ಸೌಜನ್ಯ ಪ್ರಕರಣದ ಮರುತನಿಖೆಗೆ ರಚಿಸಲಾಗಿದ್ದ ಎಸ್‌ಐಟಿ ಮುಖ್ಯಸ್ಥ ಸ್ಥಾನದಿಂದ ಎನ್. ಶಶಿಕುಮಾರ್ ಹಿಂದೆ ಸರಿದ ಬೆನ್ನಲ್ಲೇ ನೂತನ ಸಾರಥಿಯಾಗಿ ಸಿಐಡಿ ಐಜಿಪಿ ಚೇತನ್ ಸಿಂಗ್ ರಾಥೋಡ್ ನೇಮಕಗೊಂಡಿದ್ದಾರೆ. 
ರಾಜ್ಯ

ಸೌಜನ್ಯ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಎಸ್‌ಐಟಿಯಿಂದ ಹೊರಬಂದ ಎನ್​. ಶಶಿಕುಮಾರ್; ಚೇತನ್ ಸಿಂಗ್ ರಾಥೋಡ್​ಗೆ ತನಿಖೆ ಜವಾಬ್ದಾರಿ! Sowjanya Case

ಬೆಂಗಳೂರು: ಧರ್ಮಸ್ಥಳದ ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್​ ಮರುತನಿಖೆಗೆ ಆದೇಶಿಸಿದ ಹಿನ್ನಲೆ, ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ (SIT) ರಚಿಸಿ, ಹುಬ್ಬಳ್ಳಿ-ಧಾರವಾಡದ ಮಾಜಿ ಪೊಲೀಸ್​ ಆಯುಕ್ತ ಎನ್​. ಶಶಿಕುಮಾರ್​ ಅವರನ್ನು ಈ ಎಸ್​ಐಟಿ ಮುಖ್ಯಸ್ಥರನ್ನಾಗಿ ನೇಮಿಸಿತ್ತು.

ಆದರೆ, ಈಗ ಈ ಎಸ್​ಐಟಿಯಲ್ಲಿ ಭಾರೀ ಬದಲಾವಣೆಯನ್ನು ಮಾಡಲಾಗಿದ್ದು, ಎನ್​. ಶಶಿಕುಮಾರ್ ಅವರನ್ನು ಎಸ್​ಐಟಿ ಮುಖ್ಯಸ್ಥ ಸ್ಥಾನದಿಂದ ಬಿಡುಗಡೆ ಮಾಡಲಾಗಿದ್ದು, ಆ ಹುದ್ದೆಗೆ ಸಿಐಡಿ ಐಜಿಪಿ ಚೇತನ್​ ಸಿಂಗ್​ ರಾಥೋಡ್​ ಅವರನ್ನು ಎಸ್​ಐಟಿಯ ನೂತನ ಮುಖ್ಯಸ್ಥರಾಗಿ ನೇಮಕ ಮಾಡಲಾಗಿದೆ.

ಪತ್ರ ಬರೆದಿದ್ದ ಎನ್​. ಶಶಿಕುಮಾರ್​​!

ರಾಜ್ಯ ಸರ್ಕಾರ ಎಸ್​ಐಟಿ ರಚಿಸಿ ಅದರ ಮುಖ್ಯಸ್ಥರಾಗಿ ಹಿರಿಯ ಐಪಿಎಸ್​ ಅಧಿಕಾರಿ ಎನ್​. ಶಶಿಕುಮಾರ್ ಅವರನ್ನು ನೇಮಕ ಮಾಡಲಾಗಿತ್ತು. ಆದರೆ, ಶಶಿಕುಮಾರ್​​ ವೈಯಕ್ತಿಕ ಕಾರಣ ನೀಡಿ ತಮ್ಮನ್ನು ಈ ಎಸ್​​ಐಟಿಯಿಂದ ಕೈ ಬಿಡುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದರು. ಈಗ ಸರ್ಕಾರ ಎನ್​. ಶಶಿಕುಮಾರ್​ ಅವರ ಮನವಿಯನ್ನು ಮನ್ನಿಸಿ, ಎಸ್​​ಐಟಿ ತಂಡದ ನಾಯಕತ್ವದಿಂದ ಬಿಡುಗಡೆಗೊಳಿಸಿದೆ. ಈಗ ಈ ಸ್ಥಾನಕ್ಕೆ ಇನ್ನೊರ್ವ ಹಿರಿಯ ಐಪಿಎಸ್​ ಅಧಿಕಾರಿ ಚೇತನ್​ ಸಿಂಗ್​ ರಾಥೋಡ್​ ಅವರನ್ನು ನೇಮಕ ಮಾಡಲಾಗಿದೆ.

ಹಿಂದಿನ ತನಿಖಾಧಿಕಾರಿಗಳ ವಿಚಾರಣೆ!

ಸುಪ್ರೀಂ ಕೋರ್ಟ್​ ಮೂರು ತಿಂಗಳ ಅವಧಿಯಲ್ಲಿ ತನಿಖೆಯನ್ನು ನಡೆಸಿ, ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಗಡುವು ನೀಡಿದ್ದು, ಎಸ್​ಐಟಿ ಅಧಿಕಾರಿಗಳು, ಈ ಹಿಂದೆ ಈ ಪ್ರಕರಣದ ತನಿಖಾಧಿಕಾರಿಗಳಾಗಿ ಕೆಲಸ ಮಾಡಿದವರ ವಿಚಾರಣೆ ನಡೆಸುತ್ತಿದೆ.

ನಿವೃತ್ತ ಡಿವೈಎಸ್ಪಿ ರುದ್ರಮುನಿ, ಸಿಪಿಐ ಭಾಸ್ಕರ್​ ರೈ, ಪಿಎಸ್​ಐ ಯೋಗೇಶ್​ ಸೇರಿದಂತೆ ಮೊದಲಾದ ತನಿಖಾಧಿಕಾರಿಗಳು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಏನೇನು ಕೆಲಸ ಮಾಡಿದ್ದರು? ಅವರು ಪತ್ತೆಹಚ್ಚಿದ ಸಾಕ್ಷಿಗಳೇನು? ಯಾರಾದರೂ ಒತ್ತಡ ಹೇರಿದ್ದರಾ? ಎಂದು ಎಸ್​ಐಟಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಕುಟುಂಬದಿಂದ ವಿರೋಧ!

ಆದರೆ, ಸರ್ಕಾರ ರಚಿಸಿರುವ ಎಸ್​ಐಟಿ ಹಾಗೂ ಅಲ್ಲಿರುವ ಅಧಿಕಾರಿಗಳ ಮೇಲೆ ತಮಗೆ ಸಂಪೂರ್ಣ ವಿಶ್ವಾಸವಿಲ್ಲ ಎಂದು ಸೌಜನ್ಯ ತಾಯಿ ಕುಸುಮಾವತಿ ಹಾಗು ಕೆಲ ಸಾಮಾಜಿಕ ಹೋರಾಟಗಾರರು ವಿರೋಧ ವ್ಯಕ್ತ ಪಡಿಸಿದ್ದರು. ಕುಟುಂಬ ವರ್ಗದಿಂದ ಎಸ್​ಐಟಿ ಮೇಲೆ ಅವಿಶ್ವಾಸ ಮೂಡಿರುವ ಹಿನ್ನಲೆ ತಂಡದಲ್ಲಿ ಮುಂದುವರಿಯಲು ಅಲ್ಲಿರುವ ಅಧಿಕಾರಿಗಳಿಗೆ ನೈತಿಕ ಪ್ರಶ್ನೆ ಎದುರಾಗಿದೆ ಎಂದು ಹೇಳಲಾಗುತ್ತಿದೆ.

ಕುಸುಮಾವತಿ ಅರ್ಜಿ ಅಂಗೀಕರಿಸಿದ್ದ ಸುಪ್ರೀಂ!

ತನ್ನ ಮಗಳ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಸರಿಯಾದ ತನಿಖೆ ನಡೆದಿಲ್ಲ ಎಂದು ಸೌಜನ್ಯ ತಾಯಿ ಕುಸುಮಾವತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್​, ಈ ಪ್ರಕರಣದ ಮರು ತನಿಖೆ ನಡೆಸುವಂತೆ ಆದೇಶಿಸಿತ್ತು.

ಈ ಪ್ರಕರಣವನ್ನು ಕರ್ನಾಟಕದ ಸಿಐಡಿ ಹಾಗೂ ಕೇಂದ್ರದ ಸಿಬಿಐ ಅಧಿಕಾರಿಗಳು ತನಿಖೆ ನಡೆಸಿದ್ದರೂ ಸಹ ಅಪರಾಧಿಗಳನ್ನು ಕಂಡು ಹಿಡಿಯುವುದರಲ್ಲಿ ಸಫಲರಾಗಿರಲಿಲ್ಲ. ಆದ್ದರಿಂದ ಕುಸುಮಾವತಿ ತನ್ನ ಮಗಳ ಸಾವಿಗೆ ನ್ಯಾಯ ದೊರೆತಿಲ್ಲವೆಂದು ಮರು ತನಿಖೆಗೆ ಮನವಿ ಸಲ್ಲಿಸಿದ್ದರು. ಈ ಮನವಿಯನ್ನು ಸಮ್ಮತಿಸಿರುವ ಸುಪ್ರೀಂ ಕೋರ್ಟ್​ ಮೂರು ತಿಂಗಳಲ್ಲಿ ತನಿಖೆ ಪೂರೈಸಿ, ವರದಿ ಸಲ್ಲಿಸುವಂತೆ ನಿರ್ದೇಶಿಸಿದೆ, (ಏಜೆನ್ಸೀಸ್).