ಜೈಲಿಗೆ ಕಳುಹಿಸಲು ತೆರೆಮರೆಯಲ್ಲಿ ಸಂಚು: ಯಾವುದೇ ಕಾರಣಕ್ಕೂ ಬಿಡದಿ ಟೌನ್‌ಶಿಪ್ ಯೋಜನೆ ನಿಲ್ಲಲ್ಲ ಅಂದ್ರು ಸಿಎಂ ಡಿಕೆಶಿ! Bidadi Township Project
- ಬಿಡದಿ ಟೌನ್‌ಶಿಪ್ ನಿಲ್ಲಿಸುವುದಿಲ್ಲ ಸಮಿತಿ ರಚಿಸಿ ಎರಡು ತಿಂಗಳಲ್ಲಿ ವರದಿ ಪಡೆಯಲಾಗುವುದು ಎಂದ ಸಿಎಂ ಡಿ ಕೆ ಶಿವಕುಮಾರ್
- ರೆಡ್ ಝೋನ್ ಆದೇಶ ಬದಲಿಸಲ್ಲ ರೈತರು ರಾಜಕೀಯಕ್ಕೆ ಬಲಿಯಾಗದೆ ಧರಣಿ ಕೈಬಿಟ್ಟು ಬದುಕು ಕಟ್ಟಿಕೊಳ್ಳಿ ಎಂದು ಸಿಎಂ ಸಲಹೆ
- ತಮ್ಮನ್ನು ಜೈಲಿಗೆ ಕಳುಹಿಸಲು ನಡೆದ ತೆರೆಮರೆಯ ಸಂಚನ್ನು ಮುಂದಿನ ದಿನಗಳಲ್ಲಿ ಬಯಲಿಗೆಳೆಯುವುದಾಗಿ ಡಿ ಕೆ ಶಿವಕುಮಾರ್ ಎಚ್ಚರಿಕೆ
- ಸಮಿತಿ ರಚನೆಯು ಸರ್ಕಾರದ ಕಣ್ಣೊರೆಸುವ ತಂತ್ರವಾಗಿದ್ದು ಹಿಂಬಾಗಿಲಿನಿಂದ ಭೂಸ್ವಾಧೀನ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದ ನಿಖಿಲ್ ಕುಮಾರಸ್ವಾಮಿ
Bidadi Township Project : ರೈತರ ತೀವ್ರ ವಿರೋಧ ಹಾಗೂ ಪ್ರತಿಭಟನೆಯ ನಡುವೆಯೂ ಬಹುನಿರೀಕ್ಷಿತ ಬಿಡದಿ ಟೌನ್‌ಶಿಪ್ ಯೋಜನೆಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದು, ಯೋಜನೆಯ ರೂಪುರೇಷೆಗಾಗಿ ವಿಶೇಷ ಸಮಿತಿಯೊಂದನ್ನು ರಚಿಸಿ ಎರಡು ತಿಂಗಳ ಒಳಗಾಗಿ ವರದಿ ಪಡೆಯಲಾಗುವುದು ಎಂದು ತಿಳಿಸಿದ್ದಾರೆ.
ಇಂದು ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಸಿಎಂ ಡಿಕೆಶಿ, ರೈತರು ಸ್ವಇಚ್ಛೆಯಿಂದ ಭೂಮಿ ನೀಡಿದರೆ ಮಾತ್ರ ಪಡೆಯಲಾಗುವುದು ಹಾಗೂ ನಿಯಮಾವಳಿಗಳ ಪ್ರಕಾರ ರೆಡ್ ಝೋನ್ ಮುಂದುವರಿಯಲಿದ್ದು, ಅದನ್ನು ಯಾವುದೇ ಕಾರಣಕ್ಕೂ ತೆಗೆಯುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ರೈತರು ರಾಜಕೀಯಕ್ಕೆ ಬಲಿಯಾಗದೆ ಧರಣಿ ಕೈಬಿಟ್ಟು ತಮ್ಮ ಬದುಕು ಕಟ್ಟಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಇತ್ತೀಚೆಗೆ ಬಿಡದಿಯಲ್ಲಿ ನಡೆದ ಪ್ರತಿಭಟನಾ ಘಟನೆಗಳು ತಮಗೆ ತೀವ್ರ ಬೇಸರ ತರಿಸಿವೆ ಎಂದಿರುವ ಡಿಕೆಶಿ, ಈ ಯೋಜನೆಗೆ ತಾವೇನೂ ಅಡಿಪಾಯ ಹಾಕಿಲ್ಲ ಮತ್ತು ಇದು ತಮ್ಮ ವೈಯಕ್ತಿಕ ಕನಸಿನ ಯೋಜನೆಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಹಿಂದೆ ಆಡಳಿತ ನಡೆಸಿದ ಹಲವು ಮುಖ್ಯಮಂತ್ರಿಗಳು ತೆಗೆದುಕೊಂಡಿದ್ದ ನಿರ್ಧಾರಗಳನ್ನೇ ತಾವು ಮುಂದುವರಿಸುತ್ತಿರುವುದಾಗಿ ತಿಳಿಸಿರುವ ಸಿಎಂ, ಸದ್ಯದ ರಾಜಕೀಯ ಜಟಾಪಟಿಗಳ ನಡುವೆ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ವಿಶೇಷ ಸಮಿತಿ ರಚನೆಯ ನಿರ್ಧಾರಕ್ಕೆ ಮುಂದಾಗಿದ್ದಾರೆ.
ತಾವು ಸದ್ಯ ಕೃಷಿಯಲ್ಲಿ ತೊಡಗಿಸಿಕೊಳ್ಳದಿದ್ದರೂ ಮೂಲತಃ ರೈತನ ಮಗನಾಗಿದ್ದು, ಅನ್ನದಾತರ ಸಂಕಷ್ಟಗಳ ಅರಿವು ತಮಗಿದೆ ಎಂದು ಸಿಎಂ ನೆನಪಿಸಿಕೊಂಡಿದ್ದಾರೆ. ಇದೇ ವೇಳೆ ತಮ್ಮ ರಾಜಕೀಯ ವಿರೋಧಿಗಳ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸಿದ ಅವರು, ತಾವು ರಾಜ್ಯದ ಮುಖ್ಯಮಂತ್ರಿಯಾಗಿರುವುದನ್ನು ಸಹಿಸಿಕೊಳ್ಳಲು ಕೆಲವರಿಂದ ಸಾಧ್ಯವಾಗುತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ. ತಮ್ಮ ಏಳಿಗೆಯನ್ನು ಸಹಿಸದ ವಿರೋಧಿಗಳು ತಮ್ಮನ್ನು ನೋಡಿ ರಾತ್ರಿ ನಿದ್ದೆಯಿಲ್ಲದೆ ಒದ್ದಾಡುತ್ತಿದ್ದಾರೆ ಎಂದು ಟೀಕಿಸಿರುವ ಅವರು, ಬಿಡದಿ ಯೋಜನೆ ನೆಪದಲ್ಲಿ ತಮ್ಮ ವಿರುದ್ಧ ರಾಜಕೀಯ ರಾಜಕೀಯ ಮೇಲಾಟ ನಡೆಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಮ್ಮನ್ನು ರಾಜಕೀಯವಾಗಿ ಮುಗಿಸಲು ಹಾಗೂ ಜೈಲಿಗೆ ಕಳುಹಿಸಲು ತೆರೆಮರೆಯಲ್ಲಿ ನಡೆದ ದೊಡ್ಡ ಸಂಚುಗಳ ಕುರಿತು ಮುಂಬರುವ ದಿನಗಳಲ್ಲಿ ಸಾರ್ವಜನಿಕವಾಗಿ ಸತ್ಯಾಂಶವನ್ನು ಬಯಲಿಗೆಳೆಯುವುದಾಗಿ ಸಿಎಂ ಇದೇ ಸಂದರ್ಭದಲ್ಲಿ ಗುಡುಗಿದ್ದಾರೆ. ಜೈಲಿಗೆ ಹೋಗುವುದು ತಮಗೇನು ಹೊಸದಲ್ಲ ಎಂದಿರುವ ಅವರು, ವಿರೋಧಿಗಳ ಇಂತಹ ಪಿತೂರಿಗಳಿಗೆ ತಾವು ಹೆದರುವುದಿಲ್ಲ ಎಂದು ಎಚ್ಚರಿಸಿದ್ದಾರೆ. ಒಟ್ಟಾರೆಯಾಗಿ, ಬಿಡದಿ ಟೌನ್‌ಶಿಪ್ ವಿವಾದವು ಇದೀಗ ಕೇವಲ ಜಮೀನು ಸ್ವಾಧೀನದ ವಿಷಯವಾಗಿ ಉಳಿಯದೆ, ಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ನಡುವಿನ ನೇರ ಜಿದ್ದಾಜಿದ್ದಿಗೆ ಕಾರಣವಾಗಿದ್ದು, ಕರ್ನಾಟಕ ರಾಜಕೀಯದಲ್ಲಿ ಭಾರೀ ಕುತೂಹಲ ಕೆರಳಿಸಿದೆ.
ನಿಖಿಲ್ ಆಕ್ರೋಶ
ಸಿಎಂ ಡಿಕೆಶಿ ಸುದ್ದಿಗೋಷ್ಠಿ ಬೆನ್ನಲ್ಲೇ ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಕಿಡಿಕಾರಿದ್ದಾರೆ. ಮಾಧ್ಯಮಗಳ ಮುಂದೆ ಕೈಯಲ್ಲಿ ಪೆನ್ನು-ಪೇಪರ್ ಹಿಡಿದು, ಜಿಬಿಐಟಿ ಯೋಜನೆ ಮರುಪರಿಶೀಲನೆಗೆ ಸಮಿತಿ ರಚಿಸುತ್ತೇವೆ ಎಂದು ಸಿಎಂ ಶ್ರೀ ಡಿ.ಕೆ. ಶಿವಕುಮಾರ್ ಸರ್ ಅವರು ಕಣ್ಣೊರೆಸುವ ತಂತ್ರ ಮಾಡುತ್ತಿದ್ದಾರೆ. ಆದರೆ, ಬೆನ್ನ ಹಿಂದೆಯೇ ಬನ್ನಿಗಿರಿ, ಅಲ್ಲಾಸಂದ್ರ ಹಾಗೂ ಕೆ.ಜಿ.ಗೊಲ್ಲರಪಾಳ್ಯ ಗ್ರಾಮಗಳ ಭೂಸ್ವಾಧೀನಕ್ಕೆ ಹಿಂಬಾಗಿಲಿನಿಂದ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಒಂದೆಡೆ ರೈತರ ಮೇಲೆ ಮೊಸಳೆ ಕಣ್ಣೀರು ಸುರಿಸುತ್ತಾ, ಇನ್ನೊಂದೆಡೆ ಅವರ ಬದುಕಿಗೆ ಕೊಳ್ಳಿ ಇಡುವ ಈ ವಂಚನೆಯ ನಾಟಕವನ್ನು ಒಪ್ಪಲು ಸಾಧ್ಯವೇ ಇಲ್ಲ. ಜೆಡಿಎಸ್ ಸದಾ ರೈತರ ಪರವಾಗಿ ನಿಲ್ಲಲಿದ್ದು, ಸರ್ಕಾರದ ಈ ದ್ರೋಹದ ವಿರುದ್ಧ ಉಗ್ರ ಹೋರಾಟ ನಡೆಸಲಿದೆ ಎಂದಿದ್ದಾರೆ.
ಸತ್ಯಾಗ್ರಹ ಮಾಡುವುದಾಗಿ ಎಚ್ಡಿಡಿ ಎಚ್ಚರಿಕೆ
ಬಿಡದಿ ಉಪನಗರ ಯೋಜನೆಗೆ ಸಂಬಂಧಿಸಿದಂತೆ ರಾಮನಗರದಲ್ಲಿ ರೈತರ ವಿರುದ್ಧ ಎಫ್‌ಐಆರ್ ದಾಖಲಾಗಿರುವುದಕ್ಕೆ ತೀವ್ರ ನೋವು ವ್ಯಕ್ತಪಡಿಸಿ ನಿನ್ನೆ ಸುದ್ದಿಗೋಷ್ಠಿ ನಡೆಸಿದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸುವ ಸಂದರ್ಭದಲ್ಲಿ ಕಾಂಗ್ರೆಸ್ ಹೈಕಮಾಂಡ್‌ಗೆ ನೀಡಿದ್ದ ಆಶ್ವಾಸನೆಯನ್ನು ಈಡೇರಿಸಲು ಮತ್ತು ಅದಕ್ಕೆ ಬೇಕಾದ ಹಣ ಹೊಂದಿಸಲು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಬಿಡದಿ ಟೌನ್‌ಶಿಪ್ ಹೆಸರಿನಲ್ಲಿ ಕೃಷಿ ಭೂಮಿ ವಶಪಡಿಸಿಕೊಳ್ಳಲು ಕೈ ಹಾಕಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಈಗಾಗಲೇ ಈ ಯೋಜನೆ ವಿರೋಧಿಸಿ ಸಿಎಂಗೆ ಪತ್ರ ಬರೆದಿದ್ದರೂ ಯಾವುದೇ ಹಿಂಬರಹ ಬಂದಿಲ್ಲ ಎಂದು ಅಸಮಾಧಾನ ಹೊರಹಾಕಿರುವ ಅವರು, ರೈತರ ಮೇಲಿನ ಎಫ್‌ಐಆರ್ ಅನ್ನು ತಕ್ಷಣವೇ ವಾಪಸ್ ಪಡೆಯಬೇಕು ಹಾಗೂ ಯೋಜನೆಯನ್ನು ಕೈಬಿಡಬೇಕು, ಇಲ್ಲದಿದ್ದರೆ ವಿಧಾನಸೌಧದ ಎದುರು ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಸಿದ್ದಾರೆ. ಸದ್ಯ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ ಅವರು ಪ್ರವಾಸದಲ್ಲಿದ್ದರೂ ರೈತರ ಶಾಂತಿಯುತ ಹೋರಾಟಕ್ಕೆ ಸಂಪೂರ್ಣ ಬೆಂಬಲ ಘೋಷಿಸಿದ್ದು, ಈ ಬಿಡದಿ ಹೋಬಳಿ ಹೋರಾಟಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಆರ್. ಅಶೋಕ್ ಸಹ ಬೆಂಬಲ ಸೂಚಿಸಿರುವುದಕ್ಕೆ ದೇವೇಗೌಡರು ಧನ್ಯವಾದ ಅರ್ಪಿಸಿದ್ದಾರೆ.
ಕಾನೂನು ಹೋರಾಟದ ಮೂಲಕವೇ ಉತ್ತರ
ಬಿಡದಿ ಮಂಡಲಹಳ್ಳಿ ಗ್ರಾಮದ ರೈತರ ಮೇಲೆ ಅಕ್ರಮವಾಗಿ ಎಫ್ಐಆರ್ ದಾಖಲಿಸಿರುವುದನ್ನು ತೀವ್ರವಾಗಿ ಖಂಡಿಸಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು, ನಾಡಿದ್ದು ತಾವೇ ಖುದ್ದಾಗಿ ಆ ಹಳ್ಳಿಗೆ ಭೇಟಿ ನೀಡುವುದಾಗಿ ತಿಳಿಸಿದ್ದು, ತಾಕತ್ತಿದ್ದರೆ ತಮ್ಮ ವಿರುದ್ಧವೇ ಪ್ರಕರಣ ದಾಖಲಿಸಲಿ ಎಂದು ಸರ್ಕಾರಕ್ಕೆ ಮುಖಾಮುಖಿ ಸವಾಲು ಹಾಕಿದ್ದಾರೆ. ನವದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಧಿಕಾರಿಗಳು ಸರ್ಕಾರದ ಕುಮ್ಮಕ್ಕಿನಿಂದಲೇ ಭೂಮಿ ಸರ್ವೆ ಮಾಡಲು ಬಂದಾಗ ರೈತರು ಸಹಜವಾಗಿಯೇ ಪ್ರತಿಭಟಿಸಿದ್ದಾರೆ, ಆದರೆ ಈ ಹೋರಾಟದ ಹಿಂದೆ ತಮ್ಮ ಪ್ರಚೋದನೆಯಿದೆ ಎಂದು ಬಿಂಬಿಸುತ್ತಿರುವವರು ಧೈರ್ಯವಿದ್ದರೆ ತಮ್ಮನ್ನೇ ಈ ಪ್ರಕರಣದಲ್ಲಿ ಮೊದಲ ಆರೋಪಿಯನ್ನಾಗಿ ಮಾಡಲಿ ಎಂದು ಆಕ್ರೋಶ ಹೊರಹಾಕಿದ್ದಾರೆ. ಘಟನೆಯ ಸಮಯದಲ್ಲಿ ಊರಲ್ಲೇ ಇಲ್ಲದವರ ಮೇಲೂ ಸುಳ್ಳು ಕೇಸ್ ದಾಖಲಿಸಿ ಬೆದರಿಸುವ ತಂತ್ರಕ್ಕೆ ತಾವು ಮಣಿಯುವುದಿಲ್ಲ ಎಂದಿರುವ ಅವರು, ಕಾನೂನು ಹೋರಾಟದ ಮೂಲಕವೇ ಇದಕ್ಕೆ ತಕ್ಕ ಉತ್ತರ ನೀಡುವುದಾಗಿ ತಿಳಿಸುತ್ತಾ, ರೈತರು ಯಾವುದೇ ಆತಂಕಕ್ಕೆ ಒಳಗಾಗದೆ ಶಾಂತಿಯುತವಾಗಿ ಹೋರಾಟ ಮುಂದುವರಿಸುವಂತೆ ಕರೆ ನೀಡಿದ್ದಾರೆ.