ಚಡಚಣ ಪಟ್ಟಣದ ಹೊರವಲಯದಲ್ಲಿ ಕೊಲೆಗೀಡಾದವರ ಅಂತ್ಯಕ್ರೀಯೆ ನೂರಾರು ಜನರ ಸಮ್ಮುಖದಲ್ಲಿ ನೆರವೇರಿತು.
- ಜಮೀನು ವಿವಾದ ಕೊಲೆಯಲ್ಲಿ ಅಂತ್ಯ
- ಎರಡು ಮನೆತನಗಳ ದ್ವೇಷ ಪ್ರಕರಣ
- ಬಲಿಯಾದದ್ದು ಮೂರನೇ ಕುಟುಂಬ
- ಒಂದೇ ಕುಟುಂಬದ ಐವರ ಹತ್ಯೆ
ವಿಜಯಪುರ: ಭೀಮಾತೀರದಲ್ಲಿ ನಡೆದ ಭೀಕರ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ಚಡಚಣ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದ್ದು, ಜಮೀನಿನ ವಿವಾದವೇ ಹತ್ಯೆಗೆ ಪ್ರಮುಖ ಕಾರಣ ಎಂದು ನಮೂದಿಸಲಾಗಿದೆ.
ಚೈತನ್ಯಕುಮಾರ ದುಂಡಪ್ಪ ನಿರಾಳೆ ಎಂಬುವರ ನೀಡಿದ ದೂರಿನ ಅನ್ವಯ ಮೇ 29ರಂದು 12 ಜನರ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ.
ಗೋವಿಂದಪುರದ ಕಲ್ಲನಗೌಡ ಈಶ್ವರಗೌಡ ಪಾಟೀಲ, ಅಪ್ಪುಗೌಡ ಲಗಮನಗೌಡ ಊರ್ಫ್ ಲಕ್ಕನಗೌಡ ಪಾಟೀಲ, ಈಶ್ವರಪ್ಪ ಲಗಮನಗೌಡ ಪಾಟೀಲ, ಪ್ರಕಾಶ ಬಸವರಾಜ ಮಾಸ್ತರ್ ಊರ್ಪ್ ಪಾಟೀಲ, ಪ್ರಶಾಂತ ಊರ್ಫ್ ಪರುಗೌಡ ಬಸವರಾಜ ಮಾಸ್ತರ್ ಊರ್ಫ್ ಪಾಟೀಲ, ಸಿದ್ದರಾಮ ಕಲ್ಲನಗೌಡ ಪಾಟೀಲ, ಲಾಯಪ್ಪ ನೇನಪ್ಪಾ ಬಿರಾದಾರ, ಚಿದಾನಂದಗೌಡ ನಾಮದೇವ ಕೋಲಿ ಊರ್ಫ್ ಟಕ್ಕಲಕಿ, ಮಾಸಿದ್ದ ಶ್ರೀಮಂತ ಬಿರಾದಾರ, ಶ್ರೀಮಂತ ಶಂಕರಪ್ಪ ಬಿರಾದಾರ, ಶಂಕರಪ್ಪ ಮಾದೇವ ಅರಕೇರಿ, ಅಪ್ಪಾಸಾಹೇಬ ಶಂಕರ ಭೋವಿ ಆರೋಪಿಗಳು
ಶುಕ್ರವಾರ ತಡರಾತ್ರಿಯೇ ಉತ್ತರ ವಲಯದ ಐಜಿಪಿ ಸಂದೀಪ ಪಾಟೀಲ ಹಾಗೂ ಎಸ್‌ಪಿ ಲಕ್ಷ್ಮಣ ನಿಂಬರಗಿ ಭೇಟಿ ನೀಡಿ ಪರಿಶೀಲಿಸಿದರು. ತನಿಖೆಗೆ ತಂಡ ರಚಿಸಲಾಗಿದ್ದು, ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸುವುದಾಗಿ ಪ್ರತಿಕ್ರಿಯಿಸಿದರು.
ಎಫ್‌ಐಆರ್‌ನಲ್ಲಿ ಏನಿದೆ?
ಘಟನೆಗೆ ಜಮೀನಿನ ವಿವಾದವೇ ಕಾರಣ ಎಂದು ತಿಳಿಸಲಾಗಿದೆ. ಗೋವಿಂದಪುರದಲ್ಲಿ ನಿವರಗಿ ಗ್ರಾಮದ ಖ್ಯಾಮನಿಂಗ ತೇಲಿ ಕುಟುಂಬಕ್ಕೆ ಸೇರಿದ ಜಮೀನಿತ್ತು. ಸುಮಾರು 5-6 ತಿಂಗಳ ಹಿಂದೆ ತೇಲಿ ಕುಟುಂಬ ನಿರಾಳೆ ಅವರ ಮನೆಗೆ ಬಂದು ಗೋವಿಂದಪುರದಲ್ಲಿ ತಮ್ಮ ಜಮೀನಿದ್ದು, ಈ ಹಿಂದೆ ಕೊಲೆ ಪ್ರಕರಣವೊಂದರ ಹಿನ್ನೆಲೆ ಅಲ್ಲಿ ಉಳುಮೆ ಮಾಡಲಾಗದೇ ಜಮೀನು ಪಾಳುಬಿದ್ದಿದೆ. ಕಲ್ಲನಗೌಡ ಈಶ್ವರಗೌಡ ಪಾಟೀಲ ಹಾಗೂ ಅವರ ಕುಟುಂಬಸ್ಥರು ಉಳಮೆಗೆ ತಕರಾರು ಮಾಡುತ್ತಿದ್ದು, ತಾವು ಜಮೀನು ತೆಗೆದುಕೊಳ್ಳುವುದಿದ್ದರೆ ಖರೀದಿ ಹಾಕಿಕೊಡುವುದಾಗಿ ತಿಳಿಸಿದ್ದರು. ಅದಕ್ಕೆ ಒಪ್ಪಿಕೊಂಡಿದ್ದ ನಿರಾಳೆ ಕುಟುಂಬ ಮೊದಲು ಕಲ್ಲನಗೌಡರಿಗೂ ಈ ಕುರಿತು ತಿಳಿಸಿ ತಂಟೆ-ತಕರಾರು ಏನಾದರೂ ಇದೆಯೇ ಎಂದು ಕೇಳಿತ್ತು. ಆಗ ಯಾವುದೇ ತಕರಾರು ಇಲ್ಲವೆಂದು ಕಲ್ಲನಗೌಡರ ಕುಟುಂಬ ತಿಳಿಸಿತ್ತು. ಹೀಗಾಗಿ ನಿರಾಳೆ ಕುಟುಂಬ ತೇಲಿ ಅವರ ಜಮೀನು ಖರೀದಿಸಿತ್ತು.
ಇದೀಗ ಕಳೆದೊಂದು ವಾರದಿಂದ ಜಮೀನಿನಲ್ಲಿ ಬೆಳೆದಿರುವ ಮುಳ್ಳು ಕಂಟಿ ತೆಗೆದು ಸ್ವಚ್ಛಗೊಳಿಸಲು ಹೋದಾಗ ಕಲ್ಲನಗೌಡ ಪಾಟೀಲ ಹಾಗೂ ಕುಟುಂಬಸ್ಥರು ಅಡ್ಡಿಪಡಿಸಿದರು. ಈ ಬಗ್ಗೆ ತಹಸೀಲ್ದಾರ್ ಕೋರ್ಟ್‌ನಲ್ಲಿಯೂ ದಾವೆ ಹೂಡಲಾಗಿ ನಿರಾಳೆ ಕುಟುಂಬದ ಪರವಾಗಿಯೇ ನ್ಯಾಯ ಸಿಕ್ಕಿತ್ತು. ಹೀಗಾಗಿ ಜಮೀನಿನಲ್ಲಿ ಕೆಲಸ ಮಾಡುತ್ತಿರಬೇಕಾದರೆ ಅಲ್ಲಿಗೆ ಬಂದ ಆರೋಪಿತರು ಖಾರದ ಪುಡಿ ಕಣ್ಣಿಗೆ ಎರಚಿ, ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ.
ಜಮೀನು ವಿವಾದದ ಸುತ್ತ
ನಿರಾಳ ಕುಟುಂಬ ಖರೀದಿಸಿದ್ದ ಜಮೀನಿನ ಹಿಂದಿನ ಹಕೀಕತ್ ಕೂಡ ರೋಚಕವಾಗಿದೆ. ತೇಲಿ ಕುಟುಂಬ ಯುವತಿಯನ್ನು ಕಲ್ಲಿನಗೌಡ ಪಾಟೀಲರ ಪುತ್ರ ಓಡಿಸಿಕೊಂಡು ಹೋಗಿ ಮದುವೆಯಾಗಿದ್ದನು. ಈ ಸಿಟ್ಟಿನಿಂದ ತೇಲಿ ಕುಟುಂಬಸ್ಥರು ಆತನನ್ನು ಟ್ರಾೃಕ್ಟರ್ ಹಾಯಿಸಿ ಸಾಯಿಸಿದ್ದರು. ಈ ಪ್ರಕರಣದಲ್ಲಿ ಜೈಲಿಗೂ ಹೋಗಿ ಬಂದಿದ್ದರು. ಅಲ್ಲಿಯವರೆಗೂ ಆ ಜಮೀನು ಪಾಳು ಬಿದ್ದಿತ್ತು. ಹೀಗಾಗಿ ಆ ಜಮೀನು ಮಾರಾಟ ಮಾಡಲು ಮುಂದಾದಾಗ ನಿರಾಳೆ ಕುಟುಂಬ ಖರೀದಿಸಿತ್ತು. ಪರಿಣಾಮವೇ ಈ ಭೀಕರ ಹತ್ಯಾಕಾಂಡ.
ಮೃತರಾದ ಚಂದು ಊರ್ಫ್ ಚಂದ್ರಕಾಂತ ನಿರಾಳೆ (55), ದುಂಡಪ್ಪ ರೇವಣಸಿದ್ದಪ್ಪ ನಿರಾಳೆ (65), ಶಿವಪುತ್ರ ರೇವಣಸಿದ್ದ ನಿರಾಳೆ (58), ರಾಹುಲ್ ನಿರಾಳೆ (25), ಸಮರ್ಥ ನಿರಾಳೆ (23) ಹಾಗೂ ಶಬ್ಬೀರ ಅತ್ತಾರ (45) ಇವರ ಕಳೆಬರವನ್ನು ಶನಿವಾರ ಮರಣೋತ್ತರ ಪರೀಕ್ಷೆ ಬಳಿಕ ಚಡಚಣದಲ್ಲಿ ಅಂತಿಮ ಸಂಸ್ಕಾರ ನೆರವೇರಿಸಲಾಯಿತು. ಶಬ್ಬೀರನ ಅಂತ್ಯಸಂಸ್ಕಾರವನ್ನು ಮುಸ್ಲಿಂ ಸಂಪ್ರದಾಯದಂತೆ ನೆರವೇರಿಸಲಾಯಿತು.
ಗೋವಿಂದಪುರ ಗ್ರಾಮದಲ್ಲಿ ಶುಕ್ರವಾರ ಮಧ್ಯಾಹ್ನ 2.30ರಿಂದ 3 ರ ಸುಮಾರಿಗೆ ಜಮೀನಿನಲ್ಲಿ ಕೆಲಸ ಮಾಡುವಾಗ ಚಾಕು, ಮಚ್ಚು ಬೇರೆ ಬೇರೆ ಆಯುಧದಿಂದ ಹಲ್ಲೆ ಮಾಡಲಾಗಿದೆ. ಒಂದೇ ಕುಟುಂಬದ ಐವರು ಸೇರಿ ಒಟ್ಟು ಆರು ಜನ ಸ್ಥಳದಲ್ಲಿಯೇ ಮೃತಪಟ್ಟದರೆ ಇನ್ನಿಬ್ಬರು ಗಾಯಗೊಂಡಿದ್ದಾರೆ. ಎಸ್‌ಪಿ ನೇತೃತ್ವದಲ್ಲಿ ತನಿಖಾ ತಂಡ ರಚಿಸಲಾಗಿದೆ. ಆರೋಪಿತರ ಬಗ್ಗೆ ಕೆಲವೊಂದಿಷ್ಟು ಮಾಹಿತಿ ಇದೆ. ಶೀಘ್ರದಲ್ಲೇ ಬಂಧಿಸಲಾಗುವುದು.
— ಸಂದೀಪ ಪಾಟೀಲ, ಐಜಿಪಿ ಉತ್ತರ ವಲಯ