ಭಾರೀ ದಂಡ ವಿಧಿಸಿದ ಬೆಂಗಳೂರು ಆರ್ಟಿಓ ಅಧಿಕಾರಿಗಳು
- ಕಾರಿನ ಸೈಲೆನ್ಸರ್ ಮಾರ್ಪಡಿಸಿ, ರಸ್ತೆಗಳಲ್ಲಿ ಇತರರಿಗೆ ಕಿರಿಕಿರಿ
- ಬೆಂಗಳೂರು ಸಂಚಾರ ಪೊಲೀಸರಿಂದ ಕಾರು ಮಾಲೀಕನಿಗೆ 1 ಲಕ್ಷ ರೂ.ಗಳ ದಂಡದ ಶಾಕ್
- 70 ಸಾವಿರ ರೂ. ಮೌಲ್ಯದ ಕಾರಿಗೆ ಬಿತ್ತು 1 ಲಕ್ಷ ರೂ. ದಂಡ
ಬೆಂಗಳೂರು: ತನ್ನ ಕಾರಿನ ಸೈಲೆನ್ಸರ್ ಮಾರ್ಪಡಿಸಿ, ನಗರದ ಮುಖ್ಯ ರಸ್ತೆಗಳಲ್ಲಿ ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡುತ್ತಿದ್ದ ಚಾಲಕನಿಗೆ ಬೆಂಗಳೂರು ಟ್ರಾಫಿಕ್ ಪೊಲೀಸರು ದಂಡ ವಿಧಿಸುವ ಜೊತೆಗೆ ಖಡಕ್ ಎಚ್ಚರಿಕೆ ಕೂಡ ರವಾನಿಸಿದ್ದಾರೆ.
ಭಾರೀ ದಂಡ
ಕಾರಿನ ಸೈಲೆನ್ಸರ್‌ನಲ್ಲಿ ವಿಪರೀತ ಶಬ್ದ ಹಾಗೂ ಬೆಂಕಿ ಬರುವಂತೆ ಬದಲಾವಣೆ ಮಾಡಿಸಿದ್ದ ವಿದ್ಯಾರ್ಥಿಯೊಬ್ಬ, ನಗರದ ಮುಖ್ಯ ರಸ್ತೆಗಳಲ್ಲಿ ಇತರೆ ವಾಹನ ಸವಾರರಲ್ಲಿ ಆತಂಕ ಮೂಡಿಸುವ ರೀತಿ ಕಾರು ಚಲಾಯಿಸುತ್ತಿರುವುದು ಕಂಡುಬಂದಿದೆ. ಈತನ ಕಾರಿನಿಂದ ಹೊರ ಬರುತ್ತಿದ್ದ ವಿಪರೀತ ಶಬ್ದ ಚಾಲಕನ ವಿರುದ್ಧ ಹೆಣ್ಣೂರು ಸಂಚಾರ ಪೊಲೀಸರಿಗೆ ದೂರು ನೀಡುವಂತೆ ಮಾಡಿತು. ಚಾಲಕ ಮೂಲತಃ ಕೇರಳದ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. ಕಾರಿನ ದೃಶ್ಯ ಮತ್ತು ಪೋಟೋಗಳು ವೈರಲ್ ಆಗ್ತಿದ್ದಂತೆ ಖಾಕಿ ಪಡೆ, ಆತನ ಕಾರನ್ನು ಸೀಜ್ ಮಾಡಿ, ಭಾರೀ ದಂಡ ವಿಧಿಸಿದೆ.
ಯಲಹಂಕ ಸಂಚಾರ ಪೊಲೀಸರು 1 ಲಕ್ಷದ 11,500 ರೂ. ದಂಡ ವಿಧಿಸಿದರು. ಆದರೆ, ಅಸಲಿಗೆ ಈ ಕಾರಿನ ಮೌಲ್ಯ ಕೇವಲ 70 ಸಾವಿರ ರೂ. ಎಂದು ವರದಿಯಾಗಿದೆ. ಜ.2ರಂದು, ಹೆಣ್ಣೂರು ಬಳಿಕ ರಸ್ತೆಯಲ್ಲಿ ಯುವಕ ಕಾರು ಚಲಾಯಿಸಿದ್ದು, ಕಾರಿನ ಸೈಲೆನ್ಸರ್ನಿಂದ ಬೆಂಕಿ ಮತ್ತು ವಿಪರೀತ ಶಬ್ದಗಳು ಇತರೆ ವಾಹನ ಸವಾರರ ಪಿತ್ತವನ್ನು ನೆತ್ತಿಗೇರಿಸಿತು. ತಕ್ಷಣವೇ ವಿಡಿಯೋಗಳನ್ನು ಸೆರೆಹಿಡಿದು, ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟರು. ಇದು ಪೊಲೀಸರ ಕೆಂಗಣ್ಣಿಗೆ ಗುರಿಯಾಯಿತು.
1 ಲಕ್ಷ ರೂ. ದಂಡ ವಿಧಿಸಿದ ಆರ್ಟಿಓ
ಸಂಚಾರ ಪೊಲೀಸರಿಂದ ಮಾಹಿತಿ ಪಡೆದ ಕೂಡಲೇ ಆರ್‌ಟಿಒ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ಕಾರನ್ನು ಸೀಜ್ ಮಾಡಿದರು. ನಂತರ ಕಾರಿಗೆ ಅಕ್ರಮವಾಗಿ ಅಳವಡಿಸಲಾಗಿದ್ದ ಸೈಲೆನ್ಸರ್ ಅನ್ನು ಪರಿಶೀಲಿಸಿ, ಇದು ಮಾರ್ಪಾಡು ಮೋಟಾರು ವಾಹನ ಕಾಯ್ದೆಯ ಉಲ್ಲಂಘನೆಯಾಗಿದೆ ಎಂಬುದನ್ನು ಖಚಿತ ಪಡಿಸಿದರು. ಬಳಿಕ 1,11,500 ರೂ. ದಂಡ ವಿಧಿಸಿದರು. ಕಡೆಗೂ ವಿದ್ಯಾರ್ಥಿ ಈ ಹಣವನ್ನು ಕಟ್ಟಿದ ಬಳಿಕವೇ ಅಧಿಕಾರಿಗಳು ಕಾರನ್ನು ಬಿಟ್ಟು ಕಳುಹಿಸಿದ್ದಾರೆ,(ಏಜೆನ್ಸೀಸ್).