜಕಾರಣಿ ಎನಿಸಿಕೊಂಡಿದ್ದ ಅವರು ಕಿರಿಯ ನಾಯಕರನ್ನು ವಿಶಾಲ ಮನೋಭಾವದಿಂದ ಬೆಳೆಸಿದರು. ಹೆಗಡೆ ಗರಡಿಯಲ್ಲಿ ಬೆಳೆದವರ ಪೈಕಿ ಎಷ್ಟೋ ಜನರು ಆಯಕಟ್ಟಿನ ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿ, ಸೈ ಎನಿಸಿಕೊಂಡಿದ್ದಾರೆ. ರಾಜ್ಯದ ಆಡಳಿತ ರಂಗದಲ್ಲಿ ತಮ್ಮದೇ ವಿಶಿಷ್ಟ ಗುರುತು ಮೂಡಿಸಿದ ಹೆಗಡೆ, ವಿವಿಧ ಖಾತೆಗಳ ಸಚಿವರಾಗಿ ಗಮನಾರ್ಹ ಸಾಧನೆ ಮಾಡಿದವರು. ರಾಜ್ಯದ ಮುಖ್ಯಮಂತ್ರಿಯಾಗಿ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದರು. ಕೇಂದ್ರ ವಾಣಿಜ್ಯ ಸಚಿವರಾಗಿ, ರಾಷ್ಟ್ರಮಟ್ಟದಲ್ಲೂ ಕೊಡುಗೆ ನೀಡಿದರು. ಯೋಜನಾ ಆಯೋಗದ ಉಪಾಧ್ಯಕ್ಷರೂ ಆಗಿದ್ದರು. ಮುಖ್ಯಮಂತ್ರಿಯಾಗಿದ್ದಾಗ ಆರೋಪಗಳು ಬಂದಾಗ ಅಧಿಕಾರಕ್ಕೆ ಅಂಟಿ ಕೂರದೆ ರಾಜೀನಾಮೆ ನೀಡಿದ ವಿಶಿಷ್ಟ ವ್ಯಕ್ತಿ. ಹೆಗಡೆಯವರ ಜನ್ಮ ಶತಮಾನೋತ್ಸವದ ನಿಮಿತ್ತ ಅವರ ಒಡನಾಡಿಗಳು ಹೆಗಡೆಯವರ ಜತೆಗಿನ ನೆನಪುಗಳನ್ನು ಮೆಲುಕು ಹಾಕಿದ್ದಾರೆ.
ರಾಮಕೃಷ್ಣ ಹೆಗಡೆ ಅಂದ್ರೆನೇ ಹಾಗೆ. ರಾಜಕೀಯ ಮೌಲ್ಯ, ಮುತ್ಸದ್ದಿತನ, ನೈತಿಕತೆ, ಪ್ರಾಮಾಣಿಕತೆ, ಜನಸೇವೆ ಇವುಗಳ ಸಂಗಮ! ಈ ಮೌಲ್ಯಾಧಾರಿತ ರಾಜಕಾರಣಿ ತಾವೊಬ್ಬರೇ ರಾಜಕೀಯವಾಗಿ ಬೆಳೆಯಲಿಲ್ಲ. ತಮ್ಮೊಂದಿಗೆ ಎರಡನೇ ಹಂತದ ನಾಯಕರ ಪಡೆಯನ್ನು ಕಟ್ಟಿದರು. ನನ್ನಂಥ ಅನೇಕರನ್ನು ರಾಜಕೀಯವಾಗಿ ವಿವಿಧ ಹುದ್ದೆಗಳಲ್ಲಿ ತಂದು ತರಬೇತಿ ನೀಡಿ ರಾಜಕೀಯ ಮೌಲ್ಯಗಳನ್ನು ಪರಿಚಯಿಸಿದರು.
1983ರಲ್ಲಿ ಕ್ರಾಂತಿರಂಗ ತೊರೆದು ಜನತಾ ಪಕ್ಷ ಸೇರಿದೆ. ಆಗ ನನ್ನನ್ನು ಪಕ್ಷದ ಪ್ರಧಾನ ಕಾರ್ಯದರ್ಶಿ ಮಾಡಿದರು. 1985ರಲ್ಲಿ ಯಲಬುರ್ಗಾ ಕ್ಷೇತ್ರಕ್ಕೆ ಜನತಾಪಕ್ಷದಿಂದ ನನಗೆ ಟಿಕೆಟ್ ನೀಡಿದರು. ಅವರ ಕೃಪೆಯಿಂದ ಮೊದಲ ಬಾರಿ ವಿಧಾನಸಭೆ ಪ್ರವೇಶಿಸಿದೆ. ತೀರಾ ಹಿಂದುಳಿದ ಯಲಬುರ್ಗಾ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಕೈಗೊಂಡೆ. ಹೆಗಡೆ ಸಿಎಂ ಆಗಿದ್ದರಿಂದ ಹೆಚ್ಚಿನ ನೆರವೂ ಸಿಕ್ಕಿತು. ಅದ್ಹೇಗೆ ನನ್ನ ಕೆಲಸ ಗುರುತಿಸಿದರೋ ಗೊತ್ತಿಲ್ಲ. ಕರ್ನಾಟಕದ ಎಲ್ಲ ಶಾಸಕರಿಗೆ ಪತ್ರ ಬರೆದು ಬಸವರಾಜ ರಾಯರೆಡ್ಡಿ ರೀತಿ ಕೆಲಸ ಮಾಡಲು ಸೂಚಿಸಿದರು. 80ರ ದಶಕದಲ್ಲೇ ನನ್ನನ್ನು ಮಾದರಿ ಶಾಸಕ ಎಂದು ರಾಜ್ಯಕ್ಕೆ ಪರಿಚಯಿಸಿದ್ದರು. ಯುವಕರನ್ನು ಗುರುತಿಸಿ ಹುರಿದುಂಬಿಸುವ ದೊಡ್ಡ ಗುಣ ಅವರಿಗಿತ್ತು. 1989ರಲ್ಲಿ ಆಯ್ಕೆಯಾದಾಗ ಚೀಫ್ ವಿಪ್ ಮಾಡಿದರು. 1994ರಲ್ಲಿ ಆರಿಸಿ ಬಂದಾಗ ದೇವೇಗೌಡರ ಸಂಪುಟದಲ್ಲಿ ಮಂತ್ರಿಯಾಗಲು ಕೂಡ ಅವರೇ ಕಾರಣ. ಭೌತಿಕವಾಗಿ ಹೆಗಡೆ ಅವರೀಗ ನಮ್ಮ ಜತೆಗಿರದೆ ಹೋದರೂ ಅವರು ಹೇಳಿಕೊಟ್ಟ ಮೌಲ್ಯ- ನೀತಿಗಳು ನನ್ನಲ್ಲಿನ್ನೂ ಜಾಗೃತವಾಗಿವೆ. ರಾಜಕಾರಣವನ್ನು ಜನಸೇವೆ ಎಂದು ಭಾವಿಸಿದ್ದ ಅವರು ಮಂತ್ರಿ -ಮುಖ್ಯಮಂತ್ರಿಯಾಗಿ ವೇತನ ಪಡೆಯುತ್ತಿರಲಿಲ್ಲ. ಅವರಂತೆ ನಾನೂ ಶಾಸಕನಾಗಿ, ಸಚಿವನಾಗಿ ಸರ್ಕಾರದಿಂದ ವೇತನ ಪಡೆಯುತ್ತಿಲ್ಲ.
ಧರಣಿ ಕುಳಿತಿದ್ದೆ: ಬಾಟ್ಲಿಂಗ್ ಹಗರಣದಲ್ಲಿ ಆರೋಪ ಕೇಳಿ ಬಂದಾಗ ಹೆಗಡೆ ರಾಜೀನಾಮೆ ನೀಡಲು ಮುಂದಾದಾಗ ಹಾಗೆ ಮಾಡದಂತೆ ನಾನು ಸೇರಿ ಹಲವರು ಅವರ ಎದುರು ಧರಣಿ ಕುಳಿತೆವು. ಆಗವರು ‘ಏಯ್ ರಾಯರೆಡ್ಡಿ , ಏಳು ಮೇಲೇಳು’ ಎಂದು ನನ್ನನ್ನು ಎಬ್ಬಿಸಿ ಕುರ್ಚಿ ಮೇಲೆ ಕೂರಿಸಿ ಹಾಗೆಲ್ಲ ಮಾಡಬಾರದು ಎಂದಿದ್ದರು. ನಮ್ಮನ್ನು ಸಮಾಧಾನಪಡಿಸಿ ರಾಜೀನಾಮೆ ನೀಡಿ ನೈತಿಕತೆ ಮೆರೆದಿದ್ದರು. ಬೆಂಗಳೂರಿನ ಅರಮನೆ ಮೈದಾನದಲ್ಲಿ ಹೆಗಡೆ ಅವರ 75ನೇ ಜನ್ಮದಿನೋತ್ಸವವನ್ನು ಅದ್ದೂರಿಯಾಗಿ ಮಾಡಿದ್ದೆವು. ಆ ಕಾರ್ಯಕ್ರಮಕ್ಕೆ ಜೆ.ಎಚ್.ಪಟೇಲ್ ಅಧ್ಯಕ್ಷರಾಗಿದ್ದರು. ನಾನು ಪ್ರಧಾನ ಕಾರ್ಯದರ್ಶಿ ಆಗಿದ್ದೆ.
-ಬಸವರಾಜ ರಾಯರೆಡ್ಡಿ ಉನ್ನತ ಶಿಕ್ಷಣ ಸಚಿವರು
ಆ ಟಾಲ್ ಪರ್ಸನಾಲಿಟಿಯ ಬಗ್ಗೆ ಏನೆಂದು ಹೇಳಲಿ? ಅವರ ಮುಂದೆ ನಾನು ಚಿಕ್ಕವನು. ನನಗೆ ಮಾತ್ರವಲ್ಲ ನನ್ನಂಥ ಎರಡನೇ ಪೀಳಿಗೆಯ ಹಲವರಿಗೆ ಅವರೇ ರಾಜಕೀಯ ಗುರು! ಅವರು ತೋರಿದ ದಾರಿಯಲ್ಲಿ ಇಲ್ಲಿಯವರೆಗೆ ನಡೆದು ಬಂದಿದ್ದೇನೆ. ತಂದೆ-ತಾಯಿ ಆಶೀರ್ವಾದ ಹೇಗಿತ್ತೋ ಹೆಗಡೆ ಅವರ ಆಶೀರ್ವಾದವೂ ಹಾಗಿತ್ತು. ಹಮ್ಮು-ಬಿಮ್ಮು ಇಲ್ಲದ ಆ ಸ್ನೇಹಜೀವಿ ಅಧಿಕಾರ ಇದ್ದರೂ ಅಂತಸ್ತು ಗಳಿಸಲಿಲ್ಲ. ಅವರು ಸಂಪಾದಿಸಿದ್ದೊಂದೇ ಅದು ಜನಮನ್ನಣೆ! ತಾವಿದ್ದಷ್ಟೂ ಕಾಲ ಕುಟುಂಬ ರಾಜಕಾರಣದಿಂದ ದೂರ ಉಳಿದರು. ಭ್ರಷ್ಟಾಚಾರವನ್ನು ಹತ್ತಿರವೂ ಬಿಟ್ಟುಕೊಳ್ಳಲಿಲ್ಲ. ತಮ್ಮ ಮೇಲೆ ಆರೋಪ ಬಂದಾಗ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಟ್ಟು ಪುನರಾಯ್ಕೆ ಆದ ಮುತ್ಸದ್ದಿತನ ಅವರದು.
ನಾನು ಅವರ ಕಿಚನ್ ಕ್ಯಾಬಿನೆಟ್ ಮನುಷ್ಯ. ಅವರ ಜತೆ ಡಿನ್ನರ್ಗೆ ನಾನು ಸೇರಿದಂತೆ ಆರೇಳು ಜನ ಸದಾ ಇರುತ್ತಿದ್ದೆವು. ಅಷ್ಟೊಂದು ಸಲುಗೆ, ಕಾಳಜಿ, ವಿಶ್ವಾಸ, ಗೌರವ, ಭಯ ಎಲ್ಲವೂ ನಮಗಿತ್ತು. 1983ರಲ್ಲಿ ಶಾಸಕನಾಗಿ ಆಯ್ಕೆಯಾದಾಗ ಸಚಿವನಾಗುವ ಅವಕಾಶ ಸಿಗಲಿಲ್ಲ. ಆದರೂ ನನ್ನ ಮೇಲಿನ ಪ್ರೀತಿಯಿಂದ ಸಣ್ಣ ಕೈಗಾರಿಕೆ ಕಾಪೋರೇಷನ್ಗೆ ಅಧ್ಯಕ್ಷನನ್ನಾಗಿ ಮಾಡಿದರು.
ಹೀಗೆ, ಒಮ್ಮೆ ಹೆಗಡೆ ಅವರೊಟ್ಟಿಗೆ ನಾನು ಸಿದ್ದಾಪುರಕ್ಕೆ ಹೋಗಿದ್ದೆ. ಆಗವರು ಮುಖ್ಯಮಂತ್ರಿ ಆಗಿದ್ದರು. ಸಿದ್ದಾಪುರದಿಂದ ಸಂಜೆ ಮನೆ ಬಿಟ್ಟೆವು. ಅವರು ಕಾರಿನಲ್ಲಿ ಹುಬ್ಬಳ್ಳಿಗೆ ಹೋಗಿ ಅಲ್ಲಿಂದ ರೈಲಿನಲ್ಲಿ ಬೆಂಗಳೂರಿಗೆ ಪ್ರಯಾಣಿಸುವವರಿದ್ದರು. ನಾನು ಮಾರ್ಗ ಮಧ್ಯೆ ಶಿರಸಿ-ಯಲ್ಲಾಪುರ ರಸ್ತೆಯ ಪ್ರವಾಸಿ ಮಂದಿರದ ಬಳಿ ಇಳಿದುಕೊಂಡೆ. ಆಗ ಹೆಗಡೆಯವರು ‘ದೇಶಪಾಂಡೆ ಕಮ್ ಅರ್ಲಿ’ ಎಂದರು. ನಾನು ಕೇಳಿದೆ, ‘ಯಾಕೆ ಬೇಗ ಬರಬೇಕು?’ ಎಂದು. ಆಗಲೂ ಅವರು ಹೇಳಿದ್ದು, ‘ಕಮ್ ಅರ್ಲಿ’ ಎಂದಷ್ಟೇ. ಆ ದಿನ 1985ರ ಮಾರ್ಚ್ 14. ಹೆಗಡೆಯವರು ಸಂಪುಟ ವಿಸ್ತರಣೆ ಮಾಡಿದ್ದರು. ನನ್ನನ್ನು ಬಿಟ್ಟು ಉಳಿದವರೆಲ್ಲರೂ ಪ್ರಮಾಣವಚನ ಸ್ವೀಕರಿಸಿದ್ದರು. ಏಕೆಂದರೆ ನಾನು ಬೆಂಗಳೂರಿಗೆ ತಲುಪಿರಲಿಲ್ಲ. ಸಮಾರಂಭ ಮುಗಿಸಿ ಅವರು ಹೊರಬರುವುದಕ್ಕೂ, ನಾನು ಅಲ್ಲಿಗೆ ಹೋಗುವುದಕ್ಕೂ ಸರಿ ಹೋಯಿತು.
ಆಗ ಹೆಗಡೆ ಅವರು ಹೇಳಿದ್ದು ಮಾತು. ‘ವಾಟ್ ದೇಶಪಾಂಡೆ? ವಾಟ್ ಯು ಡಿಡ್? ಡಿಡಂಟ್ ಐ ಟೆಲ್ ಯು’ ಅಂದ್ರು. ನನಗೆ ಉತ್ತರಿಸುವ ಧೈರ್ಯ ಇರಲಿಲ್ಲ. ತಲೆಬಾಗಿ ನಿಂತೆ. ಕಮ್ ಅರ್ಲಿ ಅಂದಿದ್ದು ಏಕೆಂದು ಆಗ ಅರ್ಥವಾಗಿತ್ತು. ಮರುದಿನ ಮಾರ್ಚ್ 15ರಂದು ನನ್ನ ಜನ್ಮದಿನ. ಅಂದು ನನಗೊಂದು ಅಚ್ಚರಿ ಕಾದಿತ್ತು. ನನ್ನ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ರಾಮಕೃಷ್ಣ ಹೆಗಡೆ ಅವರು ಆಗಿನ ರಾಜ್ಯಪಾಲ ಅಶೋಕ್ನಾಥ್ ಬ್ಯಾನರ್ಜಿ ಅವರಿಗೆ ಸಂದೇಶ ಕಳುಹಿಸಿದ್ದರು. ಒಬ್ಬ ರಾಜಕಾರಣಿಗೆ ಅವನ ಜನ್ಮದಿನದಂದೇ ಸಚಿವರಾಗುವ ಭಾಗ್ಯ ಸಿಗುವುದು ವಿರಳಾತಿ ವಿರಳ. ಅಂತಹ ಸೌಭಾಗ್ಯವನ್ನು ಹೆಗಡೆ ಅವರು ಕರುಣಿಸಿದ್ದರು. ಅವರನ್ನು ತಂದೆ ಸಮಾನ ಅನ್ನದೇ ಏನೆನ್ನಲು ಸಾಧ್ಯ?
-ಆರ್.ವಿ.ದೇಶಪಾಂಡೆ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರು
ಅದು 1985ನೇ ಇಸ್ವಿ. ಆಗಿನ ಒಂದು ಘಟನೆ ಇಂದಿಗೂ ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಆಗ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದರು. ನಾನು ಮತ್ತು ಮಾಜಿ ಸಚಿವ ಗಂಗಾಧರಗೌಡರು ಬೆಳಗ್ಗೆ ವಾಕಿಂಗ್ನಲ್ಲಿದ್ದೆವು. ಆ ವೇಳೆ ನನ್ನ ಟಿ-ಶರ್ಟ್ ನೋಡಿ, ‘ಎಲ್ಲಿ ತಂದಿರಿ?’ ಎಂದು ಕೇಳಿದರು. ‘ಬ್ರಿಗೇಡ್ ರಸ್ತೆಯಲ್ಲಿ ಖರೀದಿಸಿದ್ದೇನೆ’ ಎಂದಾಗ, ‘ನನಗೂ ಬೇಕು. ಬಾ ಅಲ್ಲಿಗೆ ಹೋಗಿ ತರೋಣ’ ಎಂದಾಗ ಇಬ್ಬರೂ ಹೊರಟೆವು. ಅದೇ ದಿನ ಬೆಳಗ್ಗೆ 10.30ಕ್ಕೆ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರನ್ನು ಭೇಟಿ ಮಾಡುವ ಸಮಯ ನಿಗದಿಯಾಗಿತ್ತು. ಆದರೆ ಖರೀದಿಯಲ್ಲಿ ತಡವಾದ ಕಾರಣ ಮನೆಗೆ ಹೋಗಿ ಬಟ್ಟೆ ಬದಲಾಯಿಸಲು ಸಾಧ್ಯವಾಗದೆ ಅದೇ ಟಿ-ಶರ್ಟ್ ಧರಿಸಿ ವಿಧಾನಸೌಧಕ್ಕೆ ತೆರಳಿದೆವು.
ಮುಖ್ಯಮಂತ್ರಿಗಳ ಕಚೇರಿಗೆ ಪ್ರವೇಶಿಸಿದ ತಕ್ಷಣ ನಮ್ಮಿಬ್ಬರತ್ತ ನೋಡಿದ ಹೆಗಡೆ, ‘ಏನು ಮಹಾಪ್ರಭುಗಳೇ, ನೀವು ಯಾವ ದೇಶದವರು? ಯಾಕಾಗಿ ಇಲ್ಲಿಗೆ ಬಂದಿದ್ದೀರಿ?’ ಎಂದು ಹಾಸ್ಯಮಿಶ್ರಿತವಾಗಿ ಪ್ರಶ್ನಿಸಿದರು. ಬಳಿಕ ಗಂಭೀರವಾಗಿ, ‘ನಿಮಗೆ ನಾಚಿಕೆ ಆಗುವುದಿಲ್ಲವೇ? ನೀವು ಶಾಸಕರು. ವಿಧಾನಸೌಧಕ್ಕೆ ಬರುವಾಗ ನೀಟಾಗಿ, ಗೌರವಯುತವಾಗಿ ಬರಬೇಕು. ಎಲ್ಲಿ ಹೇಗಾದರೂ ಇರಿ, ಆದರೆ ಈ ಸದನದ ಘನತೆಗೆ ತಕ್ಕ ಉಡುಗೆ ಇರಬೇಕು’ ಎಂದು ಕಿವಿಮಾತು ಹೇಳಿದರು. ತಕ್ಷಣವೇ ತಮ್ಮ ಆಪ್ತ ಸಹಾಯಕ ರಾಮಪ್ಪ ಅವರನ್ನು ಕರೆಸಿ, ಒಬ್ಬ ಹುಡುಗನ ಜೊತೆಗೆ ನಮ್ಮನ್ನು ಅವೆನ್ಯೂ ರಸ್ತೆಗೆ ಕಳುಹಿಸಿ ಆರು ಜೋಡಿ ಜುಬ್ಬಾ-ಪೈಜಾಮಗಳನ್ನು ಕೊಡಿಸಿದರು. ಅವುಗಳಲ್ಲಿ ಐದನ್ನು ಬಳಸಿದ್ದೇನೆ. ಇನ್ನೊಂದು ಜೋಡಿಯನ್ನು ರಾಮಕೃಷ್ಣ ಹೆಗಡೆ ಅವರ ಅಮೂಲ್ಯ ನೆನಪಾಗಿ ಇಂದಿಗೂ ಜೋಪಾನವಾಗಿ ಉಳಿಸಿಕೊಂಡಿದ್ದೇನೆ. ಅಂದು ಅವರು ಹೇಳಿದ ಡ್ರೆಸ್ ಕೋಡ್ ಅನ್ನು ಇಂದಿಗೂ ತಪ್ಪದೆ ಪಾಲಿಸುತ್ತಿದ್ದೇನೆ.
-ಬಸವರಾಜ ಹೊರಟ್ಟಿ ವಿಧಾನ ಪರಿಷತ್ನ ನಿಕಟಪೂರ್ವ ಸಭಾಪತಿ
ರಾಮಕೃಷ್ಣ ಹೆಗಡೆ ಅವರು 1985ರಲ್ಲಿ ವಿಧಾನಸಭೆಯನ್ನು ವಿಸರ್ಜಿಸಿ ಚುನಾವಣೆಗೆ ತೆರಳಿದ ಸಂದರ್ಭ. ಉತ್ತರ ಕರ್ನಾಟಕದ ಪ್ರವಾಸ ಮುಗಿಸಿ ದಕ್ಷಿಣ ಕನ್ನಡಕ್ಕೆ ಬಂದಿದ್ದ ಅವರು ಕುಂದಾಪುರದಲ್ಲಿ ಪ್ರಚಾರದ ಬಳಿಕ ತಂಗುವವರಿದ್ದರು. ಅದಕ್ಕೂ ಮುನ್ನ ತುರ್ತಾಗಿ ಕುಂದಾಪುರಕ್ಕೆ ಬರಬೇಕೆಂದು ನಮಗೆ ಸೂಚನೆ ಬಂದಿತ್ತು. ಆಗ ಜನತಾ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದ ನಾನು ಸಂಜೆ 7 ಗಂಟೆಗೆ ಅಲ್ಲಿಗೆ ತಲುಪಿದೆ. ರಾತ್ರಿ 11 ಗಂಟೆಗೆ ಪ್ರಚಾರ ಮುಗಿಸಿ ಬಂದ ಹೆಗಡೆ, ‘ಎಲ್ಲೆಡೆ ಉತ್ತಮ ಪ್ರಚಾರವಾಗಿದೆ. ಆದರೆ ವಿಧಾನಸಭೆಯಲ್ಲಿ ಬಹುಮತಕ್ಕೆ ಇನ್ನೂ ಶೇಕಡ 2ರಷ್ಟು ಮತಗಳನ್ನು ಸೆಳೆಯಬೇಕು. ಅದಕ್ಕಾಗಿ ಪ್ರಣಾಳಿಕೆಯಲ್ಲಿ ಹೊಸ ಕಾರ್ಯಕ್ರಮ ಘೊಷಿಸಬೇಕು’ ಎಂದು ಹೇಳಿದರು. ಮಧ್ಯರಾತ್ರಿಯವರೆಗೂ ನಡೆದ ಚರ್ಚೆಯಲ್ಲಿ ಯಾರಿಗೂ ಏನೂ ಸರಿಯಾಗಿ ಹೊಳೆಯಲಿಲ್ಲ. ಬಳಿಕ ಹೆಗಡೆ ಅವರು ಬಡವರಿಗೆ ಗ್ರೀನ್ ರೇಷನ್ ಕಾರ್ಡ್, 2 ರೂಪಾಯಿಗೆ ಅಕ್ಕಿ, 25 ರೂಪಾಯಿಗೆ ಪುರುಷರಿಗೆ ಪಂಚೆ ಟವೆಲ್ ಹಾಗೂ ಮಹಿಳೆಯರಿಗೆ ಸೀರೆ ಕುಪ್ಪಸ ನೀಡುವ ಯೋಜನೆಯನ್ನು ಪ್ರಸ್ತಾಪಿಸಿದರು. ಮರುದಿನವೇ ಅದನ್ನು ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿಸಿ, ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಘೊಷಿಸಲಾಯಿತು. ಅದರ ಪರಿಣಾಮವಾಗಿ ಜನತಾ ಪಕ್ಷ 132 ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಬಂದಿತು.
1986ರಲ್ಲಿ ಸಚಿವ ಸಂಪುಟ ಪುನಾರಚನೆ ವೇಳೆ ಪಿ.ಜಿ.ಆರ್.ಸಿಂಧ್ಯಾ, ಜೀವರಾಜ್ ಆಳ್ವ, ರಮೇಶ್ ಜಿಗಜಿಣಗಿ ಸೇರಿದಂತೆ ಹಲವಾರು ಹೊಸ ಮುಖಗಳಿಗೆ ಅವಕಾಶ ನೀಡಿದ ಹೆಗಡೆ, ಮುಂದಾಲೋಚನೆಯೊಂದಿಗೆ ಹೊಸ ನಾಯಕತ್ವ ಬೆಳೆಸಿದ ವಿಶಿಷ್ಟ ರಾಜಕಾರಣಿಯಾಗಿದ್ದರು.
-ಬಿ.ಎಲ್. ಶಂಕರ್ ವಿಧಾನಪರಿಷತ್ ಮಾಜಿ ಸಭಾಪತಿ
ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರ ಜನ್ಮ ಶತಮಾನೋತ್ಸವ ಕಾರ್ಯಕ್ರಮವು ಇಂದು (ಆ.29) ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆಯಲಿದೆ. ಸಂಜೆ 4 ಗಂಟೆಗೆ ನಡೆಯಲಿರುವ ಕಾರ್ಯಕ್ರಮವನ್ನು ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಉದ್ಘಾಟಿಸಲಿದ್ದಾರೆ. ರಾಜ್ಯಪಾಲ ಥಾವರ ಚಂದ್ ಗೆಹಲೋತ್, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.