Bike rider dies after being hit by a car
ಮದುವೆ ಸಮಾರಂಭ ಮುಗಿಸಿಕೊಂಡು ದ್ವಿಚಕ್ರವಾಹನದಲ್ಲಿ ಗ್ರಾಮದತ್ತ ಬರುತ್ತಿದ್ದ ಸವಾರನಿಗೆ ಯದರೂರು ಗೇಟ್ ಬಳಿ ಭಾನುವಾರ ರಾತ್ರಿ ಕಾರು ಡಿಕ್ಕಿಯಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ತಾಡಿಗೋಳ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಮಟಂಪಲ್ಲಿ ನಿವಾಸಿ ಶ್ರೀನಾಥ್(36)ಮೃತ.
ಪಟ್ಟಣದ ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆ ಗಣಕಯಂತ್ರ ನಿರ್ವಾಹಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮುಳಬಾಗಿಲಿನಲ್ಲಿ ಮದುವೆ ಕಾರ್ಯಕ್ರಮ ಮುಗಿಸಿಕೊಂಡು ರಾತ್ರಿ ಒಬ್ಬರೇ ಬೈಕ್ನಲ್ಲಿ ಶ್ರೀನಿವಾಸಪುರಕ್ಕೆ ವಾಪಸ್ ಬರುತ್ತಿದ್ದಾಗ ಯದರೂರು ಗೇಟ್ ಬಳಿ ಎದುರಿಗೆ ವೇಗವಾಗಿ ಬಂದ ಕಾರು ಬೈಕ್ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ತಲೆಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲೇ ಮೃತಪಟ್ಟಿದ್ದು, ಹೆಲ್ಮೆಟ್ ಇದ್ದರೂ ಧರಿಸದಿರುವುದೇ ಸಾವಿಗೆ ಕಾರಣ ಎನ್ನಲಾಗಿದೆ. ಮೃತರಿಗೆ ಪತ್ನಿ, ಮೂವರು ಪುತ್ರರು ಇದ್ದಾರೆ. ಸ್ಥಳಕ್ಕೆ ಶ್ರೀನಿವಾಸಪುರ ಸಿಪಿಐ ಶಂಕರಾಚಾರ್ಯ, ಪಿಎಸ್ಐ ಜಯರಾಮ್ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದು, ಶ್ರೀನಿವಾಸಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.