ಹೆಚ್.ಡಿ.ಕುಮಾರಸ್ವಾಮಿ ಮತ್ತು ಎಂ.ಬಿ.ಪಾಟೀಲ್
ಬೆಂಗಳೂರು: ಬಿಡದಿ ಟೌನ್ಶಿಪ್ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರ ಮತ್ತು ವಿಪಕ್ಷಗಳ ನಡುವೆ ಆರೋಪ, ಪ್ರತ್ಯಾರೋಪ ಮುಂದುವರೆದಿದ್ದು, 2006ರಲ್ಲಿ ಹೆಚ್ಡಿಕೆಯವರೇ ಟೌನ್ಶಿಪ್ ಆರಂಭಿಸಿದ್ದು, ಈಗ ರಾಜಕೀಯ ಮಾಡ್ತಿದ್ದಾರೆ ಎಂದು ಭಾನುವಾರ(ಜೂ. 28) ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್(M B Patil) ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಈ ಕುರಿತು ಮಾತನಾಡಿರುವ ಅವರು, ಬಿಡದಿ ವಿಚಾರವಾಗಿ ಹಲವು ಬಾರಿ ಮಾತನಾಡಿದ್ದೇನೆ. ನನ್ನ ಇಲಾಖೆಯ ವಿಚಾರವಾಗಿದೆ. 2006ರಲ್ಲಿ ಕುಮಾರಸ್ವಾಮಿಯವರೇ ಬಿಡದಿ ಟೌನ್ಶಿಪ್ ಪ್ರಾರಂಭ ಮಾಡಿದ್ದು, ನಂತ್ರ ಡಿಎಲ್ಆಫ್ ಅವರಿಗೆ ಕೊಟ್ಟಿದ್ದರು. ಅವರು ಹಣ ಕಟ್ಟಿ ಆಗಲ್ಲ ಅಂತ ವಾಪಸ್ಸು ತೆಗೆದುಕೊಂಡು ಹೋದ್ರು, ಬಳಿಕ ಐಟಿಬಿಟಿ ಅವರಿಗೆ ಕೊಟ್ರು, ಅವರು ಸಹ ಮಾಡಲಾಗಲ್ಲ ಎಂದಿದ್ದರು. ಮುಂದೆ ಹಾಗೆ ನಡೆದುಕೊಂಡು ಬಂದಿದೆ ಎಂದಿದ್ದಾರೆ.
ಕೆಐಎಡಿಬಿಯಿಂದ ಭೂಮಿಯನ್ನು ನೋಟಿಫೈ ಮಾಡಿದ್ದೆವು, ಆದರೆ ಸ್ವಾಧೀನ ಮಾಡಿಕೊಂಡಿರಲಿಲ್ಲ. ಡಿ.ಕೆ.ಶಿವಕುಮಾರ್ ಉಪಮುಖ್ಯಮಂತ್ರಿಯಾದ ಬಳಿಕ ಬಿಡದಿಯಲ್ಲಿ ಟೌನ್ಶಿಪ್ ಮಾಡಬೇಕು, ಬೆಂಗಳೂರಿನ ಒತ್ತಡ ಕಮ್ಮಿ ಮಾಡಬೇಕು ಎಂದು ಟೌನ್ಶಿಪ್ ನಿರ್ಮಾಣವನ್ನು ಕೈಗೆತ್ತಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಬಿಡದಿ ವಿಚಾರದಲ್ಲಿ ಮಾತನಾಡಲು ಕುಮಾರಸ್ವಾಮಿಯವರಿಗೆ ಯಾವುದೇ ನೈತಿಕ ಹಕ್ಕು ಇಲ್ಲ. 2006ರಿಂದ 2026 ಯೋಜನೆಗೆ ಚಾಲನೆ ನೀಡಿ 20 ವರ್ಷ ಆಗಿದೆ. ಈ ನಡುವೆ ಕುಮಾರಸ್ವಾಮಿ ಎರಡು ಬಾರಿ ಸಿಎಂ ಆಗಿದ್ರು, ವಿಜಯೇಂದ್ರ ಅವರ ತಂದೆ ಬಿಎಸ್ವೈ ಸಹ ಸಿಎಂ ಆಗಿದ್ರು, ಬಸವರಾಜ ಬೊಮ್ಮಾಯಿ ಸಹ ಸಿಎಂ ಆಗಿದ್ರೂ ಆಗಲೇ ಇದನ್ನು ಯಾಕೆ ಕೈಬಿಡಲಿಲ್ಲ ಎಂದು ಕಿಡಿಕಾರಿದ್ದಾರೆ.
ಡಿ.ಕೆ.ಶಿವಕುಮಾರ್ ಸಿಎಂ ಆದ ಬಳಿಕ ರೈತರ ಮೇಲೆ ಕಾಳಜಿ ಹುಟ್ಟಿದೆ. ಇದು ಕೇವಲ ರಾಜಕೀಯ ದೃಷ್ಟಿಯಿಂದ ಜಿದ್ದಾಜಿದ್ದಿ ಸೃಷ್ಟಿಸಲಾಗುತ್ತೊದೆ. ಸಿಎಂ ವಿರುದ್ಧ ಜೆಡಿಎಸ್ನವರು ಮಾಡ್ತಿರುವ ಹೋರಾಟ ಇದು. ರೈತರ ಬಗ್ಗೆ ನಾನು ಯಾವುದೇ ಮಾತನಾಡಲ್ಲ. ಅವರಿಗೆ ಕೇಳುವ ಹಕ್ಕಿದೆ. ಆದ್ರೆ ಜೆಡಿಎಸ್ ಮತ್ತು ಬಿಜೆಪಿಯವರು ತಾವು ಅಧಿಕಾರದಲ್ಲಿದ್ದಾಗ ಯಾಕೆ ಈ ಯೋಜನೆ ಕೈಬಿಡಲಿಲ್ಲ. ಈಗ ರಾಜಕೀಯ ಅಸ್ತಿತ್ವಕ್ಕಾಗಿ ಹೋರಾಟ ಮಾಡ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಡಿ.ಕೆ.ಶಿವಕುಮಾರ್ ಸಿಎಂ ಆದ ಬಳಿಕ ಜೆಡಿಎಸ್ನವರಿಗೆ ಆಗ್ತಿಲ್ಲ. ಇಷ್ಟು ದಿನ ಒಕ್ಕಲಿಗರಿಗೆ ನಾವೇ ದಿಕ್ಕು, ಪವರ್ ಆಫ್ ಅಟಾರ್ನಿ ನಮ್ಮ ಹತ್ತಿರ ಇದೆ ಅಂತ ಅಂದುಕೊಂಡಿದ್ದರು. ಈಗ ಡಿಕೆಶಿಯವರು ಸಿಎಂ ಆದ ಬಳಿಕ ಸಂಕಷ್ಟ ಆರಂಭವಾಗಿದೆ. ಅದರ ಪರಿಣಾಮವಾಗಿ ಈ ಹೋರಾಟದ ನಾಟಕ ಮಾಡ್ತಿದ್ದಾರೆ ಎಂದು ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.