ಶಿಕ್ಷಣ ಸಚಿವರಿಂದ ಮಹತ್ವದ ಘೋಷಣೆ: ಒಂದನೇ ತರಗತಿ ಪ್ರವೇಶಕ್ಕೆ ವಯೋಮಿತಿ ಸಡಿಲಿಸಿದ ಸರ್ಕಾರ! School admission  
ರಾಜ್ಯ

ಶಿಕ್ಷಣ ಸಚಿವರಿಂದ ಮಹತ್ವದ ಘೋಷಣೆ: ಒಂದನೇ ತರಗತಿ ಪ್ರವೇಶಕ್ಕೆ ವಯೋಮಿತಿ ಸಡಿಲಿಸಿದ ಸರ್ಕಾರ! School admission

ಪ್ರಮುಖ ಮುಖ್ಯಾಂಶಗಳು

  • ಒಂದನೇ ತರಗತಿ ದಾಖಲಾತಿ ವಯೋಮಿತಿಯಲ್ಲಿ ಭರ್ಜರಿ ಸಡಿಲಿಕೆ
  • ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪರಿಂದ ಮಹತ್ವದ ಘೋಷಣೆ
  • ಒಂದನೇ ತರಗತಿಗೆ ದಾಖಲಾತಿ ಮಾಡುವ ಸಂಬಂಧ 60 ದಿನಗಳ ವಿನಾಯಿತಿ ನೀಡಿದ ಸರ್ಕಾರ
ಬೆಂಗಳೂರು: ಒಂದನೇ ತರಗತಿಗೆ ದಾಖಲಾಗಲು ( School admission ) ಕಡ್ಡಾಯವಾಗಿ 6 ವರ್ಷ ತುಂಬಿರಲೇಬೇಕು ಎಂಬ ನಿಯಮದಿಂದ ರಾಜ್ಯ ಸರ್ಕಾರ 2 ತಿಂಗಳ ಸಡಿಲಿಕೆ ನೀಡಿದ್ದು, ಲಕ್ಷಾಂತರ ಮಕ್ಕಳ ಪಾಲಕರಿಗೆ ಇದು ಅನುಕೂಲವಾಗಲಿದೆ.
ಇಂದು ಸದನದಲ್ಲಿ ಮಾತನಾಡಿದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ, 1ನೇ ತರಗತಿ ಮಕ್ಕಳ ದಾಖಲಾತಿಗೆ 6 ವರ್ಷದ ಮಿತಿಯನ್ನು ನಿಗದಿ ಮಾಡಲಾಗಿತ್ತು. ಆ ನಿಯಮದಲ್ಲಿ ಸಡಿಲ ಮಾಡುವಂತೆ ಸಾಕಷ್ಟು ಮಕ್ಕಳ ಪಾಲಕರು ನಮ್ಮ ಬಳಿ ಮನವಿ ಮಾಡಿದ್ದರು. ಆ ಪಾಲಕರೆಲ್ಲ ಸ್ವಲ್ಪ ಗಾಬರಿಯಲ್ಲೂ ಇದಾರೆ. ಅವರ ಮನವಿಯನ್ನು ಪುರಸ್ಕರಿಸಿ ಸರ್ಕಾರ ವಯೋಮಿತಿಯಲ್ಲಿ ಸಡಿಲಿಕೆ ನೀಡುತ್ತಿದೆ ಎಂದರು. 

ತಂತ್ರಾಂಶದಲ್ಲೂ ಬದಲಾವಣೆ 

ಕರ್ನಾಟಕ ಶಿಕ್ಷಣ ಕಾಯ್ದೆ 1993ರ ಅಧ್ಯಾಯ 3 ಸೆಕ್ಷನ್​ 20ರ ಅಡಿಯಲ್ಲಿ ಮಕ್ಕಳನ್ನು ಒಂದನೇ ತರಗತಿಗೆ ದಾಖಲಾತಿ ಮಾಡುವ ಸಂಬಂಧ 60 ದಿನಗಳ ವಿನಾಯಿತಿಯನ್ನು ನೀಡಲಾಗಿರುತ್ತದೆ. ಅದರಂತೆ 2026-27ನೇ ಶೈಕ್ಷಣಿಕ ಸಾಲಿನಲ್ಲಿ ಒಂದನೇ ತರಗತಿಗೆ ದಾಖಲಾತಿ ನೀಡುವ ಸಂಬಂಧ 60 ದಿನಗಳ ಸಡಿಲಿಕೆಯನ್ನು ನೀಡಲಾಗುತ್ತದೆ. ಈ ಸಂಬಂಧ ದಾಖಲಾತಿ ತಂತ್ರಾಂಶದಲ್ಲೂ ಬದಲಾವಣೆ ಮಾಡಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಸದನದಲ್ಲಿ ಆದೇಶದ ಪ್ರತಿಯನ್ನು ಓದಿದರು. 

ಎಲ್​ಕೆಜಿ, ಯುಕೆಜಿಗೂ ಹೊಸ ಕಾನೂನು

ಒಂದನೇ ತರಗತಿ ಮಕ್ಕಳಿಗೆ ಮಾತ್ರವಲ್ಲ, ಎಲ್​ಕೆಜಿ ಮತ್ತು ಯುಕೆಜಿ ಮಕ್ಕಳ ದಾಖಲಾತಿಯಲ್ಲೂ ಮಕ್ಕಳಿಗೆ ತೊಂದರೆಯಾಗುತ್ತಿದೆ. ಅಲ್ಲಿಗೂ ಕೂಡ ಹೊಸದಾಗಿ ಒಂದು ಕಾನೂನನ್ನೂ ನಾವು ಆದಷ್ಟು ಬೇಗ ತಂದು, ಶಾಶ್ವತವಾಗಿ ಒಂದು ಪರಿಹಾರ ಕಂಡುಕೊಳ್ಳುತ್ತೇವೆ. ಸದ್ಯಕ್ಕೆ 6 ವರ್ಷದ ವಯೋಮಿತಿಯಲ್ಲಿ 60 ದಿನಗಳ ಸಡಿಲಿಕೆಯನ್ನು ನೀಡಿದ್ದೇವೆ. ಈ ಮಾಹಿತಿಯನ್ನು ಎಲ್ಲ ಮಕ್ಕಳ ಪಾಲಕರಿಗೆ ಈ ಸದನದ ಮೂಲಕ ನಾನು ನೀಡುತ್ತಿದ್ದೇನೆ ಎಂದು ಮಧು ಬಂಗಾರಪ್ಪ ಹೇಳಿದರು.
ಇನ್ನೂ ಎಲ್​ಕೆಜಿ ಹಾಗೂ ಯುಕೆಜಿ ದಾಖಲಾತಿಗೆ ಯಾವುದೇ ನಿಯಂತ್ರಣ ವ್ಯವಸ್ಥೆ ಇಲ್ಲ. ಮುಂದಿನ ದಿನಗಳಲ್ಲಿ ರೆಗ್ಯೂಲೇಟರಿ ಸಿಸ್ಟಮ್​ ತಂದು ಆ ಸಮಸ್ಯೆಯನ್ನು ಬಗೆಹರಿಸುವುದಾಗಿ ಇದೇ ಸಂದರ್ಭದಲ್ಲಿ ಮಧು ಬಂಗಾರಪ್ಪ ಅವರು ಹೇಳಿದರು.
ಅಂದಹಾಗೆ, ಕೇಂದ್ರ ಸರ್ಕಾರದ ರಾಷ್ಟ್ರೀಯ ಶಿಕ್ಷಣ ನೀತಿ (NEP) ಅನ್ವಯ 1ನೇ ತರಗತಿ ಪ್ರವೇಶಕ್ಕೆ ಜೂನ್ 1ಕ್ಕೆ ಕಡ್ಡಾಯವಾಗಿ 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಜಾರಿಗೆ ತರಲಾಗಿತ್ತು. ಆದರೆ, ಇದರಿಂದ ಲಕ್ಷಾಂತರ ಮಕ್ಕಳಿಗೆ ತೊಂದರೆಯಾಗಲಿದೆ ಎಂಬ ಪೋಷಕರ ಮನವಿಯನ್ನು ಪುರಸ್ಕರಿಸಿ ಸರ್ಕಾರ ಈ ಮಹತ್ವದ ಸಡಿಲಿಕೆ ಘೋಷಿಸಿದೆ.
ಸರ್ಕಾರದ ಈ ಘೋಷಣೆಯಿಂದಾಗಿ 1ನೇ ತರಗತಿಗೆ ದಾಖಲಾಗುವ ಮಕ್ಕಳಿಗೆ ಜೂನ್ 1ಕ್ಕೆ 6 ವರ್ಷ ತುಂಬಲು ಕೇವಲ 60 ದಿನಗಳು (2 ತಿಂಗಳು) ಬಾಕಿ ಇದ್ದರೂ ಸಹ ಅಂತಹ ಮಕ್ಕಳಿಗೆ ಪ್ರವೇಶ ನೀಡಲು ಸರ್ಕಾರ ಅನುಮತಿ ನೀಡಿದೆ. ಅಂದರೆ, ಜೂನ್ 1ರ ಬದಲಾಗಿ ಆಗಸ್ಟ್ 1ರ ಒಳಗೆ 6 ವರ್ಷ ಪೂರ್ಣಗೊಳಿಸುವ ಮಕ್ಕಳು ಕೂಡ ಈ ವರ್ಷ 1ನೇ ತರಗತಿಗೆ ಸೇರಬಹುದಾಗಿದೆ.