Bhajans and music are essential for a peaceful life.
ಎಂ.ಎನ್.ಕೋಟೆ: ಎಷ್ಟೇ ಶ್ರೀಮಂತರಾದರು ಶಾಂತಿ, ನೆಮ್ಮದಿ ಇಲ್ಲದಿದ್ದರೆ ಬದುಕು ಶೂನ್ಯ. ನೆಮ್ಮದಿ ಕಾಣಬೇಕೆಂದರೆ ಭಜನೆ, ಸಂಗೀತ ಅತಿಮುಖ್ಯ ಎಂದು ಬೆಟ್ಟದಹಳ್ಳಿ ಗವಿಮಠ ಅಧ್ಯಕ್ಷ ಶ್ರೀ ಚಂದ್ರಶೇಖರ ಸ್ವಾಮೀಜಿ ತಿಳಿಸಿದರು.
ಗುಬ್ಬಿ ತಾಲೂಕಿನ ಬೆಟ್ಟದಹಳ್ಳಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶ್ರೀ ಶಿವಯೋಗಿಗಳ ಸಂಸ್ಮರಣೋತ್ಸವ, ರಾಜ್ಯಮಟ್ಟದ ಭಜನಾ ಮೇಳ ಹಾಗೂ ಸಂಗೀತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕೇವಲ ಹಣ ಸಂಪಾದನೆ ಮಾಡಿದರೆ ಸಾಲದು, ಮಾನಸಿಕ ನೆಮ್ಮದಿ ಬೇಕು. ಇದಕ್ಕೆ ಭಜನೆ ಹಾಗೂ ಸಂಗೀತ ಮುಖ್ಯ ಎಂದರು.
ಶ್ರೀ ಮಲ್ಲಿಕಾರ್ಜುನ ಶಿವಯೋಗಿಗಳ ಮನದಾಸೆಯಂತೆ ಅಂದಿನಿಂದ ಇಂದಿನವರೆಗೂ ಶ್ರೀಮಠದಲ್ಲಿ ಭಜನೆ, ಬಸವಾದಿ ತತ್ವ ಚಿಂತನೆ ಮುಂತಾದ ಕಾರ್ಯಕ್ರಮಗಳಿಂದ ಭಕ್ತರು ಶಾಂತಿ ನೆಮ್ಮದಿ ಹುಡುಕುವ ನಿಟ್ಟಿನಲ್ಲಿ ಶ್ರೀ ಗವಿಮಠದ ಕಡೆ ಹೆಜ್ಜೆ ಹಾಕುತ್ತಿದ್ದಾರೆ ಎಂದರು.
ಮಾನವ ಸಂಪನ್ಮೂಲ ಅಭಿವೃದ್ಧಿ ಸಲಹೆಗಾರ ಹಾಗೂ ಹೈಕೋರ್ಟ್ ವಕೀಲ ಡಾ.ಕುಮಾರಸ್ವಾಮಿ ಮಾತನಾಡಿ, ಮಠಮಾನ್ಯಗಳನ್ನು ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ನಾನು ಸಹ ಶ್ರೀಮಠಕ್ಕೆ ಸುಮಾರು ವರ್ಷಗಳಿಂದ ಬರುತ್ತಿದ್ದೇನೆ. ಶ್ರೀಮಠಕ್ಕೆ ನನ್ನ ಕೈಲಾದ ಸಹಾಯವನ್ನು ಮಾಡುತ್ತೀದ್ದೇನೆ. ಬೆಟ್ಟದಹಳ್ಳಿ ಶ್ರೀಚಂದ್ರಶೇಖರ ಸ್ವಾಮೀಜಿ ಶ್ರೀಮಠದಲ್ಲಿ ಸಾಕಷ್ಟು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದು, ಸಿದ್ದರಾಮ ಜಯಂತಿಯನ್ನು ತಾಲೂಕಿನಲ್ಲಿ ಯಶಸ್ವಿಯಾಗಿ ನಡಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದರು.
ಶೀಡ್ಲೆಕೋಣ ಮಠದ ಶ್ರೀ ಸಂಜಯಕುಮಾರ ಸ್ವಾಮೀಜಿ ಮಾತನಾಡಿ, ಇಂದಿನ ಒತ್ತಡದ ಜೀವನದಲ್ಲಿ ಮನುಷ್ಯನಿಗೆ ಮನಶಾಂತಿ ಇಲ್ಲವಾಗಿದೆ. ಹಿಂದಿನ ಕಾಲದಲ್ಲಿ ಸಂಜೆ ವೇಳೆ ಪ್ರತಿ ಮನೆಯಲ್ಲೂ ಭಜನೆ ನಡೆಯುತ್ತಿತ್ತು. ಇಂದು ಭಜನೆ ಮಾಯವಾಗಿ ಟಿವಿ ಬೇತಾಳ ಕಾಡುತ್ತಿದೆ. ಮೊಬೈಲ್ಗಳು ಪುಸ್ತಕ ಓದುವ ಅಭಿರುಚಿ ಕೊಲ್ಲುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಗೊಲ್ಲಹಳ್ಳಿ ಮಠದ ಶ್ರೀ ವಿಭಾವ ವಿದ್ಯಾಶಂಕರದೇಶೀಕೇಂದ್ರ ಸ್ವಾಮೀಜಿ, ಮಾಗಡಿ ತಾಲೂಕಿನ ರುದ್ರಮುನೇಶ್ವರ ಮಠದ ಶ್ರೀ ಚಂದ್ರಶೇಖರ ಸ್ವಾಮೀಜಿ, ಮಾಡಾಳು ಮಠದ ಶ್ರೀ ರುದ್ರಮುನಿ ಸ್ವಾಮೀಜಿ, ಬಸವಕಲ್ಯಾಣ ಮಠದ ಗುರುಲಿಂಗ ಶಿವಚಾರ್ಯ ಸ್ವಾಮೀಜಿ, ತಾಲೂಕು ಶರಣ ಪರಿಷತ್ ಅಧ್ಯಕ್ಷ ಪಾಲನೇತ್ರಪ್ಪ, ಕಾರ್ಯದರ್ಶಿ ನಿರಂಜನಮೂರ್ತಿ , ಮುಖಂಡರಾದ ಸಿದ್ದರಾಮಣ್ಣ, ಬಸವರಾಜು, ನಿರಂಜನಮೂರ್ತಿ ಇದ್ದರು.