ರಾಜ್ಯ

ಭಾಲಚಂದ್ರ ಜಯಶೆಟ್ಟಿ ಕೃತಿಗೆ ಶಿವರಾತ್ರೀಶ್ವರ ಪ್ರಶಸ್ತಿ

ಕಲಬುರಗಿ: ಮೈಸೂರಿನ ಜಗದ್ಗುರು ಶ್ರೀ ಶಿವರಾತ್ರೀಶ್ವರ ಧಾರ್ಮಿಕ ದತ್ತಿಯ 2024ನೇ ಸಾಲಿನ ಶಿವರಾತ್ರೀಶ್ವರ ಪ್ರಶಸ್ತಿಗೆ ಕಲ್ಯಾಣ ಕರ್ನಾಟಕದ ಸಾಹಿತಿ ಭಾಲಚಂದ್ರ ಜಯಶೆಟ್ಟಿ ವಿರಚಿತ ಆಧ್ಯಾತ್ಮ ಕ್ರಾಂತಿವೀರ ಮಹಾತ್ಮ ಶ್ರೀ ಬಸವೇಶ್ವರ ಕೇ ವಚನ್​ ಎಂಬ ಹಿಂದಿ ಕೃತಿಯು ಆಯ್ಕೆಯಾಗಿದೆ ಎಂದು ಜೆಎಸ್​ಎಸ್​ ಮಹಾವಿದ್ಯಾಪಿಠದ ಪ್ರಕಟಣ ವಿಭಾಗದ ನಿರ್ದೇಶಕ ಎಂ.ಮಲ್ಲಿಕಾರ್ಜುನ ತಿಳಿಸಿದ್ದಾರೆ.
ನೇಕಾರ ಸಮಾಜದ ಬಸವಕಲ್ಯಾಣ ತಾಲೂಕಿನ ರಾಜೇಶ್ವರದವರಾದ ಭಾಲಚಂದ್ರ ಜಯಶೆಟ್ಟಿ ಅವರ ಕಾರ್ಯಕ್ಕೆ ಮರಣೋತ್ತರವಾಗಿ ಈ ಪ್ರಶಸ್ತಿ ನೀಡಲಾಗಿದೆ. 25 ಸಾವಿರ ರೂ. ನಗದು ಪುರಸ್ಕಾರ, ಸ್ವಸ್ತಿವಾಚನ, ಪ್ರಶಸ್ತಿ ಫಲಕ ಪ್ರಶಸ್ತಿ ಒಳಗೊಂಡಿದೆ. ಮೈಸೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಹೇಳಿದ್ದಾರೆ.
ಪರಮಪೂಜ್ಯ ಜಗದ್ಗುರು ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳು 1986ರಲ್ಲಿ ಸ್ಥಾಪಿಸಿದ ಜಗದ್ಗುರು ಶಿವರಾತ್ರೀಶ್ವರ ಧಾರ್ಮಿಕ ದತ್ತಿಯ ಆಶ್ರಯದಲ್ಲಿ ವೀರಶೈವ/ಲಿಂಗಾಯಿತ ಧರ್ಮ, ಸಾಹಿತ್ಯ, ಇತಿಹಾಸ, ಕಲೆ ಮತ್ತು ಸಂಸತಿಗೆ ಸಂಬಂಧಿಸಿದಂತೆ ಪ್ರಕಟವಾಗುವ ಉತ್ತಮ ಕೃತಿಗಳಿಗೆ ಪ್ರತಿವರ್ಷವೂ ಈ ಪ್ರಶಸ್ತಿ ನೀಡಲಾಗುತ್ತಿದೆ. ಈವರೆಗೆ 37 ಕೃತಿಗಳಿಗೆ ಈ ಪ್ರಶಸ್ತಿ ನೀಡಿ ಪುರಸ್ಕರಿಸಲಾಗಿದೆ ಎಂದು ವಿವರಿಸಿದ್ದಾರೆ.