ಚಿಂತಾಮಣಿ: ತಾಲೂಕಿನ ಯಗವಕೋಟೆ ಮುಖ್ಯರಸ್ತೆಯ ಗುಂಡ್ಲಹಳ್ಳಿಯ ಬಳಿ ಸೋಮವಾರ ರಾತ್ರಿ ಎರಡು ಬೈಕ್ಗಳ ನಡುವೆ ಅಪಘಾತ ಸಂಭವಿಸಿ, ಒಬ್ಬ ಮೃತಪಟ್ಟಿದ್ದು, ಮತ್ತಿಬ್ಬರು ಗಾಯಗೊಂಡಿದ್ದಾರೆ.
ತಾಲೂಕಿನ ವೈ.ಕುರಪಲ್ಲಿ ನರೇಂದ್ರ(23) ಮೃತ. ನರೇಂದ್ರ ಅವರ ಸಂಬಂಧಿ ಗೌತಮ್ (22), ಮತ್ತೊಂದು ಬೈಕಿನ ಸವಾರ ದೇವಪಲ್ಲಿ ಗ್ರಾಮದ ಉಪೇಂದ್ರ (24)ಗಾಯಾಳು.
ಗಾಯಗೊಂಡಿದ್ದ ಮೂವರನ್ನು ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ನರೇಂದ್ರ ರಾತ್ರಿಯೇ ಮೃತಪಟ್ಟಿದ್ದು, ಚಿಂತಾಜನಕ ಸ್ಥಿತಿಯಲ್ಲಿರುವ ದೇವಪಲ್ಲಿಯ ಉಪೇಂದ್ರನ್ನು ಕೋಲಾರದಿಂದ ಬೆಂಗಳೂರು ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಉಪೇಂದ್ರ ಬೆಂಗಳೂರಿನ ಯಲಹಂಕ ಕಾಲೇಜಿನಲ್ಲಿ ಬಿಇ ವ್ಯಾಸಂಗ ಮಾಡುತ್ತಿದ್ದ, ಕದಿರಿ ಹುಣ್ಣಿಮೆ ಹಬ್ಬ ಎಂದು ಸ್ವಗ್ರಾಮಕ್ಕೆ ಹೋಗುತ್ತಿದ್ದ ಎನ್ನಲಾಗಿದೆ. ನರೇಂದ್ರ ಮತ್ತು ಗೌತಮ್ ಹಬ್ಬಕ್ಕೆಂದು ಮುರಗಮಲ್ಲಾಗೆ ಬಂದ ವ್ಯಕ್ತಿಯೊಬ್ಬರನ್ನು ಕರೆದುಕೊಂಡು ಬರಲು ಬೈಕ್ನಲ್ಲಿ ಹೋಗುತ್ತಿದ್ದಾಗ ಗುಂಡ್ಲಹಳ್ಳಿಯ ಬಳಿ ಅಪಘಾತವಾಗಿದೆ. ಸ್ಥಳಕ್ಕೆ ಬಟ್ಲಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.