ಅಪರಿಚಿತ ವಾಹನದ ಹಿಂಬದಿಗೆ ಬೈಕ್ ಡಿಕ್ಕಿ
- ನವಿಲೆ ಗ್ರಾಮ
- ಶುಂಠಿ ಕೆಲಸ ಮುಗಿಸಿ ಹೋಗುವ ಸಂದರ್ಭ
ನುಗ್ಗೇಹಳ್ಳಿ: ಸಮೀಪದ ನವಿಲೆ ಗ್ರಾಮದಲ್ಲಿ ಬುಧವಾರ ರಾತ್ರಿ ಶುಂಠಿ ಕೆಲಸ ಮುಗಿಸಿ ಹೋಗುವ ಸಂದರ್ಭದಲ್ಲಿ ಅಗ್ರಹಾರ ಬೆಳಗುಲಿ ಗೇಟ್ ಬಳಿ ಅಪರಿಚಿತ ವಾಹನದ ಹಿಂಬದಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಶುಂಠಿ ಕಾರ್ಮಿಕರು ಸ್ಥಳದಲ್ಲಿ ಮೃತಪಟ್ಟಿದ್ದು, ಒಬ್ಬನಿಗೆ ತೀವ್ರ ಪೆಟ್ಟಾಗಿದೆ.
ಮೂಲತ ಗಂಡಸಿ ಹೋಬಳಿಯ ಕಾಳೇನಹಳ್ಳಿ ಗ್ರಾಮದ ಪ್ರದೀಪ(19), ಅರುಣ್ (20) ಸ್ಥಳದಲ್ಲೇ ಮೃತಪಟ್ಟಿದ್ದು, ಉತ್ತರ ಪ್ರದೇಶದ ಕಾರ್ಮಿಕ ನರೇಶ್‌ಗೆ (40) ತೀವ್ರ ಪೆಟ್ಟಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಎಂದಿನಂತೆ ನವಿಲೆ ಗ್ರಾಮದಲ್ಲಿ ಶುಂಠಿ ಕೆಲಸ ಮುಗಿಸಿ ಕಾರ್ಯನಿಮಿತ್ತ ಹಿರೀಸಾವೆಗೆ ಹೋಗುವ ಸಂದರ್ಭದಲ್ಲಿ ಚನ್ನರಾಯಪಟ್ಟಣ - ತಿಪಟೂರು ಮುಖ್ಯ ರಸ್ತೆಯಲ್ಲಿ ಬರುವ ಅಗ್ರಹಾರ ಬೆಳಗುಲಿ ಗೇಟ್‌ನಲ್ಲಿ ಅಪರಿಚಿತ ವಾಹನದ ಹಿಂಬದಿಗೆ ಬೈಕ್ ಗುದ್ದಿದೆ. ನುಗ್ಗೇಹಳ್ಳಿ ಪೊಲೀಸ್ ಠಾಣೆ ಪಿಎಸ್‌ಐ ಭರತ್ ರೆಡ್ಡಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ದೂರು ದಾಖಲಿಸಿಕೊಂಡರು.
ಚನ್ನರಾಯಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಮೃತರ ಮರಣೋತ್ತರ ಪರೀಕ್ಷೆ ನಡೆಸಲಾಯಿತು.