ಪಿರಿಯಾಪಟ್ಟಣದ ಗಾಂಧಿನಗರ ಬಡಾವಣೆಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸಚಿವ ಕೆ.ವೆಂಕಟೇಶ್ ಭೂಮಿ ಪೂಜೆ ನೆರವೇರಿಸಿದರು. ಡಿ.ಟಿ.ಸ್ವಾಮಿ, ಬಿ.ಜೆ.ಬಸವರಾಜ್, ಎಚ್.ಕೆ.ಮಂಜುನಾಥ್, ರವಿ, ರತ್ನಮ್ಮ, ಮಹದೇವ್, ತಮ್ಮಣ್ಣಯ್ಯ ಇತರರು ಇದ್ದರು.
ಪಿರಿಯಾಪಟ್ಟಣ: ಪುರಸಭೆ ವ್ಯಾಪ್ತಿಯಲ್ಲಿ ಒಳ ಚರಂಡಿ ವ್ಯವಸ್ಥೆ ಆರಂಭಗೊಂಡಿದ್ದು, ಪ್ರತಿಯೊಬ್ಬರೂ ತಮ್ಮ ಮನೆಗಳಿಗೆ ಸಂಪರ್ಕ ಪಡೆಯಬೇಕು ಎಂದು ಪಶು ಸಂಗೋಪನೆ ಮತ್ತು ರೇಷ್ಮೆ ಖಾತೆ ಸಚಿವ ಕೆ.ವೆಂಕಟೇಶ್ ತಿಳಿಸಿದರು.
ಪಿರಿಯಾಪಟ್ಟಣ ಪುರಸಭೆ ವ್ಯಾಪ್ತಿಯ ವಿವಿಧ ಬಡಾವಣೆಗಳಲ್ಲಿನ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಗಳಿಗೆ ಶನಿವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಪಟ್ಟಣದ ಸಾರ್ವಜನಿಕರ ಹಿತ ದೃಷ್ಟಿಯಿಂದ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಅಂದಾಜು 80 ಕೋಟಿ ರೂ. ವೆಚ್ಚದಲ್ಲಿ ಒಳಚರಂಡಿ ಯೋಜನೆ ಆರಂಭಗೊಂಡಿದ್ದು, ಪ್ರತಿಯೊಬ್ಬರು ಇದರ ಸದುಪಯೋಗ ಪಡೆಯಬೇಕು ಎಂದರು.
ಪುರಸಭೆ ಮಾಹಿತಿಯ ಪ್ರಕಾರ ಈವರೆಗೆ ಕೇವಲ ಶೇ.30 ಮನೆಗಳು ಮಾತ್ರ ಯುಜಿಡಿ ಸಂಪರ್ಕ ಪಡೆದಿದ್ದು, ಪ್ರತಿಯೊಂದು ಮನೆಯವರೂ ಯುಜಿಡಿ ಸಂಪರ್ಕ ಪಡೆದಲ್ಲಿ ಕೊಳಚೆ ನೀರು ರಸ್ತೆ ಮತ್ತು ಚರಂಡಿಗಳಲ್ಲಿ ಹರಿಯುವುದು ತಪ್ಪಲಿದೆ ಎಂದರು.
ಪ್ರತಿ ಮನೆಗೆ ಯುಜಿಡಿ ಸಂಪರ್ಕ ಪಡೆಯಲು ಪುರಸಭೆಯು 3 ಸಾವಿರ ರೂ. ಶುಲ್ಕ ನಿಗದಿ ಮಾಡಿದ್ದು, ಅಧಿಕಾರಿಗಳೊಂದಿಗೆ ಚರ್ಚಿಸಿ ಈ ಶುಲ್ಕದ ಮೊತ್ತವನ್ನು ಮತ್ತಷ್ಟು ಕಡಿಮೆ ಮಾಡಲು ಪ್ರಯತ್ನಿಸುವುದಾಗಿ ತಿಳಿಸಿದರು.
ಪುರಸಭೆ ವ್ಯಾಪ್ತಿಯಲ್ಲಿ ಪ್ರತಿನಿತ್ಯ ಸಂಗ್ರಹವಾಗುತ್ತಿರುವ ಕೊಳಚೆ ನೀರು ಪಟ್ಟಣದ ಅರಸಿನಕೆರೆ ಸೇರುತ್ತಿದ್ದು, ಇದನ್ನು ತಡೆಗಟ್ಟಬೇಕಿದ್ದಲ್ಲಿ ಪ್ರತಿ ಮನೆಯವರು ಯುಜಿಡಿ ಸಂಪರ್ಕ ಪಡೆಯುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ ಪುರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿ ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕಿದೆ ಎಂದರು.
ವಿಶೇಷ ಅನುದಾನದಡಿ ಪಟ್ಟಣದ ಅರಸಿನಕೆರೆಯನ್ನು ಅಭಿವೃದ್ಧಿ ಪಡಿಸಲಾಗುತ್ತಿದ್ದು ವಾಯು ವಿಹಾರಿಗಳಿಗೆ ಮತ್ತು ಜಿಮ್ ಮತ್ತು ಇತರೆ ಚಟುವಟಿಕೆಗಳನ್ನು ಕೈಗೊಳ್ಳಲು ಅನುಕೂಲವಾಗಲಿದೆ. ಅಲ್ಲದೆ ಪಿರಿಯಾಪಟ್ಟಣ ಪುರಸಭೆ ವ್ಯಾಪ್ತಿಯಲ್ಲಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿಗಾಗಿ 12 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಪ್ರತೀ ಬಡಾವಣೆಗಳಲ್ಲೂ ಸಮರ್ಪ ರಸ್ತೆ, ಚರಂಡಿ ವ್ಯವಸ್ಥೆಯನ್ನು ಕೈಗೊಳ್ಳಲು ಮೀಸಲಾಡಲಾಗಿದೆ. ಇನ್ನೂ 10 ಕೋಟಿ ರೂ. ಅನುದಾನಕ್ಕೆ ಮನವಿ ಸಲ್ಲಿಸಲಾಗಿದ್ದು, ಅನುಮೋದನೆ ದೊರೆತ ಕೂಡಲೇ ಹಣ ಬಿಡುಗಡೆಯಾಗಲಿದೆ ಎಂದು ತಿಳಿಸಿದರು.
ರಸ್ತೆ ಮತ್ತು ಚರಂಡಿ ನಿರ್ಮಾಣದ ಗುತ್ತಿಗೆ ಪಡೆಯುವ ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ಮಾಡಬೇಕು ಯಾವುದೇ ರೀತಿಯ ಕಳಪೆ ಕೆಲಸ ಕಂಡುಬಂದಲ್ಲಿ ಸಂಬಂಧಪಟ್ಟ ಇಲಾಖೆಯ ಇಂಜಿನಿಯರ್ ಜವಾಬ್ದಾರರಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪುರಸಭಾ ವ್ಯಾಪ್ತಿಯಲ್ಲಿ ಖಾಸಗಿ ಲೇಔಟ್‌ಗಳನ್ನು ನಿರ್ಮಿಸುತ್ತಿರುವವರು ರಸ್ತೆ, ಚರಂಡಿ, ಯುಜಿಡಿ, ವಿದ್ಯುತ್ ಸೇರಿದಂತೆ ಪ್ರಮುಖ ಮೂಲಸೌಕರ್ಯಗಳನ್ನು ಕಡ್ಡಾಯವಾಗಿ ಕಲ್ಪಿಸಬೇಕು ಎಂದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಟಿ.ಸ್ವಾಮಿ, ಖಜಾಂಚಿ ಬಿ.ಜೆ.ಬಸವರಾಜ್, ನಗರ ಕಾಂಗ್ರೆಸ್ ಘಟಕದ ಅಧ್ಯಕ್ಷ ಎ.ಕೆ.ಗೌಡ, ತಹಸೀಲ್ದಾರ್ ನಿಸರ್ಗ ಪ್ರಿಯ, ತಾಪಂ ಇಒ ಡಿ.ಬಿ.ಸುನಿಲ್ ಕುಮಾರ್, ಮುಖಂಡರಾದ ವಿಷಕಂಠಯ್ಯ, ಎಚ್.ಕೆ.ಮಂಜುನಾಥ್, ರವಿ, ರತ್ನಮ್ಮ, ಚಾಮರಾಜ, ಪಿ.ಎಸ್.ಹರೀಶ್, ಮಹದೇವ್, ತಮ್ಮಣ್ಣಯ್ಯ, ರಾಜೇಶ್, ಟಿ.ಎಸ್.ಹರೀಶ್, ಸುರೇಶ್, ಮಂಜುನಾಥ್, ನೌಷದ್, ಕುಮಾರ್ ಇತರರು ಇದ್ದರು.