ಸಾರ್ವಜನಿಕರ ಅಭಿಪ್ರಾಯ ಪರಿಶೀಲಿಸಲು ನ್ಯಾಯಮೂರ್ತಿ ಗುಹನಾಥನ್ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ರಚನೆ
- ಬಿಡದಿ ಟೌನ್‌ಶಿಪ್ ವಿವಾದ
- ಸಾರ್ವಜನಿಕರ ಅಭಿಪ್ರಾಯ ಪರಿಶೀಲಿಸಲು ನ್ಯಾಯಮೂರ್ತಿ ಗುಹನಾಥನ್ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ರಚನೆ
- ಮಾಹಿತಿ ಹಂಚಿಕೊಂಡ ಸಿಎಂ ಡಿ.ಕೆ. ಶಿವಕುಮಾರ್
ಬೆಂಗಳೂರು: ಕಳೆದ ಕೆಲ ತಿಂಗಳುಗಳಿಂದ ಬಿಡದಿ ಟೌನ್ ಶಿಪ್ (Bidadi Township) ಗೆ ಸಂಬಂಧಿಸಿದಂತೆ ಬಿಡದಿ ಸುತ್ತ ಮುತ್ತಲಿನಲ್ಲಿನ ನಿವಾಸಿಗಳಲ್ಲಿ ಸರ್ಕಾರದ ವಿರುದ್ಧ ಅಕ್ರೋಶ ಹೊರಹೊಮ್ಮುತ್ತಿರುವ ಹಿನ್ನಲೆ ಜನರ ಅಭಿಪ್ರಾಯ ಪರಿಶೀಲನೆಗೆ ರಾಜ್ಯ ಸರ್ಕಾರ ಮುಂದಾಗಿದೆ.
ಬಿಡದಿ ಟೌನ್ ಶಿಪ್ (ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ) ಯೋಜನೆ ವಿಚಾರವಾಗಿ ವ್ಯಕ್ತವಾಗುತ್ತಿರುವ ವಿಭಿನ್ನ ಅಭಿಪ್ರಾಯಗಳನ್ನು ಪರಿಶೀಲಿಸಿ ವರದಿ ನೀಡಲು ನ್ಯಾಯಮೂರ್ತಿ ಗುಹನಾಥನ್ ನರೇಂದರ್ ನೇತೃತ್ವದ ಸಮಿತಿ ರಚಿಸಲು ಸರ್ಕಾರ ಆದೇಶಿಸಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಈ ಸಮಿತಿಯಲ್ಲಿ ನಿವೃತ್ತ ಮುಖ್ಯಕಾರ್ಯದರ್ಶಿಗಳಾದ ಎಸ್.ವಿ. ರಂಗನಾಥ್, ನಿವೃತ್ತ ಅಪರ ಮುಖ್ಯ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್, ನಿವೃತ್ತ ಐಎಎಸ್ ಅಧಿಕಾರಿ ಪ್ರಸನ್ನಕುಮಾರ್ ಸದಸ್ಯರಾಗಿರುತ್ತಾರೆ.
ಈ ಸಮಿತಿಯು ಬಿಡದಿ ಜನರನ್ನು ಸಂಪರ್ಕಿಸಿ ಅವರ ಅಭಿಪ್ರಾಯವನ್ನು ದಾಖಲಿಸಿ ಮುಂದಿನ 30 ದಿನಗಳಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ ಎಂದು ಡಿಕೆಶಿ ತಿಳಿಸಿದ್ದಾರೆ.
ಸದರಿ ಯೋಜನೆಯನ್ನು ಕಾನೂನಾತ್ಮಕ, ಮಾನವೀಯತೆ ಹಾಗೂ ಸಮಗ್ರ ಅಭಿವೃದ್ಧಿಯ ಚೌಕಟ್ಟಿನಲ್ಲಿ ವಿಶ್ಲೇಷಣೆಗೊಳಪಡಿಸಿ ತನ್ನ ಶಿಫಾರಸ್ಸನ್ನು ನೀಡಲಿದೆ.
ಯೋಜನೆಯನ್ನು ಜನಸ್ನೇಹಿಯಾಗಿ ಜಾರಿಗೊಳಿಸಲು ಸಾರ್ವಜನಿಕರ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಮನ್ನಣೆ ನೀಡುವುದಾಗಿ ನಮ್ಮ ಸರ್ಕಾರ ಈಗಾಗಲೇ ಸ್ಪಷ್ಟಪಡಿಸಿದೆ.
ಆದರೆ, ಜನರ ಆಶೋತ್ತರಗಳನ್ನು ಗೌರವಿಸಿ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಈ ಯೋಜನೆಯನ್ನು ಮತ್ತಷ್ಟು ಉತ್ತಮವಾಗಿ ರೂಪಿಸುವುದು ನಮ್ಮ ಸರ್ಕಾರದ ಆಶಯವಾಗಿದ್ದು, ಈ ಹಿನ್ನೆಲೆಯಲ್ಲಿ ನಾವು ಈ ಸಮಿತಿಯನ್ನು ರಚಿಸಿದ್ದೇವೆ ಎಂದಿ ಮುಖ್ಯಮಂತ್ರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.