ವಿಧಾನಸೌಧ 
ರಾಜ್ಯ

ಬಯೋಮೆಟ್ರಿಕ್ ಹಾಜರಾತಿ ಗ್ರಾಪಂ ಸಿಬ್ಬಂದಿಗೂ ಕಡ್ಡಾಯ

ಬೆಂಗಳೂರು: ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿ, ದ್ವಿತೀಯ ದರ್ಜೆ ಲೆಕ್ಕ ಸಹಾಯಕರು ಕಡ್ಡಾಯವಾಗಿ ಪ್ರತಿನಿತ್ಯ ಪಂಚತಂತ್ರ 2.0 ತಂತ್ರಾಂಶದಲ್ಲಿ ಬಯೋಮೆಟ್ರಿಕ್ ಹಾಜರಾತಿ ದಾಖಲಿಸುವುದನ್ನು ಕಡ್ಡಾಯ ಮಾಡಲಾಗಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಈ ಸುತ್ತೋಲೆ ಹೊರಡಿಸಿದೆ. ವಿಧಾನ ಮಂಡಲ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ಶಿಾರಸು ಮಾಡಿದೆ. ಪಿಡಿಒ, ಕಾರ್ಯದರ್ಶಿಗಳು ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸಲು ಕಚೇರಿಯಲ್ಲಿ ಇರುವುದಿಲ್ಲ. ಯಾರೇ ಬಂದು ಕೇಳಿದರೂ ಕೆಲಸದ ಮೇಲೆ ಹೋಗಿದ್ದಾರೆ ಎಂದು ತಿಳಿಸುತ್ತಾರೆ. ಎಲ್ಲಿ ಹೋಗಿದ್ದಾರೆ ಎಂಬ ಬಗ್ಗೆ ಚಲನವಲನ ಪುಸ್ತಕದಲ್ಲಿ ದಾಖಲಾತಿಗಳು ಇರುವುದಿಲ್ಲ. ಕಡ್ಡಾಯವಾಗಿ ಇಂತಿಷ್ಟು ಸಮಯ ಕಚೇರಿಯಲ್ಲಿ ಕಳೆಯಬೇಕೆಂದು ಮತ್ತು ಫೀಲ್ಡ್ ಕಾರ್ಯಗಳಿಗೆ ನಿರ್ಗಮಿಸುವಾಗ ಜಿಪಿಎಸ್ ಟ್ರ್ಯಾಕಿಂಗ್ ವ್ಯವಸ್ಥೆ ಮಾಡಬೇಕೆಂದು ಶಿಾರಸು ಮಾಡಿದೆ. ಆದರೆ, ಈಗಾಗಲೇ ಸುತ್ತೋಲೆಗಳು ಇದ್ದರೂ ಅಧಿಕಾರಿಗಳು ಪಾಲಿಸುತ್ತಿಲ್ಲ ಮತ್ತು ಸಾರ್ವಜನಿಕರ ಭೇಟಿಗಾಗಿ ಪ್ರತಿದಿನ ಸಮಯ ನೀಡುತ್ತಿಲ್ಲ. ಈ ಸಲುವಾಗಿ ಸಮಿತಿಯ ಶಿಾರಸು ಪಾಲನೆ ಮಾಡಬೇಕೆಂದು ಸೂಚಿಸಲಾಗಿದೆ.
ಪಿಡಿಒಗಳು ಕಡ್ಡಾಯವಾಗಿ ಸಾರ್ವಜನಿಕರ ಭೇಟಿಗೆ ಪ್ರತಿದಿನ ಸಮಯ ನಿಗದಿ ಮಾಡಬೇಕು. ಪ್ರತಿ ಸೋಮವಾರದಿಂದ ಶನಿವಾರದವರೆಗೆ ಪ್ರವಾಸದ ವಿವರವನ್ನು ಕಡ್ಡಾಯವಾಗಿ ನೋಟಿಸ್ ಬೋರ್ಡ್‌ನಲ್ಲಿ ಪ್ರಕಟಿಸಬೇಕು. ಗ್ರಾಪಂ ಕಾರ್ಯದರ್ಶಿ ಗ್ರೇಡ್-1, ಗ್ರೇಡ್-2 ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕರು ಕರ್ತವ್ಯದ ಅವಧಿಯಲ್ಲಿ ಕಡ್ಡಾಯವಾಗಿ ಕಾರ್ಯಾಲಯದಲ್ಲಿ ಇದ್ದು ಕಾರ್ಯನಿರ್ವಹಿಸಬೇಕು. ತಾಪಂ ಇಒಗಳು ಗ್ರಾಪಂ ನೌಕರರ ಬಯೋಮೆಟ್ರಿಕ್ ಹಾಜರಾತಿಯನ್ನು ಪಡೆದು ವೇತನ ಪಾವತಿಗೆ ಕ್ರಮ ವಹಿಸಬೇಕೆಂದು ಇಲಾಖೆ ಸೂಚಿಸಿದೆ.

ಬಯೋಮೆಟ್ರಿಕ್ ಆಧಾರದ ಮೇಲೆ ವೇತನ

ಪಿಡಿಒಗಳು ಗ್ರಾಪಂ ಕರವಸೂಲಿಗಾರರು, ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್, ಡಾಟಾ ಎಂಟ್ರಿ ಆಪರೇಟರ್, ಸ್ವಚ್ಛತಾಗಾರರು, ನೀರಗಂಟಿಗಳು ಮತ್ತು ಗ್ರಂಥಪಾಲಕರ ಬಯೋಮೆಟ್ರಿಕ್ ಹಾಜರಾತಿಯನ್ನು ತಂತ್ರಾಂಶದಲ್ಲಿ ಕಡ್ಡಾಯವಾಗಿ ದಾಖಲಿಸುವಂತೆ ಕ್ರಮ ವಹಿಸಬೇಕು. ಇದರ ಆಧಾರದ ಮೇಲೆ ಅವರ ವೇತನ ಪಾವತಿ ಮಾಡಬೇಕೆಂದು ಪಿಡಿಒಗಳಿಗೆ ಪಂಚಾಯತ್ ರಾಜ್ ಆಯುಕ್ತರು ಆದೇಶಿಸಿದ್ದಾರೆ.