ಅರಕಲಗೂಡು ನಿವೇದಿತಾ ವಿದ್ಯಾ ಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಗೀತಾ ಜಯಂತಿ ಆಚರಿಸಲಾಯಿತು. ಬಿ.ಎಂ. ರಾಗಿಣಿ, ರಂಜಿತಾ, ಜ್ಞಾನೇಶ್ ಇತರರಿದ್ದರು.
ಅರಕಲಗೂಡು: ಮಾನವತ್ವದ ಸಂದೇಶ ಸಾರುವ ಭಗವದ್ಗೀತೆ ಜನ ಸಮುದಾಯದ ನಡುವೆ ಸಾಮರಸ್ಯ ಬೆಸೆಯುತ್ತಿದೆ ಎಂದು ಮುಖ ಶಿಕ್ಷಕಿ ಬಿ.ಎಂ.ರಾಗಿಣಿ ಅಭಿಪ್ರಾಯಪಟ್ಟರು.
ಪಟ್ಟಣದ ನಿವೇದಿತಾ ವಿದ್ಯಾ ಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಗೀತಾ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಗೀತೆಯಲ್ಲಿ ಹಲವು ಪಾತ್ರಗಳಿದ್ದು, ಧರ್ಮ ಮತ್ತು ಅಧರ್ಮಗಳ ನಡುವಿನ ಪರಿಚಯ ಮಾಡಿಕೊಡುತ್ತದೆ. ಜತೆಗೆ ಅಂತಿಮವಾಗಿ ಧರ್ಮಕ್ಕೆ ಗೆಲುವು ಎಂಬುದನ್ನು ಸಾರಿ ಹೇಳುತ್ತದೆ. ಹೀಗಾಗಿ ಯಾವುದೇ ಒಂದು ಜಾತಿ, ಸಮುದಾಯ, ಧರ್ಮಕ್ಕೆ ಸೀಮಿತವಲ್ಲ. ಇಡೀ ಮನುಕುಲಕ್ಕೆ ಹೇಳಿರುವ ಸಂದೇಶವಾಗಿದ್ದು, ಇದು ಜೀವನ ಮೌಲ್ಯಗಳ ದ್ಯೋತಕವಾಗಿದೆ ಎಂದರು.
ಶಿಕ್ಷಕಿ ರಂಜಿತ ಮಾತನಾಡಿ, ಗೀತೆಯಲ್ಲಿ ಬರುವ ಕೃಷ್ಣಾರ್ಜುನರ ಸಂವಾದದಲ್ಲಿ ಪ್ರಸ್ತುತ ನಮ್ಮ ಜೀವನಕ್ಕೆ ಅಳವಡಿಸಿಕೊಳ್ಳಬೇಕಾದ ಅಂಶಗಳಿವೆ. ಧರ್ಮದ ರಕ್ಷಣೆಯಿಂದ ಮನುಕುಲದ ಉದ್ಧಾರ ಸಾಧ್ಯ ಎಂಬುದನ್ನು ಒತ್ತಿ ಹೇಳಲಾಗಿದೆ. ಗೀತೆಯಲ್ಲಿ ಬರುವ 18 ಅಧ್ಯಾಯಗಳನ್ನೂ ಕೇವಲ ಓದುವುದರಿಂದ ಯಾವುದೇ ಪ್ರಯೋಜನವಾಗದು. ಅದನ್ನು ಅಧ್ಯಯನ ಮಾಡಿ ಮನನ ಮಾಡಿಕೊಂಡು ಜೀವನದಲ್ಲಿ ಒಳ್ಳೆಯದನ್ನು ಅಳವಡಿಸಿಕೊಂಡಾಗ ಮಾತ್ರ ಗೀತಾ ಜಯಂತಿ ಕಾರ್ಯಕ್ರಮ ಮಾಡಿದ್ದಕ್ಕೆ ಸಾರ್ಥಕತೆ ಬರಲಿದೆ ಎಂದು ಅಭಿಪ್ರಾಯಪಟ್ಟರು.
ವಿದ್ಯಾರ್ಥಿಗಳು ಭಗವದ್ಗೀತೆಯ ಆಯ್ದ ಶ್ಲೋಕಗಳನ್ನು ಸಾಮೂಹಿಕವಾಗಿ ಪಠಣ ಮಾಡಿದರು. ಭಗವದ್ಗೀತೆಯ ಪುಸ್ತಕಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಶಿಕ್ಷಕ ಜ್ಞಾನೇಶ್, ಬೇಬಿ, ಮೈತ್ರಿ, ಶ್ವೇತಾ, ಚಿತ್ರಲೇಖ, ಕೋಮಲಾ, ಶಿಲ್ಪಾ, ಆಯಿಷಾ ಇತರರು ಇದ್ದರು.