ಬೆಂಗಳೂರು: ಬಿಡದಿ ಟೌನ್‌ಶಿಪ್(Bidadi Township) ಯೋಜನೆ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿಧಾನಸೌಧದಲ್ಲಿ ಚರ್ಚೆಗೆ ಆಹ್ವಾನ ನೀಡಿದ್ದರೂ, ಬೈರಮಂಗಲದಲ್ಲೇ ಬಹಿರಂಗ ಚರ್ಚೆ ನಡೆಸುವಂತೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಒತ್ತಾಯಿಸುತ್ತಿರುವುದು ಬಾಲಿಶ ವರ್ತನೆ ಎಂದು ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ಟೀಕಿಸಿದ್ದಾರೆ.
ಬೆಂಗಳೂರಿನಲ್ಲಿ ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಬಾಲಕೃಷ್ಣ, "ಒಬ್ಬ ಹಿರಿಯ ನಾಯಕನಿಗೆ ಇರಬೇಕಾದ ಕನಿಷ್ಠ ಸಾಮಾನ್ಯ ಜ್ಞಾನವೂ ಇಲ್ಲದಂತೆ ವರ್ತಿಸುತ್ತಿದ್ದಾರೆ" ಎಂದು ಹೇಳಿದರು.
ಬೈರಮಂಗಲದಲ್ಲಿ ಚರ್ಚೆ ನಡೆಸಲು ಡಿ.ಕೆ. ಶಿವಕುಮಾರ್ ಹೋದರೆ ಎರಡೂ ಪಕ್ಷಗಳ ಕಾರ್ಯಕರ್ತರು ದೊಡ್ಡ ಸಂಖ್ಯೆಯಲ್ಲಿ ಸೇರುತ್ತಾರೆ. ಈ ವೇಳೆ ಘರ್ಷಣೆ ನಡೆದರೆ ಪರಿಸ್ಥಿತಿ ಕೈಮೀರುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು.
‘ಇದು ರೈತರ ಹೋರಾಟವಲ್ಲ, ರಾಜಕೀಯ ವಿಚಾರವಾಗಿದೆ’
ಬಿಡದಿ ಟೌನ್‌ಶಿಪ್ ವಿಚಾರ ಆರಂಭದಲ್ಲಿ ರೈತರ ಸಮಸ್ಯೆಯಾಗಿತ್ತು. ಆದರೆ ಈಗ ಅದನ್ನು ರಾಜಕೀಯ ವಿಷಯವನ್ನಾಗಿ ಮಾಡಲಾಗಿದೆ ಎಂದು ಬಾಲಕೃಷ್ಣ ಆರೋಪಿಸಿದರು. "ರಾಜಕೀಯ ನಾಯಕರು ಮತ್ತು ಪಕ್ಷದ ಕಾರ್ಯಕರ್ತರು ಸೇರಿಕೊಂಡ ಬಳಿಕ ಮೂಲ ವಿಚಾರವೇ ದಿಕ್ಕು ತಪ್ಪಿದೆ. ಈಗ ರೈತರ ಪ್ರಶ್ನೆಗಿಂತ ರಾಜಕೀಯ ಹೆಚ್ಚು ಕಾಣುತ್ತಿದೆ" ಎಂದು ಹೇಳಿದರು.
ವಿಧಾನಸೌಧದಲ್ಲೇ ಚರ್ಚೆಗೆ ಒತ್ತಾಯ
ಸತ್ಯಾಸತ್ಯತೆ ಜನರಿಗೆ ತಿಳಿಯಬೇಕಾದರೆ ವಿಧಾನಸೌಧದಲ್ಲಿ ಅಥವಾ ಮಾಧ್ಯಮಗಳ ಎದುರು ದಾಖಲೆಗಳೊಂದಿಗೆ ಕುಳಿತು ಚರ್ಚೆ ಮಾಡಲಿ ಎಂದು ಸವಾಲು ಹಾಕಿದರು. "ನಾವೂ ಅಂಕಿ-ಅಂಶಗಳೊಂದಿಗೆ ಬರುತ್ತೇವೆ. ಎಲ್ಲ ವಿಚಾರಗಳನ್ನು ಸಾರ್ವಜನಿಕವಾಗಿ ಚರ್ಚೆ ಮಾಡಬಹುದು" ಎಂದು ಹೇಳಿದರು.
‘ಬಿಡದಿಗಷ್ಟೇ ಯಾಕೆ ಹೋರಾಟ?’
ರಾಜ್ಯದ ಹಲವು ಭಾಗಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆಗಳು ನಡೆದಿವೆ. ಸರ್ಜಾಪುರ, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ನಂಜನಗೂಡು ಸೇರಿದಂತೆ ಹಲವು ಕಡೆ ರೈತರು ಸಮಸ್ಯೆ ಎದುರಿಸುತ್ತಿದ್ದಾರೆ. ಆದರೆ ಕುಮಾರಸ್ವಾಮಿ ಮತ್ತು ನಿಖಿಲ್ ಕುಮಾರಸ್ವಾಮಿ ಬಿಡದಿ ವಿಷಯವನ್ನಷ್ಟೇ ಹಿಡಿದುಕೊಂಡಿರುವುದು ಯಾಕೆ ಎಂದು ಪ್ರಶ್ನಿಸಿದರು. "ಬೇರೆ ಕಡೆ ನಡೆದ ಭೂಸ್ವಾಧೀನಗಳ ವಿರುದ್ಧ ಹೋರಾಟ ಮಾಡಿಲ್ಲ. ಬಿಡದಿಯಲ್ಲೇ ಏಕೆ ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ?" ಎಂದು ಕೇಳಿದರು.
ಡಿಕೆಶಿ ವಿರುದ್ಧ ರಾಜಕೀಯ ಉದ್ದೇಶದ ಆರೋಪ
ಕೆಲವರು ಹೊರ ಜಿಲ್ಲೆಗಳಿಂದ ಜನರನ್ನು ಕರೆತಂದು ಹೋರಾಟ ನಡೆಸುತ್ತಿದ್ದಾರೆ ಎಂದು ಆರೋಪಿಸಿದ ಬಾಲಕೃಷ್ಣ, ಮೂಲ ರೈತರ ಹೋರಾಟಕ್ಕೆ ರಾಜಕೀಯ ಬಣ್ಣ ಬಳಿಯಲಾಗಿದೆ ಎಂದು ಹೇಳಿದರು. "ಡಿ.ಕೆ. ಶಿವಕುಮಾರ್ ಅವರಿಗೆ ಕೆಟ್ಟ ಹೆಸರು ತರಬೇಕು, ಜಿಲ್ಲೆಯ ರಾಜಕೀಯದಲ್ಲಿ ತೊಂದರೆ ಉಂಟು ಮಾಡಬೇಕು ಎಂಬ ಉದ್ದೇಶದಿಂದ ಈ ವಿಚಾರವನ್ನು ಬಳಸಿಕೊಳ್ಳಲಾಗುತ್ತಿದೆ" ಎಂದು ಆರೋಪಿಸಿದರು.
ಬಿಡದಿ ಟೌನ್‌ಶಿಪ್ ಯೋಜನೆ ಕುರಿತ ವಿವಾದ ರಾಜಕೀಯವಾಗಿ ತೀವ್ರ ಸ್ವರೂಪ ಪಡೆಯುತ್ತಿದ್ದು, ಆಡಳಿತಾರೂಢ ಕಾಂಗ್ರೆಸ್ ಮತ್ತು ಜೆಡಿಎಸ್-ಬಿಜೆಪಿ ನಾಯಕರ ನಡುವಿನ ವಾಗ್ವಾದ ಮತ್ತಷ್ಟು ಹೆಚ್ಚಾಗಿದೆ.