ಕಿಚ್ಚ ಸುದೀಪ್ 
ರಾಜ್ಯ

ಬಿಗ್ ಬಾಸ್ 13ರ ಬಿಗ್ ಅಪ್ಡೇಟ್; ಮತ್ತೆ ಶುರು ಮಾಡೋಣ್ವಾ? ಎಂಬ ಡೈಲಾಗ್​ ಮೂಲಕ ಕಿಚ್ಚ ಸುದೀಪ್ ಪ್ರೋಮೋ ರಿಲೀಸ್ | Bigg Boss Season 13

Bigg Boss Season 13: ಕನ್ನಡ ಬಿಗ್​ಬಾಸ್​ ಕಾರ್ಯಕ್ರಮದ 13ನೇ ಸೀಸನ್​ ಯಾವಾಗ ಎಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದ ವೇಳೆಗೆ ಇಂದು(ಆ. 02) ಬಿಗ್​ ಬಾಸ್ ತಂಡ ಬಿಗ್ ಅಪ್ಡೇಟ್ ನೀಡಿದ್ದು, ಮತ್ತೆ ಆಟ ಶುರು ಮಾಡೋಣ್ವಾ? ಎಂಬ ಡೈಲಾಗ್​ ಮೂಲಕ ಕಿಚ್ಚ ಸುದೀಪ್ ಅವರ ಪ್ರೋಮೋ ರಿಲೀಸ್ ಮಾಡಿದೆ.
ಕಿಚ್ಚ ಸುದೀಪ್ ವಿಶೇಷವಾದ ಗೆಟಪ್​​ನಲ್ಲಿ ಬಿಗ್ ಬಾಸ್ ಪ್ರೋಮೋದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರೋಮೋದಲ್ಲಿ ನಮಸ್ತೆ ಕರ್ನಾಟಕ, ಕರ್ನಾಟಕದ ಜನ ಯಾವತ್ತೂ ಯಾರಿಗೂ ಕಾದಿದ್ದು ಚರಿತ್ರೆಯಲ್ಲೇ ಇಲ್ಲ. ಆದರೆ ವರ್ಷಕ್ಕೆ ಒಂದು ಸಲ ಕಾಯ್ತಾರೆ. ಒಂದೇ ಮನೆ, ಒಂದು ಅವಕಾಶ, ಕೋಟಿ ಕನಸುಗಳು... ಮತ್ತೆ ಶುರು ಮಾಡೋಣ್ವಾ?’ ಎಂಬ ಡೈಲಾಗ್ ವೀಕ್ಷಕರ ಗಮನ ಸೆಳೆದಿದೆ.


ಈ ವರ್ಷದ ಬಿಗ್​ಬಾಸ್ ಶೋ ಸಾಕಷ್ಟು ಭಿನ್ನತೆಯಿಂದ ಇರಲಿದೆ ಎನ್ನಲಾಗಿದೆ. ಬಿಗ್​ಬಾಸ್ ತಂಡದ ಮಾಹಿತಿ ಪ್ರಕಾರ ಸೆ. 05ರಿಂದ ಕಾರ್ಯಕ್ರಮ ಶುರುವಾಗಲಿದೆ ಎನ್ನಲಾಗಿದೆ. ಪ್ರತಿ ವರ್ಷದಂತೆ ಸಿನಿಮಾ, ಟಿವಿ ಮತ್ತು ಸೋಷಿಯಲ್ ಮೀಡಿಯಾ ಸೆಲೆಬ್ರಿಟಿಗಳು ಇರಲಿದ್ದಾರೆ. ಜೊತೆಗೆ ಈ ಬಾರಿ ಸಾಮಾನ್ಯರನ್ನು ಸಹ ಮನೆಯ ಒಳಗೆ ಕಳಿಸಲಾಗುತ್ತಿದೆ.
ಈಗಾಗಲೇ ಯಶಸ್ವಿಯಾಗಿ 12 ಆವೃತ್ತಿಯನ್ನು ಮುಗಿಸಿರುವ ಬಿಗ್​ಬಾಸ್ ಶೋ 13ನೇ ಆವೃತ್ತಿಗೆ ಭರ್ಜರಿ ತಯಾರಿ ಮಾಡಿಕೊಂಡಿದೆ. ಭರಪೂರ ಮನರಂಜನೆಯ ಜೊತೆಗೆ ವಿವಾದಗಳನ್ನು ಹುಟ್ಟು ಹಾಕುವ ಬಿಗ್​ಬಾಸ್​, ಕಿರುತೆರೆ ಲೋಕದ ಜನಪ್ರಿಯ ಶೋಗಳಲ್ಲಿ ಒಂದೆಂದರೆ ತಪ್ಪಾಗಲಾರದು. ಪ್ರೀತಿ, ಸ್ನೇಹ ಸಂಬಂಧಗಳಿಗೆ ಈ ಶೋ ಬೆಸುಗೆಯಾಗುತ್ತದೆ. ಇಲ್ಲಿ ನಗು, ಕಣ್ಣೀರು, ಕೋಪ, ಮುನಿಸು ಮತ್ತು ಮನಸ್ತಾಪಗಳ ಮಿಶ್ರಣವು ಇದೆ. ಟಾಸ್ಕ್​ ನೀಡುವುದರ ಜೊತೆಗೆ ಜೀವನದ ಪಾಠವನ್ನು ಹೇಳಲಾಗುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ವಾರದ ಕೊನೆಯಲ್ಲಿ ಬಾದ್​ಶಾ ಕಿಚ್ಚ ಸುದೀಪರ ಪಂಚಾಯಿತಿಯಲ್ಲಿ ಸರಿ-ತಪ್ಪುಗಳ ತಿದ್ದುವಿಕೆ ಶೋಗೆ ಹೊಸ ಆಯಾಮವನ್ನು ತಂದುಕೊಡುತ್ತದೆ.