Biker's rampage after being fined 
ರಾಜ್ಯ

ದಂಡ ವಿಧಿಸಿದ್ದಕ್ಕೆ ಬೈಕ್​ ಸವಾರನ ರಂಪಾಟ

ಚಿಕ್ಕಬಳ್ಳಾಪುರ: ನಿಯಮ ಉಲ್ಲಂಸಿದ ಹಿನ್ನೆಲೆಯಲ್ಲಿ ಸಂಚಾರ ಠಾಣೆಯ ಪೊಲೀಸರು ದಂಡ ಹಾಕಿದ್ದಕ್ಕೆ ಬೈಕ್​ ಸವಾರನೊಬ್ಬ ರಸ್ತೆಗೆ ಬೈಕು ಬಿಸಾಕಿ ರಂಪಾಟ ಮಾಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.
ನಗರದ ವಾಸಿ ಬಾಬಾಜಾನ್​ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದ ಸವಾರ. ನಗರ ಪೊಲೀಸ್​ ಠಾಣೆ ಸಮೀಪದ ಎಂ.ಜಿ.ರಸ್ತೆಯಲ್ಲಿ ಸಂಚಾರ ಠಾಣೆಯ ಪೊಲೀಸರು ಬುಧವಾರ ತಪಾಸಣೆ ಕೈಗೊಂಡಿದ್ದರು. ಈ ವೇಳೆ ಹೆಲ್ಮೆಟ್​ ಧರಿಸದೇ ವಾಹನ ಚಾಲನೆ ಮಾಡಿಕೊಂಡು ಬಂದಿದ್ದಾನೆ. ಪೊಲೀಸರು ತಣ ಹಿಡಿದುಕೊಂಡು ದಂಡ ವಿಧಿಸಿದಾಗ ಹೈ ಡ್ರಾಮ್​ ಸೃಷ್ಟಿಸಿದ್ದಾನೆ.
ನನ್ನ ಗಾಡಿ ಏಕೆ ಹಿಡಿಯುತ್ತೀರಿ? ಬಂಡವಾಳ ಹಾಕಿದ್ದೀರಾ?. ಹೆಲ್ಮೆಟ್​ ಈಗ ಹಾಕಿಲ್ಲ. ಆಮೇಲೆ ಹಾಕುತ್ತೇನೆ ಬಿಡಿ. ದಂಡ ಕಟ್ಟಲಿಕ್ಕಾಗುವುದಿಲ್ಲ ಎಂದು ರಂಪಾಟ ಮಾಡಿದ್ದಾನೆ. ಕೊನೆಗೆ ಬಿಲ್​ ತೆಗೆದುಕೊಂಡು ಮನೆಗೆ ಹೋಗಿ ಬಂದು ಕಟ್ಟುತ್ತೇನೆ. ಈಗ ನನ್ನ ಬಳಿ ಹಣ ಇಲ್ಲ ಅಂತಾ ಹೇಳಿದ್ದಾನೆ. ಇದೇ ವೇಳೆ ಯಾರ್ಯಾರಿಗೋ ಫೋನ್​ ಮಾಡಿಸಿ ಶಿಫಾರಸ್ಸಿಗೆ ಯತ್ನಿಸಿದ್ದು ಇದರಲ್ಲಿ ಯಶಸ್ವಿಯಾಗದಿದ್ದಾಗ ಮತ್ತಷ್ಟು ಕೋಪಗೊಂಡಿದ್ದು ಗಾಡಿಯನ್ನು ರಸ್ತೆಗೆ ಅಡ್ಡಲಾಗಿ ಬೀಳಿಸಿ, ಏನಾದರೂ ಮಾಡಿಕೊಳ್ಳಿ, ನನ್ನ ಗಾಡೀನು ಬಿಡಲ್ಲ. ದಂಡವನ್ನು ಕಟ್ಟಲ್ಲ. ನಿಮ್ಮಂತಹ ಪೊಲೀಸರನ್ನು ನಾನು ನೋಡಿದ್ದೇನೆ. ನಾನು ರಸ್ತೆ ತೆರಿಗೆ ಕಟ್ಟುವ ಜತೆಗೆ ದಂಡವನ್ನು ಪಾವತಿಸಬೇಕಾ?. ರಸ್ತೆ ನೋಡಿ ಮೂರು ವರ್ಷಗಳಿಂದ ಸರಿ ಮಾಡುತ್ತಿದ್ದೀರಿ ಎಂದು ಕಿಡಿಕಾರಿದ್ದಾನೆ.
ಇದಕ್ಕೆ ನಯವಾಗಿಯೇ ಸಂಚಾರ ಠಾಣೆಯ ಪಿಎಸ್​ಐ ನಾಗರಾಜ್​ ಹಾಗೂ ಸಿಬ್ಬಂದಿ ಸಂಚಾರಿ ನಿಯಮ ಪಾಲನೆ ಹಾಗೂ ದಂಡದ ಪಾವತಿಯ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಹಿರಿಯರಾಗಿ ಇಂತಹ ವರ್ತನೆ ಸರಿಯಲ್ಲ ಎಂದು ತಿಳಿ ಹೇಳಿದ್ದಾರೆ. ಆದರೂ ಅಸಾಮಿ ಕಿಡಿಕಾರುವುದನ್ನು ಬಿಟ್ಟಿಲ್ಲ. ಕೊನೆಗೆ ಗಾಡಿ ವಶಪಡಿಸಿಕೊಳ್ಳಲಾಗುತ್ತದೆ ಎಂಬುದಾಗಿ ನಿರ್ದಾಣ್ಯ ರೀತಿಯಲ್ಲಿ ತಿಳಿಸಿ ಎಚ್ಚರಿಕೆ ನೀಡಿದಾಗ ದಂಡ ಪಾವತಿಸಿದ್ದಾನೆ.