- ಕಾಲೇಜು ವಿದ್ಯಾರ್ಥಿಗಳ ಪರದಾಟ
- ಬಸ್ ನಿಲ್ದಾಣದಲ್ಲಿ ಸಾರಿಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪಾಲಕರು!
ಭೀಮನ ಅಮಾವಾಸ್ಯೆ ಹಿನ್ನೆಲೆಯಲ್ಲಿ ಕುಣಿಗಲ್ ತಾಲೂಕಿನ ಹುಲಿಯೂರುದುರ್ಗ ಪಟ್ಟಣದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಸಾರಿಗೆ ಬಸ್ಸುಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿ, ಕಾಲೇಜು ವಿದ್ಯಾರ್ಥಿಗಳಿಗೆ ಸ್ಥಳಾವಕಾಶ ಸಿಗದೆ ತೀವ್ರ ತೊಂದರೆ ಅನುಭವಿಸಿದರು.
ಮದ್ದೂರು ಹಾಗೂ ಮಂಡ್ಯ ಕಡೆಗೆ ಕಾಲೇಜಿಗೆ ತೆರಳಬೇಕಿದ್ದ ವಿದ್ಯಾರ್ಥಿಗಳು ಬೆಳಿಗ್ಗೆ 7 ರಿಂದ 10 ಗಂಟೆಯವರೆಗೆ Bus ಬಸ್ ನಿಲ್ದಾಣದಲ್ಲಿ ಕಾದು ಕುಳಿತರೂ ಬಸ್ಸುಗಳಲ್ಲಿ ಜಾಗ ಸಿಗಲಿಲ್ಲ.
ತುಮಕೂರು ಹಾಗೂ ಕುಣಿಗಲ್ ಕಡೆಯಿಂದ ಮೈಸೂರು ಮಾರ್ಗವಾಗಿ ಸಂಚರಿಸುವ ಬಸ್ಸುಗಳಲ್ಲಿ, ಪ್ರಸಿದ್ಧ ಗೌಡಗೆರೆ ಚಾಮುಂಡೇಶ್ವರಿ ದೇವಾಲಯಕ್ಕೆ ತೆರಳುವ ಭಕ್ತಾದಿಗಳು ಕಿಕ್ಕಿರಿದು ತುಂಬಿದ್ದರು. ಇದರಿಂದಾಗಿ ಸೂಕ್ತ ಸಮಯಕ್ಕೆ ಕಾಲೇಜಿಗೆ ತೆರಳಲಾಗದೆ ವಿದ್ಯಾರ್ಥಿಗಳು ಪರದಾಡಿದರು.
ವಿಷಯ ತಿಳಿದು ಬಸ್ ನಿಲ್ದಾಣಕ್ಕೆ ಧಾವಿಸಿದ ಪಾಲಕರು, ಸಾರಿಗೆ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಪ್ರತಿನಿತ್ಯ ಇದೇ ಪರಿಸ್ಥಿತಿ ಮುಂದುವರಿದರೆ ಮಕ್ಕಳ ಶಿಕ್ಷಣದ ಗತಿಯೇನು ಎಂದು ಪ್ರಶ್ನಿಸಿ, ಸ್ಥಳಿಯರು ಹಾಗೂ ವಿದ್ಯಾರ್ಥಿಗಳೊಂದಿಗೆ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದರು. ಈ ವೇಳೆ ಕೆಲಕಾಲ ಮಾತಿನ ಚಕಮಕಿ ನಡೆಯಿತು.
ಘಟನಾ ಸ್ಥಳಕ್ಕೆ ಆಗಮಿಸಿದ ಹುಲಿಯೂರುದುರ್ಗ ಠಾಣೆಯ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿ, ತಕ್ಷಣವೇ ಪರ್ಯಾಯ ಬಸ್ ವ್ಯವಸ್ಥೆ ಕಲ್ಪಿಸುವ ಮೂಲಕ ವಿದ್ಯಾರ್ಥಿಗಳನ್ನು ಕಾಲೇಜಿಗೆ ಕಳುಹಿಸಿಕೊಟ್ಟರು.
ನಿತ್ಯದ ಕಿರಿಕಿರಿ, ಹೆಚ್ಚಿದ ಗೊಂದಲ:
ಪ್ರತಿ ಮಂಗಳವಾರ, ಶುಕ್ರವಾರ ಹಾಗೂ ರಜಾ ದಿನಗಳಲ್ಲಿ ಈ ಮಾರ್ಗದಲ್ಲಿ ಸಂಚರಿಸುವ ಬಸ್ಸುಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಿರುತ್ತದೆ. ಇದರಿಂದ ನಿತ್ಯ ಪ್ರಯಾಣಿಸುವವರು, ಪುರುಷರು ಹಾಗೂ ಸಾರಿಗೆ ಸಿಬ್ಬಂದಿ (ಚಾಲಕ-ನಿರ್ವಾಹಕರು) ನಡುವೆ ವಾಗ್ವಾದಗಳು ನಡೆದು ಪೊಲೀಸ್ ಠಾಣೆ ಮೆಟ್ಟಿಲೇರಿದ ನಿದರ್ಶನಗಳೂ ಇವೆ. ಆದ್ದರಿಂದ ಸಂಬಂಧಪಟ್ಟ ಕೆಎಸ್ಆರ್ಟಿಸಿ ಉನ್ನತಾಧಿಕಾರಿಗಳು ಕೂಡಲೇ ಇತ್ತ ಗಮನಹರಿಸಿ, ಗೌಡಗೆರೆ ದೇವಾಲಯಕ್ಕೆ ತೆರಳುವ ಭಕ್ತರಿಗೆ ಪ್ರತ್ಯೇಕ ಬಸ್ ವ್ಯವಸ್ಥೆ ಕಲ್ಪಿಸಬೇಕು ಹಾಗೂ ಕಾಲೇಜು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹೆಚ್ಚುವರಿ ಟ್ರಿಪ್ಗಳನ್ನು ಕಾರ್ಯಾಚರಣೆಗೊಳಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.