ರಾಜ್ಯ

ಸಿ ಟಿ ರವಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಎಸಿಎಸ್ ಕ್ಷಮೆಯಾಚನೆ!...ಅಂದು ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆದಿದ್ದೇನು..?

ಬೆಂಗಳೂರು: ಬೆಳಗಾವಿ ಸುವರ್ಣ ಸೌಧದಲ್ಲಿ ನಡೆದ ವಿಧಾನ ಮಂಡಲದ ಚಳಿಗಾಲದ ಅಧಿವೇಶನದಲ್ಲಿ ಕೋಲಾಹಲಕ್ಕೆ ಕಾರಣವಾಗಿದ್ದ ಸಿ.ಟಿ.ರವಿ ಪ್ರಹಸನದ ವಿಚಾರವಾಗಿ ಸಲ್ಲಿಕೆಯಾಗಿದ್ದ ಹಕ್ಕುಚ್ಯುತಿ ಅರ್ಜಿ ಮುಕ್ತಾಯಗೊಂಡಿದೆ. ವಿಶೇಷವೆಂದರೆ ಹಕ್ಕುಬಾಧ್ಯತಾ ಸಮಿತಿ ವಿಚಾರಣೆ ವೇಳೆ ಸರ್ಕಾರದ ಅಪರ ಕಾರ್ಯದರ್ಶಿಗಳು ಕ್ಷಮೆ ಕೋರಿ ತೆರೆ ಎಳೆದಿರುವ ಬೆಳವಣಿಗೆ ನಡೆದಿದೆ.

ಬೆಂಗಳೂರು: ಬೆಳಗಾವಿ ಸುವರ್ಣ ಸೌಧದಲ್ಲಿ ನಡೆದ ವಿಧಾನ ಮಂಡಲದ ಚಳಿಗಾಲದ ಅಧಿವೇಶನದಲ್ಲಿ ಕೋಲಾಹಲಕ್ಕೆ ಕಾರಣವಾಗಿದ್ದ ಸಿ.ಟಿ.ರವಿ ಪ್ರಹಸನದ ವಿಚಾರವಾಗಿ ಸಲ್ಲಿಕೆಯಾಗಿದ್ದ ಹಕ್ಕುಚ್ಯುತಿ ಅರ್ಜಿ ಮುಕ್ತಾಯಗೊಂಡಿದೆ. ವಿಶೇಷವೆಂದರೆ ಹಕ್ಕುಬಾಧ್ಯತಾ ಸಮಿತಿ ವಿಚಾರಣೆ ವೇಳೆ ಸರ್ಕಾರದ ಅಪರ ಕಾರ್ಯದರ್ಶಿಗಳು ಕ್ಷಮೆ ಕೋರಿ ತೆರೆ ಎಳೆದಿರುವ ಬೆಳವಣಿಗೆ ನಡೆದಿದೆ.

ಅಧಿವೇಶನದ ಕೊನೆಯ ದಿನದಂದು ಸೌಧದ ಪ್ರವೇಶದ್ವಾರ ಹಾಗೂ ಮೊಗಸಾಲೆಯಲ್ಲಿ ಶಾಸಕರ ಮೇಲೆ ನಡೆದ ದಾಳಿ ಯತ್ನ ಮತ್ತು ಪೊಲೀಸರು ಶಾಸಕರನ್ನು ವಶಕ್ಕೆ ಪಡೆದು ರಾತ್ರಿ ವೇಳೆ ಸುತ್ತಾಡಿಸಿದ ಕ್ರಮವು ತೀವ್ರ ವಿವಾದಕ್ಕೆ ಹಾಗೂ ಹಕ್ಕುಚ್ಯುತಿ ಅರ್ಜಿ ಸಲ್ಲಿಕೆಗೆ ಕಾರಣವಾಗಿತ್ತು. ಈ ಕುರಿತು ಶಾಸಕರು ಸಭಾಪತಿಯವರಿಗೆ ದೂರು ನೀಡಿದ್ದು, ಪ್ರಕರಣವು ಹಕ್ಕುಬಾಧ್ಯತಾ ಸಮಿತಿಯ ಮುಂದೆ ವಿಚಾರಣೆಗೆ ಬಂದಿತ್ತು.

ಸಮಿತಿಯ ಸಭೆಗಳಲ್ಲಿ ಗೃಹ ಇಲಾಖೆ ಹಾಗೂ ಬೆಳಗಾವಿ ಪೊಲೀಸ್ ಉನ್ನತಾಧಿಕಾರಿಗಳು ಅಂದು ನಡೆದ ಘಟನೆಗಳು ಮತ್ತು ಭದ್ರತಾ ವ್ಯವಸ್ಥೆಯ ಕುರಿತು ವಿವರಣೆ ನೀಡಿದ್ದು, ಶಾಸಕರಿಗೆ ನೀಡುವ ಪಾಸ್ ಪಡೆದು ಸುವರ್ಣ ಸೌಧದೊಳಗೆ ಬಂದವರಿಗೆ ಗೊಂದಲ ಉಂಟಾಗಿದೆ ಎಂಬ ಅಂಶವೂ ಚರ್ಚೆಗೆ ಬಂದಿದೆ.

ಈ ವಿಚಾರವಾಗಿ ಸಮಿತಿ ಸಭೆಯಲ್ಲಿ ಮಾತನಾಡಿದ ಗೃಹ ಇಲಾಖೆಯ ಸರ್ಕಾರದ ಅಪರ ಮುಖ್ಯಕಾರ್ಯದರ್ಶಿಯಾಗಿದ್ದ ತುಷಾರ್ ಗಿರಿನಾಥ್, ರಾಜಕೀಯಕ್ಕೆ ಬದ್ಧವಾಗಿ ಯಾವುದೇ ತಪ್ಪು ಮಾಡಿಲ್ಲ. ಆದಾಗ್ಯೂ ನಮ್ಮ ಅಧಿಕಾರಿಗಳಿಂದ ನಿಯಮಗಳ ಪ್ರಕಾರ ತಪ್ಪುಗಳಾಗಿದ್ದರೆ ಕ್ಷಮೆ ಕೇಳುತ್ತೇನೆ ಎಂದು ಸ್ಪಷ್ಟಪಡಿಸಿದರು. ಅಲ್ಲದೆ, ಮುಂದಿನ ದಿನಗಳಲ್ಲಿ ಅಧಿವೇಶನದ ವೇಳೆ ಶಾಸಕರಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸುವುದಾಗಿ ತಿಳಿಸಿದ್ದರು.

ಅಂದು ನಡೆದಿದ್ದೇನು?

ಅಂದು ವಿಧಾನ ಪರಿಷತ್ ಕಲಾಪದ ವೇಳೆ ಸಚಿವೆಯಾಗಿದ್ದ ಲಕ್ಷ್ಮೀ ಹೆಬ್ಬಾಳ್ಳ‌ರ್ ಕುರಿತು ಸಿ.ಟಿ.ರವಿ ಅಸಂಸದೀಯ ಪದ ಬಳಸಿದರೆಂದು ಅವರ ವಿರುದ್ಧ ಆಡಳಿತ ಪಕ್ಷ ಆಕ್ಷೇಪ ಹೊರಹಾಕಿತ್ತು. ವಿಷಯ ತೀವ್ರಗತಿಯಲ್ಲಿ ಬೆಳೆದು ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಲಿಗರು ಸುವರ್ಣಸೌಧಕ್ಕೆ ಆಗಮಿಸಿ ಕಾರಿಡಾರ್‌ನಲ್ಲಿ ಸಿ.ಟಿ.ರವಿ ವಿರುದ್ಧ ಮುಗಿಬಿದ್ದು, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಈ ಬೆಳವಣಿಗೆಗೆ ಪ್ರತಿಯಾಗಿ, ಕಲಾಪ ಮುಗಿದ ನಂತರ ಮುಖ್ಯದ್ವಾರದ ಮೆಟ್ಟಿಲುಗಳ ಮೇಲೆ ಸಿ.ಟಿ.ರವಿ ಹಾಗೂ ಬಿಜೆಪಿ ಶಾಸಕರು ಧರಣಿ ಕುಳಿತರು. ಶಾಸಕರನ್ನು ಪೊಲೀಸರು ಏಕಾಏಕಿ ವಶಕ್ಕೆ ಪಡೆದಿದ್ದರು.

ಈ ವಿಷಯ ಮುಂದಿಟ್ಟುಕೊಂಡು ಸಿ.ಟಿ.ರವಿ ಹಕ್ಕುಬಾಧ್ಯತಾ ಸಮಿತಿಗೆ ದೂರು ಸಲ್ಲಿಸಿದ್ದರು. ಪೊಲೀಸರು ಕಾರಣ ನೀಡದೆ ಹಿರೇಬಾಗೇವಾಡಿ ಠಾಣೆಗೆ ಕರೆದೊಯ்து ಸಾಂವಿಧಾನಿಕ ಹಕ್ಕುಗಳನ್ನು ಉಲ್ಲಂಘಿಸಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿತ್ತು. ವಿಶೇಷವಾಗಿ, ರಾತ್ರಿ 8 ಗಂಟೆಯ ಸಮಯದಲ್ಲಿ ಶಾಸಕ ಸಿ.ಟಿ.ರವಿ ಅವರನ್ನು ಠಾಣೆಗೆ ಕರೆತಂದಾಗ ಹಿರಿಯ ಅಧಿಕಾರಿಗಳು ಸ್ಪಂದಿಸದೆ, ಭದ್ರತೆಯ ಹೆಸರಿನಲ್ಲಿ ಇಡೀ ರಾತ್ರಿ ಸುತ್ತಾಡಿಸಿ ಕಿರುಕುಳ ನೀಡಲಾಗಿದೆ ಎಂಬ ಆರೋಪವಿತ್ತು.

ಅಪರ ಮುಖ್ಯ ಕಾರ್ಯದರ್ಶಿಗಳ ಕ್ಷಮೆಯಾಚನೆಯನ್ನು ಪರಿಗಣಿಸಿದ ಸಮಿತಿಯು, ಜನಪ್ರತಿನಿಧಿಗಳಿಗೆ ಸಂವಿಧಾನದತ್ತವಾಗಿ ಸಿಗಬೇಕಾದ ಗೌರವವನ್ನು ಕಾಪಾಡುವಂತೆ ಸೂಚಿಸಿ, ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಲು ನಿರ್ದೇಶಿಸಿ ಪ್ರಕರಣವನ್ನು ಮುಕ್ತಾಯಗೊಳಿಸಿದೆ.

ನಮ್ಮನ್ನು ಮನ್ನಿಸಿ

ಅಂದು ಸಿ.ಟಿ. ರವಿ ಅವರ ಬಂಧನ ಸಂಬಂಧ ಸ್ಥಳೀಯ ನ್ಯಾಯಾಧೀಶರ ಅನುಮತಿ ಪಡೆಯಲು ಹೋದಾಗ, ತೆರೆದ ನ್ಯಾಯಾಲಯದಲ್ಲಿ ಹಾಜರುಪಡಿಸಬೇಕೆಂದು ಹೇಳಿ, ಸುರಕ್ಷತೆ ದೃಷ್ಟೃಷ್ಟಿಯಿಂದ ತಮ್ಮ ಬಳಿಯೇ ಇರಿಸಿಕೊಳ್ಳಿ ಎಂದು ಸೂಚಿಸಿದ್ದರು. ಅವರನ್ನು ಕರೆತರುವಾಗ ಎರಡು ಪೊಲೀಸ್ ವಾಹನ ಇದ್ದು, ಹಿಂದೆ ಎಂಎಲ್‌ಸಿ ಎಂದು ಬರೆದಿರುವ ವಾಹನ ನಮ್ಮನ್ನು ಹಿಂಬಾಲಿಸುತ್ತಿತ್ತು. ರಾಮದುರ್ಗದ ಕಡೆ ಹೊರಟೆವು, ಅಲ್ಲಿಗೂ ಹಿಂಬಾಲಿಸುತ್ತಿದ್ದ ವಾಹನಗಳು ಬಂದು ಸೇರಿಕೊಂಡವು. ನಮ್ಮನ್ನು ಬೇರೆ ವಾಹನಗಳು ಹಿಂಬಾಲಿಸುತ್ತಿದ್ದುದರಿಂದ ಬೆಳಗ್ಗೆ 5.30ರವರೆಗೆ ಪೊಲೀಸ್ ವಾಹನದಲ್ಲಿ ಸುತ್ತಾಡಿ ಯಾದವಾಡ, ಮೂಡಲಗಿ ತಲುಪಿದೆವು. ಶಾಸಕರ ರಕ್ಷಣೆ ನಮ್ಮ ಜವಾಬ್ದಾರಿಯಾಗಿದ್ದು, ಅವರಿಗೆ ಧಕ್ಕೆಯಾಗದಂತೆ ಜಿಲ್ಲಾ ವ್ಯಾಪ್ತಿಯಲ್ಲಿ ಪೊಲೀಸರು ಕ್ರಮಕೈಗೊಂಡಿದ್ದಾರೆ. ಈ ಎಲ್ಲಾ ಘಟನೆಯಲ್ಲಿ ನಮ್ಮ ಕಡೆಯಿಂದ ಅಚಾತುರ್ಯವಾಗಿದ್ದರೆ ನಮ್ಮನ್ನು ಮನ್ನಿಸಬೇಕು ಎಂದು ಬೆಳಗಾವಿ ಎಸ್ಪಿ ಹಕ್ಕುಬಾಧ್ಯತಾ ಸಮಿತಿ ಮುಂದೆ ಹೇಳಿಕೊಂಡಿದ್ದರು.